Bible Versions
Bible Books

Psalms 7 (ERVKN) Easy to Read Version - Kannadam

1 ರಚನೆಗಾರ : ದಾವೀದ. ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ. ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
2 ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು; ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.
3 ನನ್ನ ದೇವರಾದ ಯೆಹೋವನೇ, ನಾನು ಯಾವ ಅಪರಾಧವನ್ನಾದರೂ ಮಾಡಿದ್ದರೆ,
4 ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ, ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
5 ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ, ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ; ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.
6 ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು! ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು. ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
7 ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ ನಿನ್ನ ಉನ್ನತ ಸ್ಥಾನದಲ್ಲಿ ಆಸೀನನಾಗು.
8 ಜನರಿಗೆ ನ್ಯಾಯತೀರಿಸು. ಯೆಹೋವನೇ, ನನಗೆ ನ್ಯಾಯತೀರಿಸು. ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
9 ಕೆಟ್ಟವರನ್ನು ದಂಡಿಸು, ಒಳ್ಳೆಯವರಿಗೆ ಸಹಾಯಮಾಡು. ದೇವರೇ ನೀನು ಒಳ್ಳೆಯವನು; ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.
10 ನನ್ನ ಗುರಾಣಿಯು ದೇವರೇ. ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಧೀಶನಾಗಿದ್ದಾನೆ. ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.
14 ಕೆಲವರು ದುಷ್ಟಕಾರ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು. ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡು ಮಾಡಬೇಕೆಂದಿದ್ದಾರೆ; ಆದರೆ ತಾವೇ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು. ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು. ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.
17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು. ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×