Bible Versions
Bible Books

Nahum 2 (ERVKN) Easy to Read Version - Kannadam

1 ವೈರಿಯು ನಿನ್ನ ಮೇಲೆ ಬರುವನು. ಆದುದರಿಂದ ನಿನ್ನ ಪಟ್ಟಣದ ಬುರುಜುಗಳನ್ನು ಕಾಯಿ. ಮಾರ್ಗದ ಮೇಲೆ ಕಣ್ಣಿಡು. ಯುದ್ಧಕ್ಕೆ ತಯಾರಾಗು. ರಣರಂಗಕ್ಕೆ ಹೋಗಲು ಸಿದ್ಧನಾಗು.
2 ಹೌದು, ಯೆಹೋವನು ಯಾಕೋಬನ ವೈಭವವನ್ನು ಇಸ್ರೇಲಿನ ವೈಭವವಾಗಿ ಸ್ಥಾಪಿಸುವನು. ಇಸ್ರೇಲಿನಂತೆ ತಿರುಗಿ ಮಾಡುವನು. ವೈರಿಯು ಅವರನ್ನು ನಾಶಮಾಡಿ ಅವರ ದ್ರಾಕ್ಷಿ ಬಳ್ಳಿಯನ್ನು ಹಾಳುಮಾಡಿದನು.
3 ಸೈನಿಕರ ಗುರಾಣಿಗಳು ಕೆಂಪಗಿವೆ. ಅವರ ಸಮವಸ್ತ್ರಗಳು ಕೆಂಪುಬಣ್ಣದಿಂದ ಹೊಳೆಯುತ್ತಿವೆ. ಅವರ ರಥಗಳು ಯುದ್ಧಕ್ಕಾಗಿ ಸಾಲುಗಟ್ಟಿ ನಿಂತಿವೆ ಮತ್ತು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿವೆ. ಅವರ ಭರ್ಜಿಗಳು ಎತ್ತಲ್ಪಟ್ಟಿವೆ.
4 ರಸ್ತೆಯ ಮೇಲೆ ರಥಗಳು ರಭಸದಿಂದ ಓಡುತ್ತಿವೆ. ನಗರದ ಚೌಕಕ್ಕೆ ಹಿಂದೆ ಮುಂದೆ ಓಡುತ್ತಿವೆ. ಅವು ಉರಿಯುವ ಪಂಜಿನೋಪಾದಿಯಲ್ಲಿವೆ, ಒಂದೆಡೆಯಿಂದ ಇನ್ನೊಂದೆಡೆಗೆ ಹಾರುವ ಮಿಂಚಿನಂತಿವೆ.
5 ವೈರಿಗಳು ತಮ್ಮ ಶೂರ ಯೋಧರನ್ನು ಕರೆಯುತ್ತಿದ್ದಾರೆ. ಅವರು ಮುನ್ನುಗ್ಗುವಾಗ ಎಡವಿ ಬೀಳುವರು, ಗೋಡೆಗಳ ಕಡೆಗೆ ನುಗ್ಗಿ ತಮ್ಮ ಗುರಾಣಿಗಳನ್ನು ಇಡುವರು.
6 ಆದರೆ ಹೊಳೆಯ ಕದಗಳು ತೆರೆಯಲ್ಪಟ್ಟಿವೆ. ಅದರ ಮೂಲಕ ವೈರಿಗಳು ಮುನ್ನುಗ್ಗುತ್ತಿದ್ದಾರೆ. ಅರಸನ ಮನೆಯನ್ನು ನಾಶಮಾಡುತ್ತಿದ್ದಾರೆ.
7 ವೈರಿಗಳು ರಾಣಿಯನ್ನು ಎತ್ತಿಕೊಂಡು ಹೋಗುತ್ತಾರೆ. ಆಕೆಯ ಸೇವಕಿಯರು ಪಾರಿವಾಳಗಳಂತೆ ಮುಲುಗುತ್ತಿದ್ದಾರೆ. ತಮ್ಮ ದುಃಖವನ್ನು ಪ್ರದರ್ಶಿಸಲು ಎದೆಯನ್ನು ಬಡಕೊಳ್ಳುತ್ತಿದ್ದಾರೆ.
