Bible Versions
Bible Books

1 Samuel 29 (ERVKN) Easy to Read Version - Kannadam

1 ಫಿಲಿಷ್ಟಿಯರ ಸೈನಿಕರೆಲ್ಲಾ ಅಫೇಕಿನಲ್ಲಿ ಒಟ್ಟುಗೂಡಿದರು. ಇಸ್ರೇಲರು ಇಜ್ರೇಲ್ ಬಳಿಯಿರುವ ಚಿಲುಮೆಯ ಹತ್ತಿರ ಪಾಳೆಯಮಾಡಿಕೊಂಡರು.
2 ಫಿಲಿಷ್ಟಿಯರ ಅಧಿಪತಿಗಳು ನೂರು ಜನರ ಗುಂಪುಗಳಾಗಿಯೂ ಒಂದು ಸಾವಿರ ಜನರ ಗುಂಪುಗಳಾಗಿಯೂ ಬರುತ್ತಿದ್ದರು. ದಾವೀದನು ಮತ್ತು ಅವನ ಜನರು ಆಕೀಷನ ಹಿಂದೆ ಬರುತ್ತಿದ್ದರು.
3 ಫಿಲಿಷ್ಟಿಯರ ಅಧಿಪತಿಗಳು, “ಈ ಇಬ್ರಿಯರು ಇಲ್ಲಿ ಮಾಡುತ್ತಿರುವುದೇನು?” ಎಂದು ಆಕೀಷನನ್ನು ಕೇಳಿದರು. ಆಕೀಷನು ಫಿಲಿಷ್ಟಿಯರ ಸೇನಾಧಿಪತಿಗಳಿಗೆ, “ಇವನು ದಾವೀದ. ದಾವೀದನು ಸೌಲನ ಅಧಿಕಾರಿಗಳಲ್ಲಿ ಒಬ್ಬನು. ದಾವೀದನು ಬಹಳ ಕಾಲದಿಂದ ನನ್ನೊಡನೆ ಇದ್ದಾನೆ. ದಾವೀದನು ಸೌಲನನ್ನು ತೊರೆದು ನನ್ನ ಬಳಿಗೆ ಬಂದಾಗಿನಿಂದ ನಾನು ಅವನಲ್ಲಿ ಯಾವ ತಪ್ಪುನ್ನೂ ಗುರುತಿಸಿಲ್ಲ” ಎಂದನು.
4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಬಹಳ ಕೋಪಗೊಂಡು, “ದಾವೀದನನ್ನು ಹಿಂದಕ್ಕೆ ಕಳುಹಿಸು! ನೀನು ಕೊಟ್ಟಿರುವ ನಗರಕ್ಕೆ ದಾವೀದನು ಹಿಂದಿರುಗಿ ಹೋಗಲೇಬೇಕು. ಅವನು ನಮ್ಮೊಡನೆ ಯುದ್ಧಕ್ಕೆ ಬರುವಂತಿಲ್ಲ. ಅವನು ನಮ್ಮ ಜೊತೆಯಲ್ಲಿದ್ದರೆ, ಆಗ ನಮ್ಮ ಪಾಳೆಯದಲ್ಲಿ ಒಬ್ಬ ಶತ್ರುವಿದ್ದಂತಾಗುತ್ತದೆ. ಅವನು ನಮ್ಮ ಜನರನ್ನು ಕೊಲ್ಲುವುದರ ಮೂಲಕ ತನ್ನ ರಾಜನ ಮೆಚ್ಚಿಕೆಯನ್ನು ಗಳಿಸುತ್ತಾನೆ.
5 ದಾವೀದನೆಂಬ ವ್ಯಕ್ತಿಯನ್ನು ಕುರಿತು, ಇಸ್ರೇಲರು ಕುಣಿಯುತ್ತಾ ಹಾಡುವ ಹಾಡು ಹೀಗಿದೆ: ಸೌಲನು ಸಾವಿರಗಟ್ಟಲೆ ಶತ್ರುಗಳನ್ನು ಕೊಂದನು. ದಾವೀದನು ಲಕ್ಷಾಂತರಗಟ್ಟಲೆ ಶತ್ರುಗಳನ್ನು ಕೊಂದನು!” ಎಂದು ಹೇಳಿದರು.
