Bible Versions
Bible Books

2 Thessalonians 1 (ERVKN) Easy to Read Version - Kannadam

1 ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲನು, ಸಿಲ್ವಾನನು ಮತ್ತು ತಿಮೊಥೆಯನು ಬರೆಯುವ ಪತ್ರ.
2 ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮಗಿರಲಿ.
3 ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಿಮ್ಮ ನಂಬಿಕೆಯು ಮತ್ತು ಇತರರ ಮೇಲೆ ನಿಮಗಿರುವ ಪ್ರೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ವಿಷಯದಲ್ಲಿ ಸ್ತೋತ್ರ ಸಲ್ಲಿಸುವುದು ಯೋಗ್ಯವಾದ ಕಾರ್ಯವಾಗಿದೆ.
4 ದೇವರ ಇತರ ಸಭೆಗಳಲ್ಲಿ ನಿಮ್ಮನ್ನು ಕುರಿತು ಹೆಚ್ಚಳಪಡುತ್ತೇವೆ. ನಿಮ್ಮಲ್ಲಿರುವ ನಂಬಿಕೆ ಮತ್ತು ಸಹನೆಗಳನ್ನು ಕುರಿತು ಇತರ ಸಭೆಗಳಿಗೆ ಹೇಳುತ್ತೇವೆ. ನೀವು ಹಿಂಸೆಗೆ ಒಳಗಾಗಿದ್ದರೂ ಅನೇಕ ಸಂಕಟಗಳನ್ನು ಅನುಭವಿಸುತ್ತಿದ್ದರೂ ನಂಬಿಕೆಯಿಂದಲೂ ಸಹನೆಯಿಂದಲೂ ಜೀವಿಸುತ್ತಿದ್ದೀರಿ.
5 ದೇವರು ನ್ಯಾಯವಾದ ತೀರ್ಪನ್ನು ನೀಡುತ್ತಾನೆಂಬುದಕ್ಕೆ ಅದೇ ಪ್ರಮಾಣವಾಗಿದೆ. ದೇವರ ರಾಜ್ಯಕ್ಕೆ ನೀವು ಯೋಗ್ಯರಾಗಿರಬೇಕೆಂಬುದು ಆತನ ಅಪೇಕ್ಷೆ. ನೀವು ಹಿಂಸೆಪಡುತ್ತಿರುವುದು ರಾಜ್ಯಕ್ಕೋಸ್ಕರವೇ.
6 ದೇವರು ಯೋಗ್ಯವಾದುದ್ದನ್ನೇ ಮಾಡುತ್ತಾನೆ. ನಿಮಗೆ ತೊಂದರೆ ಕೊಡುವ ಜನರಿಗೆ ದೇವರು ತೊಂದರೆ ಕೊಡುತ್ತಾನೆ.
7 ತೊಂದರೆಗೆ ಒಳಗಾಗಿರುವ ನಿಮಗೆ ದೇವರು ಶಾಂತಿಯನ್ನು ನೀಡುತ್ತಾನೆ. ಆತನು ನಮಗೂ ಶಾಂತಿಯನ್ನು ನೀಡುವನು. ಪ್ರಭುವಾದ ಯೇಸು ತನ್ನ ಶಕ್ತಿಶಾಲಿಗಳಾದ ದೂತರೊಂದಿಗೆ ಪರಲೋಕದಿಂದ ಪ್ರತ್ಯಕ್ಷನಾದಾಗ ಶಾಂತಿಯನ್ನು ದಯಪಾಲಿಸುತ್ತಾನೆ.
8 ಪ್ರಭುಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ.
9 ಅವರಿಗೆ ನಿತ್ಯವಾದ ದಂಡನೆಯಾಗುವುದು. ಪ್ರಭುವಿನೊಂದಿಗಿರಲು ಅವರಿಗೆ ಅವಕಾಶ ದೊರೆಯುವುದಿಲ್ಲ. ಆತನು ತನ್ನ ಮಹಾಶಕ್ತಿಯಿಂದ ಅವರನ್ನು ದೂರವಿರಿಸುತ್ತಾನೆ.
10 ಪ್ರಭುವಾದ ಯೇಸು ಪ್ರತ್ಯಕ್ಷನಾದಾಗ ಇದು ಸಂಭವಿಸುತ್ತದೆ. ಆತನು ತನಗೆ ದೊರೆಯ ಬೇಕಾದ ವೈಭವವನ್ನು ಸ್ವೀಕರಿಸಲು ತನ್ನ ಪರಿಶುದ್ಧ ಜನರೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆತನನ್ನು ನಂಬಿದ ಜನರೆಲ್ಲರೂ ಆತನನ್ನು ಕಂಡು ಆಶ್ಚರ್ಯಚಕಿತರಾಗುವರು. ನಾವು ಹೇಳಿದ್ದನ್ನು ನಂಬಿದ ನೀವೆಲ್ಲರೂ ವಿಶ್ವಾಸಿಗಳ ಸಮೂಹದಲ್ಲಿರುವಿರಿ.
11 ಆದಕಾರಣವೇ ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇವೆ. ಯಾವ ಒಳ್ಳೆಯ ಮಾರ್ಗದಲ್ಲಿ ನೀವು ಜೀವಿಸಬೇಕೆಂದು ದೇವರು ನಿಮ್ಮನ್ನು ಕರೆದನೋ, ಮಾರ್ಗದಲ್ಲೇ ನೀವು ಜೀವಿಸಲಿಕ್ಕಾಗುವಂತೆ ಪ್ರಾರ್ಥಿಸುತ್ತೇವೆ. ನಿಮ್ಮಲ್ಲಿರುವ ಒಳ್ಳೆಯ ತನವು ಒಳ್ಳೆಯದನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮಲ್ಲಿರುವ ನಂಬಿಕೆಯು ನಿಮ್ಮಿಂದ ಕಾರ್ಯ ಸಾಧಿಸುತ್ತದೆ. ಕಾರ್ಯಗಳನ್ನು ನೀವು ಹೆಚ್ಚುಹೆಚ್ಚಾಗಿ ಮಾಡಲು ದೇವರು ತನ್ನ ಶಕ್ತಿಯಿಂದ ನಿಮಗೆ ಸಹಾಯ ಮಾಡಲೆಂದು ಬೇಡಿಕೊಳ್ಳುತ್ತೇವೆ.
12 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದಲೆಂದು ಮತ್ತು ನೀವೂ ಆತನಲ್ಲಿ ಮಹಿಮೆ ಹೊಂದಲೆಂದು ನಾವು ಪ್ರಾರ್ಥಿಸುತ್ತೇವೆ. ಮಹಿಮೆಯು ನಮ್ಮ ದೇವರ ಮತ್ತು ಪ್ರಭು ಯೇಸು ಕ್ರಿಸ್ತನ ಕೃಪೆಯಿಂದ ಬರುತ್ತದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×