Bible Versions
Bible Books

1 Corinthians 14 (ERVKN) Easy to Read Version - Kannadam

1 ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು.
2 ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ.
3 ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ.
4 ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ.
5 ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.
6 ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ.
7 ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ.
8 ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ.
9 ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು.
10 ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಭಾಷೆಗಳಿಗೆಲ್ಲಾ ಅರ್ಥವಿದೆ.
11 ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು.
12 ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.
13 ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ.
14 ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು.
15 ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು.
16 ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್‌” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ.
17 ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ.
18 ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ.
19 ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.
20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ.
21 ಪವಿತ್ರ ಗ್ರಂಥದಲ್ಲಿ ರೀತಿ ಬರೆಯಲ್ಪಟ್ಟಿದೆ: "ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ ವಿದೇಶಿಯರ ನಾಲಿಗೆಯ ಮೂಲಕವೂ ನಾನು ಜನರೊಂದಿಗೆ ಮಾತಾಡುವೆನು; ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.” ಯೆಶಾಯ 28:11-12 ಪ್ರಭುವು ಹೇಳುವುದು ಅದನ್ನೇ.
22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ.
23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು.
24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರ ಮೇಲೆ ಅವನಿಗೆ ತೀರ್ಪಾಗುವುದು.
25 ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.
26 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು.
27 ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು.
28 ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು.
29 ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು.
30 ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ.
31 ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು.
32 ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ.
33 ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
34 ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ.
35 ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು.
36 ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ!
37 ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು.
38 ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು.
39 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ.
40 ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×