Bible Versions
Bible Books

Isaiah 16 (ERVKN) Easy to Read Version - Kannadam

1 ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
2 ಮೋವಾಬಿನ ಸ್ತ್ರೀಯರು ಅರ್ನೋನ್ ಹೊಳೆಯನ್ನು ದಾಟಲು ಪ್ರಯತ್ನಿಸುವರು. ಅವರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಹಾಯಕ್ಕಾಗಿ ಓಡುವರು. ಗೂಡಿನಿಂದ ಕೆಳಗೆ ಬಿದ್ದ ಪಕ್ಷಿಮರಿಗಳಂತೆ ಅವರಿರುವರು.
3 ಅವರು, “ನಮಗೆ ಸಹಾಯ ಮಾಡಿರಿ! ನಾವು ಮಾಡಬೇಕಾದದ್ದನ್ನು ತಿಳಿಸಿರಿ! ವೈರಿಗಳಿಂದ ನಮ್ಮನ್ನು ರಕ್ಷಿಸಿರಿ. ನಮ್ಮನ್ನು ನಡುಮಧ್ಯಾಹ್ನದ ಸೂರ್ಯನ ಶಾಖದಿಂದ ನೆರಳು ಕಾಪಾಡುವಂತೆ ನಮ್ಮನ್ನು ಕಾಪಾಡಿರಿ. ನಾವು ನಮ್ಮ ಶತ್ರುಗಳಿಂದ ಓಡಿಹೋಗುತ್ತಿದ್ದೇವೆ. ನಮ್ಮನ್ನು ಅಡಗಿಸಿಡಿರಿ, ವೈರಿಗಳ ಕೈಗೆ ನಮ್ಮನ್ನು ಕೊಡಬೇಡಿರಿ.
4 ತಮ್ಮ ಮನೆಯನ್ನು ಬಿಟ್ಟುಹೋಗುವಂತೆ ಮೋವಾಬಿನ ಜನರನ್ನು ಬಲವಂತ ಮಾಡಲಾಯಿತು. ಆದುದರಿಂದ ಅವರು ನಿಮ್ಮ ದೇಶದಲ್ಲಿ ವಾಸಿಸಲಿ. ಶತ್ರುಗಳ ಕೈಗೆ ಸಿಗದಂತೆ ಅವರನ್ನು ಅಡಗಿಸಿಡಿರಿ” ಎಂದು ಹೇಳುವರು. ದರೋಡೆಯು ನಿಂತುಹೋಗುವದು. ಶತ್ರುಗಳು ಸೋಲಿಸಲ್ಪಡುವರು. ಇತರರಿಗೆ ಕೇಡುಮಾಡುವವರು ದೇಶವನ್ನು ಬಿಟ್ಟುಹೋಗುವರು.
5 ಆಗ ಹೊಸ ಅರಸನು ಬರುವನು. ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು. ಆತನು ದಾವೀದನ ವಂಶದವನಾಗಿದ್ದಾನೆ. ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು. ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು.
6 ಮೋವಾಬಿನ ಜನರು ತುಂಬಾ ಹೆಚ್ಚಳಪಡುವವರೂ ಜಂಭದವರೂ ಎಂದೂ ನಾವು ಕೇಳಿದ್ದೇವೆ. ಇವರು ಹಿಂಸಕರಾಗಿದ್ದಾರೆ; ಬಡಾಯಿ ಕೊಚ್ಚುವವರಾಗಿದ್ದಾರೆ, ಅವರ ಬಡಾಯಿ ಕೇವಲ ಮಾತುಗಳಷ್ಟೇ.
7 ಜಂಭದ ಪರಿಣಾಮವಾಗಿ ಇಡೀ ಮೋವಾಬ್ ಪ್ರದೇಶ ಸಂಕಟಕ್ಕೊಳಗಾಗುವದು. ಮೋವಾಬಿನ ಜನರೆಲ್ಲಾ ಅಳುವರು. ಜನರು ತಮಗೆ ಹಿಂದೆ ಇದ್ದದ್ದೆಲ್ಲಾ ಬೇಕು ಎನ್ನುತ್ತಾ ದುಃಖಿಸುವರು. ಕೀರ್ ಹರೆಷೆಥಿನಲ್ಲಿ ತಯಾರಿಸಿದ ಅಂಜೂರದ ತಿಂಡಿ ಪದಾರ್ಥಗಳು ತಮಗೆ ಬೇಕು ಅನ್ನುವರು.
