Bible Versions
Bible Books

Psalms 6 (IRVKN) Indian Revised Version - Kanana

1 ಯೆಹೋವನೇ, ಕೋಪದಿಂದ ನನ್ನನ್ನು ಗದರಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ.
ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ಅದುರುತ್ತವೆ.
3 ನನ್ನ ಪ್ರಾಣವು ಸಹ ಬಹಳವಾಗಿ ತತ್ತರಿಸುತ್ತದೆ.
ಯೆಹೋವನೇ, ಎಷ್ಟರ ವರೆಗೆ ನನ್ನನ್ನು ಕೈಬಿಟ್ಟಿರುವಿ?
4 ಯೆಹೋವನೇ, ಹಿಂತಿರುಗು, ನನ್ನನ್ನು ಬಿಡಿಸು;
ನಿನ್ನ ಕೃಪೆಯ ನಿಮಿತ್ತ ನನ್ನನ್ನು ರಕ್ಷಿಸು.
5 ಮೃತರಿಗೆ ನಿನ್ನ ಜ್ಞಾಪಕವಿರುವುದಿಲ್ಲವಲ್ಲಾ;
ಪಾತಾಳದಲ್ಲಿ ನಿನ್ನನ್ನು ಸ್ತುತಿಸುವವರು ಯಾರು?
6 ನಾನು ನರಳಿ ನರಳಿ ದಣಿದಿದ್ದೇನೆ;
ಪ್ರತಿರಾತ್ರಿಯೂ ನನ್ನ ಮಂಚವು ಕಣ್ಣೀರಿನಿಂದ ತೇಲಾಡುತ್ತದೆ.
ಹಾಸಿಗೆಯು ಕಣ್ಣೀರಿನಿಂದ ನೆನದುಹೋಗುತ್ತದೆ.
7 ದುಃಖದಿಂದ ನನ್ನ ಕಣ್ಣು ಬತ್ತಿ ಹೋಯಿತು;
ವಿರೋಧಿಗಳ ಬಾಧೆಯ ದೆಸೆಯಿಂದಲೇ ಅವು ಮೊಬ್ಬಾಯಿತು.
8 ಧರ್ಮವನ್ನು ಮೀರಿ ನಡೆಯುವವರೇ,
ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ;
ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಆತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನಲ್ಲಾ;
ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು.
10 ನನ್ನ ವಿರೋಧಿಗಳೆಲ್ಲರು ನಾಚಿಕೆಯಿಂದ ಕಳವಳಗೊಳ್ಳುವರು;
ಅವರು ಪಕ್ಕನೆ ಲಜ್ಜೆಗೊಂಡು ಹಿಂದಿರುಗುವರು. PE
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×