Bible Versions
Bible Books

Micah 5 (ERVKN) Easy to Read Version - Kannadam

1 ಬಲಶಾಲಿಯಾದ ನಗರಿಯೇ, ನಿನ್ನ ಸೈನಿಕರನ್ನು ಕೂಡಿಸು. ಅವರು ನಮ್ಮ ಮೇಲೆ ದಾಳಿಮಾಡಲು ಸುತ್ತುವರಿದಿದ್ದಾರೆ. ಇಸ್ರೇಲಿನ ನ್ಯಾಯಧೀಶನ ಕೆನ್ನೆಯ ಮೇಲೆ ಕೋಲಿನಿಂದ ಹೊಡೆಯುವರು.
2 ಎಫ್ರಾತದ ಬೆತ್ಲೇಹೇಮೇ, ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವಿ. ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ. ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು. ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
3 ಸ್ತ್ರೀಯು ತನ್ನ ಮಗನನ್ನು ಹೆರುವ ತನಕ ಯೆಹೋವನು ತನ್ನ ಜನರನ್ನು ತೊರೆದು ಬಿಡುವನು. ಅನಂತರ ಉಳಿದ ಅವನ ಸಹೋದರರು ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
4 ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು. ಆತನ ಮಹತ್ತು ಭೂಮಿಯ ಕಟ್ಟ ಕಡೆಗೆ ಪ್ರಸರಿಸುವದರಿಂದ ಅವರು ಸಮಾಧಾನದಿಂದ ವಾಸಿಸುವರು.
5 ಆಗ ಶಾಂತಿ ನೆಲೆಸುವದು. ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು ನಮ್ಮ ಮಹಾ ಕಟ್ಟಡಗಳನ್ನು ತುಳಿದು ಹಾಕುವರು. ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ ಎಂಟು ನಾಯಕರನ್ನೂ ಆರಿಸುವನು.
6 ಅವರು ತಮ್ಮ ಖಡ್ಗಗಳನ್ನು ಉಪಯೋಗಿಸಿ ಅಶ್ಶೂರದವರನ್ನು ಆಳುವರು. ಅವರು ನಿಮ್ರೋದನ ದೇಶವನ್ನು ಆಳುವರು. ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಜನರನ್ನು ಆಳುವರು. ಆದರೆ ಇಸ್ರೇಲಿನ ರಾಜನು ಅಶ್ಶೂರದವರಿಂದ ನಮ್ಮನ್ನು ರಕ್ಷಿಸುವನು. ಅವರು ನಮ್ಮ ದೇಶದೊಳಕ್ಕೆ ಬಂದು ನಮ್ಮ ಪ್ರದೇಶವನ್ನು ತುಳಿದು ಹಾಳುಮಾಡುವಾಗ ನಾವು ರಕ್ಷಿಸಲ್ಪಡುವೆವು.
7 ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ ಅಳಿದುಳಿದವರು ಯೆಹೋವನಿಂದ ಹೊರಡುವ ಮಂಜಿನಂತಿರುವರು. ಅದು ಯಾರನ್ನೂ ಕಾಯುವದಿಲ್ಲ. ಅವರು ಹುಲ್ಲಿನ ಮೇಲೆ ಬಿದ್ದಿರುವ ಮಳೆಯಂತಿರುವರು. ಮಳೆಯು ಯಾರನ್ನೂ ಕಾಯುವದಿಲ್ಲ.
8 “ಆದರೆ ಜನಾಂಗಗಳಲ್ಲಿ ಚದರಿರುವ ಯಾಕೋಬನ ವಂಶದ ಅಳಿದುಳಿದವರು, ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು. ಕುರಿಗಳ ಹಿಂಡಿನ ಮಧ್ಯೆಯಿರುವ ಪ್ರಾಯದ ಸಿಂಹದಂತಿರುವರು. ಅದು ತನಗೆ ಇಷ್ಟ ಬಂದಂತೆ ತಿರುಗಾಡುವದು. ಅದು ಒಂದು ಪ್ರಾಣಿಯನ್ನು ಹಿಡಿದರೆ ಅದನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ. ಜನಶೇಷವು ಅದರಂತಿರುವದು.
9 ನೀನು ನಿನ್ನ ವೈರಿಗಳ ಮೇಲೆ ಕೈಎತ್ತಿ ಅವರನ್ನು ನಾಶಮಾಡುವೆ.
10 ಯೆಹೋವನು ಹೇಳುವದೇನಂದರೆ, “ಆ ಸಮಯದಲ್ಲಿ ನಿನ್ನ ಕುದುರೆಗಳನ್ನು ನಾನು ತೆಗೆದುಬಿಡುವೆನು. ನಿನ್ನ ರಥಗಳನ್ನು ನಾಶಮಾಡುವೆನು.
11 ನಿನ್ನ ದೇಶದಲ್ಲಿರುವ ಪಟ್ಟಣಗಳನ್ನು ಹಾಳುಮಾಡುವೆನು. ನಿನ್ನ ಕೋಟೆಗಳನ್ನೆಲ್ಲಾ ನಾಶಮಾಡುವೆನು.
12 ನೀನು ಮಾಟಮಂತ್ರಗಳನ್ನು ಇನ್ನು ಮುಂದೆ ಮಾಡದಿರುವಿ. ಭವಿಷ್ಯ ಮತ್ತು ಕಣಿ ಹೇಳುವ ಜನರು ಇನ್ನು ಮುಂದೆ ನಿನ್ನಲ್ಲಿ ಇರುವುದಿಲ್ಲ.
13 ನಿನ್ನ ವಿಗ್ರಹಳನ್ನೂ ಕಲ್ಲುಕಂಬಗಳನ್ನೂ ಒಡೆದು ನಾಶಮಾಡುವೆನು. ನಿನ್ನ ಕೈಗಳು ಮಾಡಿದ ವಸ್ತುಗಳನ್ನು ನೀನು ಪೂಜಿಸುವುದಿಲ್ಲ.
14 ನಾನು ನಿನ್ನ ಅಶೇರ ಸ್ತಂಭಗಳನ್ನು ಸುಳ್ಳು ದೇವರುಗಳನ್ನು ನಾಶಮಾಡುವೆನು.
15 ಕೆಲವು ಜನಾಂಗಗಳು ನನ್ನ ಮಾತಿಗೆ ಕಿವಿಗೊಡುವುದಿಲ್ಲ. ಆಗ ನಾನು ನನ್ನ ಕೋಪವನ್ನು ಪ್ರದರ್ಶಿಸುವೆನು. ಅವಿಧೇಯರಿಗೆ ಮುಯ್ಯಿ ತೀರಿಸುವೆನು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×