Bible Versions
Bible Books

Numbers 20:18 (ERVKN) Easy to Read Version - Kannadam

1 ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು.
2 ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು.
3 ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು.
4 ಯೆಹೋವನ ಜನರನ್ನು ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ?
5 ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು.
6 ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು.
7 ಯೆಹೋವನು ಮೋಶೆಯೊಡನೆ ಮಾತಾಡಿ,
8 “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು.
9 ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು.
10 ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ,
11 ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು.
12 ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.
13 ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ.
14 ಮೋಶೆಯು ಕಾದೇಶಿನಲ್ಲಿದ್ದಾಗ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಿಮ್ಮ ಸಂಬಂಧಿಕರವಾದ ಇಸ್ರೇಲರು ಕೇಳಿಕೊಳ್ಳುವುದೇನೆಂದರೆ: ನಮಗೆ ಸಂಭವಿಸಿದ ಎಲ್ಲಾ ಕಷ್ಟಗಳು ನಿಮಗೆ ಗೊತ್ತಿದೆ.
15 ನಮ್ಮ ಪೂರ್ವಿಕರು ಈಜಿಪ್ಟ್ ದೇಶಕ್ಕೆ ಇಳಿದುಹೋದದ್ದೂ ನಾವು ಅಲ್ಲಿ ಬಹುಕಾಲ ವಾಸವಾಗಿದ್ದದ್ದೂ ಈಜಿಪ್ಟಿನವರು ನಮಗೂ ನಮ್ಮ ಪೂರ್ವಿಕರಿಗೂ ಕ್ರೂರರಾಗಿದ್ದದ್ದೂ ನಿಮಗೆ ತಿಳಿದದೆ.
16 ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ನೀವು ಬಲ್ಲಿರಿ. “ಈಗ ನಾವು ನಿಮ್ಮ ಪ್ರದೇಶದ ಗಡಿಯಲ್ಲಿರುವ ಕಾದೇಶೆಂಬ ಊರಲ್ಲಿದ್ದೇವೆ.
17 ನಿಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿಯಾಗಲಿ ದ್ರಾಕ್ಷಿತೋಟಗಳಲ್ಲಿಯಾಗಲಿ ಹಾದು ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು.
18 ಆದರೆ ಎದೋಮಿನ ಅರಸನು, “ನಮ್ಮ ದೇಶವನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ, ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರ ಕೊಟ್ಟನು.
19 ಅದಕ್ಕೆ ಇಸ್ರೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುವೆವು. ನಮಗೆ ಕೇವಲ ನಡೆದುಕೊಂಡು ಹೋಗಲು ಅನುಮತಿ ಕೊಡಿ. ಇದೊಂದೇ ನಮ್ಮ ಚಿಕ್ಕ ಬೇಡಿಕೆ” ಎಂದು ಹೇಳಿದರು.
20 ಆದರೆ ಮತ್ತೆ ಎದೋಮ್ಯರು, “ನೀವು ನಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಾವು ಬಿಡುವುದಿಲ್ಲ” ಎಂದು ಉತ್ತರಿಸಿದರು. ಬಳಿಕ ಎದೋಮ್ಯರ ಅರಸನು ಬಲಿಷ್ಠವಾದ ದೊಡ್ಡ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಹೊರಟನು.
21 ಇಸ್ರೇಲರು ಅವನ ದೇಶವನ್ನು ಹಾದು ಹೋಗಲು ಎದೋಮ್ಯರ ಅರಸನು ಬಿಡಲಿಲ್ಲ. ಆಗ ಇಸ್ರೇಲರು ಬೇರೊಂದು ದಿಕ್ಕಿನಲ್ಲಿ ಹೋದರು.
22 ಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು.
23 ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ,
24 “ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.
25 “ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ.
26 ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು.
27 ಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು.
28 ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದು ಬಂದರು.
29 ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×