6 ಆದ್ದರಿಂದ ಆಕೀಷನು ದಾವೀದನನ್ನು ಕರೆದು, “ಯೆಹೋವನಾಣೆ, ನೀನು ನನಗೆ ಯಥಾರ್ಥನಾಗಿರುವೆ. ನೀನು ನನ್ನ ಸೈನ್ಯದಲ್ಲಿ ಸೇವೆ ಮಾಡುವುದೂ ನನಗೆ ಇಷ್ಟ. ನೀನು ನನ್ನ ಹತ್ತಿರಕ್ಕೆ ಬಂದಾಗಿನಿಂದ ನಾನು ನಿನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲ. ನೀನು ಒಳ್ಳೆಯವನೆಂದು ಫಿಲಿಷ್ಟಿಯರ ಅಧಿಪತಿಗಳು ಸಹ ಯೋಚಿಸಿದ್ದಾರೆ.
7 ಆದುದರಿಂದ ಸಮಾಧಾನದಿಂದ ಹಿಂದಿರುಗಿ ಹೋಗು. ಫಿಲಿಷ್ಟಿಯರ ಅಧಿಪತಿಗಳ ವಿರುದ್ಧ ಏನನ್ನೂ ಮಾಡಬೇಡ” ಎಂದು ಹೇಳಿದನು.
8 ದಾವೀದನು, “ನಾನು ಮಾಡಿರುವ ತಪ್ಪಾದರೂ ಏನು? ನಾನು ನಿನ್ನ ಹತ್ತಿರಕ್ಕೆ ಬಂದಾಗಿನಿಂದ ಈಗಿನವರೆಗೆ ನನ್ನಲ್ಲಿ ನೀನು ಗುರುತಿಸಿರುವ ದುಷ್ಟತನವಾದರೂ ಏನು? ರಾಜನಾದ ನನ್ನ ಒಡೆಯನ ಶತ್ರುಗಳ ವಿರುದ್ಧ ಹೋರಾಡಲು ನನ್ನನ್ನು ಬಿಡುವುದಿಲ್ಲವೇಕೆ?” ಎಂದು ಹೇಳಿದನು.
9 ಆಕೀಷನು, “ನೀನು ಒಳ್ಳೆಯವನೆಂದು ನಾನು ನಂಬುತ್ತೇನೆ. ನೀನು ದೇವದೂತನಂತಿರುವೆ. ಆದರೆ ಫಿಲಿಷ್ಟಿಯ ಸೇನಾಧಿಪತಿಗಳು, ‘ದಾವೀದನು ನಮ್ಮ ಜೊತೆ ಯುದ್ಧಕ್ಕೆ ಬರುವಂತಿಲ್ಲ’ ಎಂದು ಈಗಲೂ ಹೇಳುತ್ತಿದ್ದಾರೆ.
10 ನೀನು ಮತ್ತು ನಿನ್ನ ಜನರು ಮುಂಜಾನೆಯಲ್ಲಿಯೇ ಹಿಂದಿರುಗಿ ಹೋಗಿ. ನಾನು ನಿನಗೆ ಕೊಟ್ಟಿರುವ ನಗರಕ್ಕೆ ಹಿಂದಿರುಗು. ಅಧಿಪತಿಗಳು ನಿನ್ನ ಬಗ್ಗೆ ಹೇಳುತ್ತಿರುವ ಕೆಟ್ಟ ಮಾತುಗಳಿಗೆ ಗಮನ ನೀಡಬೇಡ. ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ಸೂರ್ಯನು ಮೇಲೇರುವಷ್ಟರಲ್ಲಿ ನೀನು ನಮ್ಮನ್ನು ಬಿಟ್ಟುಹೋಗು” ಎಂದು ಹೇಳಿದನು.
11 ಆದ್ದರಿಂದ ದಾವೀದನು ಮತ್ತು ಅವನ ಜನರು ಮಾರನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿ ಹೋದರು. ಫಿಲಿಷ್ಟಿಯರು ಇಜ್ರೇಲಿಗೆ ಹೋದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×