Bible Versions
Bible Books

Amos 5 (IRVKN) Indian Revised Version - Kanana

1 {ಪ್ರಲಾಪವೂ ಪ್ರಬೋಧನೆಯೂ} PS ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಹಾಡುವ ಮಾತನ್ನು ಕೇಳಿರಿ:
2 ಇಸ್ರಾಯೇಲೆಂಬ ಯುವತಿಯು ಬಿದ್ದಿದ್ದಾಳೆ;
ಮತ್ತೆ ಏಳುವುದೇ ಇಲ್ಲ;
ದಿಕ್ಕಿಲ್ಲದೆ ತನ್ನ ನೆಲದ ಮೇಲೆ ಒರಗಿದ್ದಾಳೆ;
ಅವಳನ್ನು ಎತ್ತಲು ಯಾರೂ ಇಲ್ಲ.
3 {ಪಶ್ಚಾತ್ತಾಪಕ್ಕೆ ಕರೆ} PS ಕರ್ತನಾದ ಯೆಹೋವನು ಇಂತೆನ್ನುತ್ತಾನೆ,
“ಒಂದು ಪಟ್ಟಣದಿಂದ ಯುದ್ಧಕ್ಕೆ ಹೊರಟ ಸಾವಿರ ಸೈನಿಕರಲ್ಲಿ ನೂರು ಮಂದಿ ಉಳಿಯುವರು,
ಒಂದು ಊರಿನಿಂದ ಹೊರಟ ನೂರು ಸೈನಿಕರಲ್ಲಿ
ಇಸ್ರಾಯೇಲರ ವಂಶಕ್ಕೆ ಹತ್ತು ಜನ ನಿಲ್ಲುವರು.”
4 ಯೆಹೋವನು ಇಸ್ರಾಯೇಲರ ವಂಶಕ್ಕೆ ಹೀಗೆ ನುಡಿಯುತ್ತಾನೆ:
“ನೀವು ನನ್ನನ್ನು ಆಶ್ರಯಿಸಿ ಬದುಕಿಕೊಳ್ಳಿರಿ!
5 ಬೇತೇಲನ್ನು ಆಶ್ರಯಿಸಬೇಡಿರಿ;
ಗಿಲ್ಗಾಲನ್ನು ಸೇರಬೇಡಿರಿ;
ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ.
ಗಿಲ್ಗಾಲು ನಿಶ್ಚಯವಾಗಿ ಸೆರೆಗೆ ಹೋಗುವುದು.
ಬೇತೇಲು ಬಯಲಾಗುವುದು.
6 ಯೆಹೋವನ ಕಡೆಗೆ ತಿರುಗಿಕೊಂಡು ಬದುಕಿರಿ,
ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ
ಯೋಸೇಫನ ವಂಶದೊಳಗೆ ಪ್ರವೇಶಿಸುವನು.
ಅದು ದಹಿಸಿಬಿಡುವುದು,
ಅದನ್ನು ಆರಿಸುವುದಕ್ಕೆ ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
7 ಅವರು ನ್ಯಾಯವನ್ನು ಕಹಿಮಾಡುವವರು
ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”
8 ಕೃತ್ತಿಕಾ ಮತ್ತು ಒರಿಯನ್ ಎಂಬ ಪ್ರಕಾಶಮಾನವಾದ ನಕ್ಷತ್ರಗಳನ್ನು ಸೃಷ್ಟಿಸಿ,
ಕಾರ್ಗತ್ತಲನ್ನು ಬೆಳಕನ್ನಾಗಿ ಮಾಡಿ,
ಹಗಲನ್ನು ಇರುಳಾಗಿ ಮಾರ್ಪಡಿಸಿ,
ಸಾಗರದ ಜಲವನ್ನು ಬರಮಾಡಿಕೊಂಡು,
ಭೂಮಂಡಲದ ಮೇಲೆ ಸುರಿಯುವಾತನ ಕಡೆಗೆ ತಿರುಗಿಕೊಳ್ಳಿರಿ,
ಯೆಹೋವನೆಂಬುದೇ ಆತನ ನಾಮಧೇಯ!
9 ಬಲಿಷ್ಠರಿಗೆ ಧ್ವಂಸವನ್ನು ತಟ್ಟನೇ ತಂದೊಡ್ಡಿ,
ಕೋಟೆಗೆ ನಾಶನವನ್ನು ತರುವವನು ಆತನೇ.
10 ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ,
ಯಥಾರ್ಥರನ್ನು ದ್ವೇಷಿಸುತ್ತೀರಿ.
11 ನೀವು ಬಡವರನ್ನು ತುಳಿದು,
ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ
ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ,
ವಾಸಿಸದೆ ಇರುವಿರಿ.
ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು,
ಅದರ ದ್ರಾಕ್ಷಾರಸವನ್ನು ಕುಡಿಯುವಿರಿ.