8 ನಿನೆವೆಯು ನೀರು ಬತ್ತುತ್ತಿರುವ ಕೊಳದಂತಿದೆ. “ನಿಲ್ಲಿ, ನಿಲ್ಲಿ, ಓಡಿಹೋಗಬೇಡಿ” ಎಂದು ಜನರು ಬೊಬ್ಬಿಡುತ್ತಾರೆ. ಆದರೆ ಅದರಿಂದ ಪ್ರಯೋಜನವಿಲ್ಲ.
9 ನಿನೆವೆಯನ್ನು ನಾಶಮಾಡುವ ಸೈನಿಕರೇ, ಬೆಳ್ಳಿಬಂಗಾರಗಳನ್ನು ತೆಗೆದುಕೊಳ್ಳಿರಿ. ತೆಗೆದುಕೊಳ್ಳಲು ಎಷ್ಟೋ ವಸ್ತುಗಳಿವೆ. ಎಷ್ಟೋ ನಿಕ್ಷೇಪಗಳಿವೆ.
10 “ಈಗ ನಿನೆವೆಯು ಖಾಲಿಯಾಯಿತು. ಎಲ್ಲಾ ದೋಚಲ್ಪಟ್ಟಿತು. ನಗರವು ನಾಶವಾಯಿತು. ಜನರು ತಮ್ಮ ಧೈರ್ಯ ಕಳೆದುಕೊಂಡಿದ್ದಾರೆ. ಭಯದಿಂದ ಅವರ ಹೃದಯವು ಕರಗುತ್ತಿದೆ. ಮೊಣಕಾಲುಗಳು ನಡುಗುತ್ತಿವೆ. ಅವರ ದೇಹವು ಅಲ್ಲಾಡುತ್ತಿವೆ. ಭಯದಿಂದ ಅವರ ಮುಖವು ರಕ್ತಹೀನವಾಗಿದೆ.
11 ಸಿಂಹದ ಗುಹೆಯಂತಿದ್ದ ನಿನೆವೆಯು ಎಲ್ಲಿ? ಗಂಡು ಹೆಣ್ಣು ಸಿಂಹಗಳು ಅದರೊಳಗೆ ವಾಸಿಸುತ್ತಿದ್ದವು. ಅದರ ಮರಿಗಳಿಗೆ ಭಯವಿಲ್ಲ.
12 “ನಿನೆವೆಯು (ಅರಸನಾದ ಸಿಂಹವು) ಜನರನ್ನು ಕೊಂದಿತು. ತನ್ನ ಮರಿಗಳಿಗೂ ಸಿಂಹಿಣಿಗೂ ಆಹಾರವನ್ನು ಕೊಟ್ಟಿತು. ತನ್ನ ಗುಹೆಯನ್ನು (ನಿನೆವೆ ರಾಜನು) ಮನುಷ್ಯರ ಶರೀರಗಳಿಂದಲೂ ತಾನು ಕೊಂದ ಹೆಂಗಸರಿಂದಲೂ ತುಂಬಿಸಿತು.
13 ಸರ್ವಶಕ್ತನಾದ ಯೆಹೋವನು ಹೇಳುವದೇನೆಂದರೆ, “ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ರಥಗಳನ್ನು ಸುಟ್ಟು ಹಾಕುತ್ತೇನೆ. ನಿನ್ನ ಎಳೆ ಸಿಂಹಗಳನ್ನು ರಣರಂಗದಲ್ಲಿ ಸಾಯಿಸುತ್ತೇನೆ. ಭೂಮಿಯ ಮೇಲೆ ಇನ್ನು ಯಾರನ್ನೂ ಭೇಟಿ ಮಾಡದಿರುವಿ. ನಿನ್ನ ಸಂದೇಶವಾಹಕರಿಂದ ಕೆಟ್ಟ ಸಮಾಚಾರವನ್ನು ಜನರು ಇನ್ನು ಎಂದಿಗೂ ಕೇಳರು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×