8 ಹೆಷ್ಬೋನಿನ ತೋಟಗಳು ಮತ್ತು ಸಿಬ್ಮದ ದ್ರಾಕ್ಷಾಲತೆಗಳು ದ್ರಾಕ್ಷಿಯನ್ನು ಫಲಿಸಲಾರದ ಕಾರಣ ಜನರು ವ್ಯಸನದಿಂದಿರುವರು. ಶತ್ರುಸೈನ್ಯವು ಯೆಜ್ಜೇರಿನಿಂದ ಮರುಭೂಮಿಯವರೆಗೂ ಮತ್ತು ಸಮುದ್ರದವರೆಗೂ ಆವರಿಸಿಕೊಂಡಿರುವರು.
9 ದ್ರಾಕ್ಷಾಫಲವು ನಾಶವಾಗಿರುವದಕ್ಕಾಗಿ ನಾನು ಯೆಜ್ಜೇರ್ ಮತ್ತು ಸಿಬ್ಮದವರೊಂದಿಗೆ ಅಳುವೆನು. ಸುಗ್ಗಿ ಇಲ್ಲದಿರುವದಕ್ಕಾಗಿ ನಾನು ಹೆಷ್ಬೋನ್ ಮತ್ತು ಎಲೆಯಾಲೆಯ ಜನರೊಂದಿಗೆ ಅಳುವೆನು. ಬೇಸಿಗೆ ಕಾಲದ ಹಣ್ಣುಗಳಿರದು; ಹರ್ಷಧ್ವನಿಯೂ ಇರದು.
10 ಕರ್ಮೆಲ್ ಬೆಟ್ಟದಲ್ಲಿ ಗಾಯನವಾಗಲಿ ಹರ್ಷಧ್ವನಿಯಾಗಲಿ ಇರದು. ಸುಗ್ಗಿಕಾಲದ ಎಲ್ಲಾ ಸಂತಸಗಳನ್ನು ನಾನು ನಿಲ್ಲಿಸುವೆನು. ದ್ರಾಕ್ಷೆಯ ಹಣ್ಣುಗಳು ರಸ ತೆಗೆಯಲು ಪಕ್ವವಾಗಿವೆ. ಆದರೆ ಅವುಗಳೆಲ್ಲವೂ ವ್ಯರ್ಥವಾಗುವವು.
11 ನಾನು ಮೋವಾಬಿಗಾಗಿ ತುಂಬಾ ದುಃಖದಲ್ಲಿದ್ದೇನೆ. ನಾನು ಕೀರ್‌ಹೆರೆಸಿಗಾಗಿಯೂ ತುಂಬಾ ದುಃಖದಲ್ಲಿದ್ದೇನೆ. ನಗರಗಳಿಗಾಗಿ ನಾನು ಬಹಳವಾಗಿ ದುಃಖದಲ್ಲಿದ್ದೇನೆ.
12 ಮೋವಾಬಿನ ಜನರು ತಮ್ಮ ಪೂಜಾಸ್ಥಳಗಳಿಗೆ ಹೋಗಿ ಆರಾಧನೆ ಮಾಡುವರು. ಸಂಭವಿಸುವ ಸಂಗತಿಗಳನ್ನು ನೋಡಿದಾಗ ಪ್ರಾರ್ಥಿಸಲೂ ಅವರಲ್ಲಿ ಉತ್ಸಾಹವಿರುವುದಿಲ್ಲ.
13 ಮೋವಾಬಿನ ವಿಷಯವಾಗಿ ಯೆಹೋವನು ಅನೇಕ ಸಾರಿ ಇವುಗಳನ್ನು ಮುಂತಿಳಿಸಿದ್ದಾನೆ.
14 ಈಗ ಯೆಹೋವನು ಹೇಳುವದೇನೆಂದರೆ: “ಇನ್ನು ಮೂರು ವರ್ಷದೊಳಗೆ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಎಲ್ಲಾ ಜನರು ಮತ್ತು ಅವರು ಹೆಮ್ಮೆಪಡುವ ವಸ್ತುಗಳು ಹೋಗಿಬಿಡುತ್ತವೆ. ಕೇವಲ ಸ್ವಲ್ಪ ಮಂದಿ ಮಾತ್ರ ಉಳಿಯುವರು. ದೇಶದಲ್ಲಿ ಹೆಚ್ಚುಮಂದಿ ಉಳಿಯರು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×