Bible Versions
Bible Books

Job 5 (IRVKN) Indian Revised Version - Kanana

1 {ಎಲೀಫಜನ ಪ್ರತ್ಯುತ್ತರದ ಮುಂದುವರಿಕೆ} PS “ನೀನು ಕೂಗಿದರೆ, ನಿನಗೆ ಉತ್ತರಕೊಡುವವರುಂಟೋ?
ಪರಿಶುದ್ಧ ದೇವದೂತರಲ್ಲಿ ಯಾರನ್ನು ಆಶ್ರಯಿಸುವಿ?
2 ಕೋಪದಿಂದ ಮೂರ್ಖನಿಗೆ ನಾಶವು,
ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.
3 ಮೂರ್ಖನು ಬೇರೂರುವುದನ್ನು ನಾನು ನೋಡಿದೆನು.
ಕೂಡಲೆ ಅವನ ನಿವಾಸವು ಶಾಪಗ್ರಸ್ತವೆನ್ನುವುದಕ್ಕೆ ಆಸ್ಪದವಾಯಿತು.
4 ಅವನ ಮಕ್ಕಳು ಆಶ್ರಯವಿಲ್ಲದೆ ನ್ಯಾಯಸ್ಥಾನದಲ್ಲಿ ಸೋತುಹೋಗುವರು.
ಅವರನ್ನು ಬಿಡಿಸತಕ್ಕವರು ಯಾರೂ ಇಲ್ಲ.
5 ಹಸಿದವನು ಅವರ ಬೆಳೆಯನ್ನು
ಮುಳ್ಳುಬೇಲಿಹಾಕಿದ್ದರೂ ತಿಂದುಬಿಡುವನು.
ಅವರ ಸೊತ್ತನ್ನು ನುಂಗಲು ಬಾಯಿ ತೆರೆದು ಕಾದಿರುವರು.
6 ಕೇಡು ಉದ್ಭವಿಸುವುದು ಮಣ್ಣಿನಿಂದಲ್ಲ;
ದುಃಖವು ಭೂಮಿಯಿಂದ ಮೊಳೆಯುವುದಿಲ್ಲ.
7 ಜ್ವಾಲೆಗಳು ಮೇಲಕ್ಕೆ ಹಾರುವುದು,
ಮನುಷ್ಯರು ಶ್ರಮೆಯನ್ನು ಅನುಭವಿಸುವುದೂ ಸಹಜ.
8 (ಈ ಸಂದರ್ಭದಲ್ಲಿ) ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು;
ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು.
9 ಆತನು ಅಪ್ರಮೇಯ ಮಹಾಕಾರ್ಯಗಳನ್ನೂ,
ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
10 ಭೂಮಿಯ ಮೇಲೆ ಮಳೆಸುರಿಸಿ,
ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.
11 ಹೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ಏರಿಸಿ,
ದುಃಖಿಸುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಾನೆ.
12 ಯುಕ್ತಿವಂತರ ಕೈಯಿಂದ ಏನೂ ಆಗದಂತೆ,
ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.
13 ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡಿದುಕೊಂಡು,
ವಕ್ರಬುದ್ಧಿಯುಳ್ಳವರ ಆಲೋಚನೆಯನ್ನು ನಿರರ್ಥಕ ಮಾಡುತ್ತಾನೆ.
14 ಅವರು ಹಗಲಿನಲ್ಲೇ ಕತ್ತಲೆಯಿಂದ ಸುತ್ತುವರೆದು,
ಮಧ್ಯಾಹ್ನದಲ್ಲೇ ರಾತ್ರಿಯವರಂತೆ ತಡಕಾಡುತ್ತಾರೆ.
15 ಇಂಥವರ ಬಾಯೆಂಬ ಕತ್ತಿಯಿಂದಲೂ,
ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.
16 ಹೀಗೆ ಬಡವನಿಗೆ ನಿರೀಕ್ಷೆಯುಂಟಾಗುವುದು,
ಅನ್ಯಾಯವು ಬಾಯಿ ಮುಚ್ಚಿಕೊಳ್ಳುವುದು.
17 ಇಗೋ, ದೇವರು ಯಾರನ್ನು ಶಿಕ್ಷಿಸುವನೋ ಅವನು ಧನ್ಯನು;
ಸರ್ವಶಕ್ತನಾದ ದೇವರ ದಂಡನೆಯನ್ನು ತಾತ್ಸಾರಮಾಡಬೇಡ.
18 ಗಾಯಮಾಡುವವನೂ ಗಾಯಕಟ್ಟುವವನೂ ಆತನೇ;
ಹೊಡೆಯುವ ಕೈಯೇ ವಾಸಿಮಾಡುತ್ತದೆ.
19 ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು;
ಏಳನೆಯ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟದು.
20 ಬರಗಾಲದಲ್ಲಿ ಮರಣದಿಂದಲೂ,
ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.
21 ನಾಲಿಗೆಯೆಂಬ ಕೊರಡೆಗೆ ನೀನು ಮರೆಯಾಗಿರುವಿ;
ವಿನಾಶವುಂಟಾದರೂ ನೀನು ಹೆದರುವುದಿಲ್ಲ.
22 ನೀನು ನಾಶಕ್ಕೂ, ಕ್ಷಾಮಕ್ಕೂ ನಗುವಿ;
ಕಾಡುಮೃಗಗಳಿಗೆ ಅಂಜಬೇಕಾಗಿಲ್ಲ.
23 ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವಿ;
ಕಾಡುಮೃಗಗಳೂ ನಿನ್ನ ಸಂಗಡ ಸಮಾಧಾನವಾಗಿರುವವು.
24 ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವುದು;
ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
25 ನಿನ್ನ ಸಂತಾನವು ದೊಡ್ಡದ್ದೆಂದೂ,
ನಿನ್ನ ಸಂತತಿಯವರು ಭೂಮಿಯ ಹುಲ್ಲಿನಂತೆ ಲೆಕ್ಕವಿಲ್ಲದವರು ಎಂದೂ ನಂಬಿರುವಿ.
26 ಸುಗ್ಗೀಕಾಲದಲ್ಲಿ ತೆನೆಯ ಸಿವುಡು ಮನೆಗೆ ಸೇರುವಂತೆ,
ನೀನು ವೃದ್ಧಾಪ್ಯ ಕಳೆದ ಮೇಲೆ ಸಮಾಧಿಗೆ ಸೇರುವಿ.
27 ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು,
ನಿನ್ನಷ್ಟಕ್ಕೆ ನೀನೇ ತಿಳಿದುಕೋ.” PE
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×