Bible Versions
Bible Books

Job 28 (ERVKN) Easy to Read Version - Kannadam

1 “ಬೆಳ್ಳಿಯ ಗಣಿಗಳು ಇವೆ; ಚಿನ್ನವನ್ನು ಶುದ್ಧೀಕರಿಸುವ ಸ್ಥಳಗಳೂ ಇವೆ.
2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.
3 ಕಾರ್ಮಿಕರು ದೀಪಗಳನ್ನು ತೆಗೆದುಕೊಂಡು ಆಳವಾದ ಗುಹೆಗಳಲ್ಲಿಯೂ ಕಾರ್ಗತ್ತಲೆಯಲ್ಲಿಯೂ ಕಲ್ಲುಗಳಿಗಾಗಿ ಹುಡುಕುವರು.
4 ಲೋಹದ ಅದುರುಗಳು ಸಿಕ್ಕುವ ಸ್ಥಳಗಳಲ್ಲಿ ಅಗೆಯುತ್ತಾ ಹೋಗುವರು; ಜನರು ವಾಸವಾಗಿರುವುದಕ್ಕಿಂತ ಆಳವಾದ ಸ್ಥಳಕ್ಕೆ ಇಳಿದು ಹೋಗುವರು; ಆಳವಾದ ಸ್ಥಳಗಳನ್ನು ಜನರು ಹಿಂದೆಂದೂ ನೋಡಿಯೇ ಇಲ್ಲ. ಅವರು ಹಗ್ಗಗಳನ್ನು ಕಟ್ಟಿಕೊಂಡು ಜನರಿಗೆ ಬಹುದೂರವಾದ ಆಳವಾದ ಗಣಿಗಳಲ್ಲಿ ನೇತಾಡುತ್ತಾ ದುಡಿಯುವರು.
5 ಭೂಮಿಯ ಮೇಲ್ಭಾಗದಿಂದ ಆಹಾರವು ಬೆಳೆಯುತ್ತದೆ. ಭೂಮಿಯ ಕೆಳಭಾಗವಾದರೊ ಬೆಂಕಿಯಿಂದ ಕರಗಿ ಹೋದಂತಿರುವುದು.
6 ಭೂಮಿಯ ಕೆಳಭಾಗದಲ್ಲಿ ಇಂದ್ರನೀಲ ಮಣಿಗಳೂ ಚಿನ್ನದ ಅದಿರೂ ಸಿಕ್ಕುತ್ತವೆ.
7 ಕಾಡುಪಕ್ಷಿಗಳಿಗೆ ಗಣಿಯ ಮಾರ್ಗವು ಗೊತ್ತಿಲ್ಲ. ಯಾವ ಗಿಡುಗವೂ ಕತ್ತಲೆಯ ಮಾರ್ಗಗಳನ್ನು ನೋಡಿಲ್ಲ.
8 ಕಾಡುಪ್ರಾಣಿಗಳು ಮಾರ್ಗಗಳಲ್ಲಿ ನಡೆದಿಲ್ಲ. ಸಿಂಹಗಳು ಮಾರ್ಗದ ಮೇಲೆ ಹಾದುಹೋಗಿಲ್ಲ.
9 ಕಾರ್ಮಿಕರು ಅತ್ಯಂತ ಗಟ್ಟಿಯಾದ ಬಂಡೆಗಳನ್ನು ಅಗೆಯುವರು. ಅವರು ಬೆಟ್ಟಗಳನ್ನು ಹೊಡೆದು ನೆಲಸಮ ಮಾಡುವರು.
10 ಕಾರ್ಮಿಕರು ಬಂಡೆಗಳಲ್ಲಿ ಸುರಂಗಗಳನ್ನು ಕೊರೆದು ಬಂಡೆಯ ಭಂಡಾರಗಳನ್ನು ನೋಡುವರು.
11 ಕಾರ್ಮಿಕರು ಹರಿಯುವ ನೀರನ್ನು ತಡೆದು ಜಲಾಶಯವನ್ನು ಕಟ್ಟುವರು; ಮರೆಯಾಗಿರುವ ವಸ್ತುಗಳನ್ನು ಬೆಳಕಿಗೆ ತರುವರು.
12 “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ? ವಿವೇಕವು ದೊರೆಯುವ ಸ್ಥಳವೆಲ್ಲಿ?
13 ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ. ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
14 “ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ. ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
15 ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
16 ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ ಇಂದ್ರನೀಲ ಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
17 ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
18 ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ. ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
19 ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ. ಶುದ್ಧ ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.
20 “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು? ವಿವೇಕವು ಎಲ್ಲಿ ದೊರಕುವುದು?
21 ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ. ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
22 ನಾಶಲೋಕವೂ ಮೃತ್ಯುವೂ, ‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.
23 ಜ್ಞಾನದ ಮಾರ್ಗವನ್ನು ತಿಳಿದಿರುವನು ದೇವರೊಬ್ಬನೇ. ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
24 ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
25 ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
27 ಜ್ಞಾನವನ್ನು ಕಂಡುಕೊಂಡನು; ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು. ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
28 ಇದಲ್ಲದೆ ದೇವರು ಮನುಷ್ಯರಿಗೆ, “ಯೆಹೋವನಲ್ಲಿ ಭಯಭಕ್ತಿಯಿಂದರಿರುವುದೇ ಜ್ಞಾನ. ದುಷ್ಟತನವನ್ನು ತೊರೆದು ಬಿಡುವುದೇ ವಿವೇಕ” ಎಂದು ಹೇಳಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×