12 ನೀತಿವಂತರನ್ನು ಹಿಂಸಿಸುವವರೇ,
ಲಂಚತೆಗೆದುಕೊಳ್ಳುವವರೇ,
ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ.
ನಿಮ್ಮ ದ್ರೋಹಗಳು ಬಹಳ,
ನಿಮ್ಮ ಪಾಪಗಳು ನನಗೆ ಗೊತ್ತಿದೆ.
13 ಇಂಥ ಕಾಲದಲ್ಲಿ ವಿವೇಕಿಯು ಸುಮ್ಮನಿರುವನು, ಇದು ದುಷ್ಟ ಕಾಲವೇ ಸರಿ.
14 ಕೆಟ್ಟದ್ದನಲ್ಲ ಒಳ್ಳೆಯದನ್ನು,
ಅನುಸರಿಸಿ ಬಾಳಿರಿ.
ನೀವು ಅಂದುಕೊಂಡಂತೆ,
ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು.
15 ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ,
ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ.
ಒಂದು ವೇಳೆ ಸೇನಾಧೀಶ್ವರ ದೇವರಾದ ಯೆಹೋವನು
ಯೋಸೇಫನ ವಂಶದಲ್ಲಿ ಉಳಿದವರಿಗೆ ಪ್ರಸನ್ನನಾದನು.
16 ಸೇನಾಧೀಶ್ವರ ದೇವರಾದ,
ಯೆಹೋವನು ಇಂತೆನ್ನುತ್ತಾನೆ:
“ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು
ಮತ್ತು ಸಕಲ ಬೀದಿಗಳಲ್ಲಿ,
‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು.
ರೈತರನ್ನು ಪ್ರಲಾಪಿಸುವುದಕ್ಕೂ
ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು.
17 ಎಲ್ಲಾ ದ್ರಾಕ್ಷಿಯ ತೋಟಗಳಲ್ಲಿ ರೋದನವಾಗುವುದು.
ಏಕೆಂದರೆ ನಾನು ನಿಮ್ಮ ನಡುವೆ ಸಂಹಾರಕನಾಗಿ ಹಾದುಹೋಗುವೆನು”
ಇದು ಯೆಹೋವನ ನುಡಿ. PS
18 {ಯೆಹೋವನ ದಿನವು ದುಷ್ಟರಿಗೆ ದುರ್ದಿನ} PS ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ!
ಯೆಹೋವನ ದಿನವು ನಿಮಗೇಕೆ?
ಅದು ಬೆಳಕಲ್ಲ ಕತ್ತಲೆಯೇ.
19 ಸಿಂಹದ ಕಡೆಯಿಂದ ಓಡಿದವನಿಗೆ,
ಕರಡಿಯು ಎದುರುಬಿದ್ದಂತಾಗುವುದು,
ಅವನು ಮನೆಗೆ ಓಡಿಬಂದು,
ಕೈಯನ್ನು ಗೋಡೆಯ ಮೇಲೆ ಇಡಲು,
ಹಾವು ಕಚ್ಚಿದ ಹಾಗಾಗುವುದು.
20 ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ!
ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ!
21 “ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ,
ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ.
22 ನೀವು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ,
ನಾನು ಅದನ್ನು ಸ್ವೀಕರಿಸುವುದಿಲ್ಲ,
ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸಿದ ಕೊಬ್ಬಿದ ಪಶುಗಳನ್ನು ನೋಡುವುದಿಲ್ಲ.
23 ನಿಮ್ಮ ಗೀತೆಗಳ ಧ್ವನಿಯನ್ನು ನನ್ನಿಂದ ತೊಲಗಿಸಿರಿ;
ನಿಮ್ಮ ವೀಣೆಗಳ ಮಧುರನಾದಕ್ಕೆ ಕಿವಿಗೊಡುವುದಿಲ್ಲ.
24 ಅದರ ಬದಲಾಗಿ ನ್ಯಾಯವು ಹೊಳೆಯ ಹಾಗೆ ಹರಿಯಲಿ,
ಧರ್ಮವು ಮಹಾನದಿಯಂತೆ ಹರಿಯಲಿ.
25 ಇಸ್ರಾಯೇಲರ ವಂಶದವರೇ
ನೀವು ಅರಣ್ಯದಲ್ಲಿ ನಲ್ವತ್ತು ವರ್ಷ ನನಗೆ ಯಜ್ಞಗಳನ್ನೂ, ಧಾನ್ಯನೈವೇದ್ಯಗಳನ್ನೂ ಅರ್ಪಿಸಿದ್ದೀರೋ?
26 ಸಿಕ್ಕೊತ್ ಎಂಬ ನಿಮ್ಮ ಒಡೆಯನನ್ನು,
ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನು,
ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವುದು.
27 ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು”
ಸೇನಾಧೀಶ್ವರ ದೇವರೆಂಬ,
ಯೆಹೋವನು ಇದನ್ನು ನುಡಿದಿದ್ದಾನೆ. PE
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×