Bible Versions
Bible Books

Psalms 55 (ERVKN) Easy to Read Version - Kannadam

1 ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು. ನನ್ನ ವಿಜ್ಞಾಪನೆಗೆ ಕಿವಿಗೊಡು.
2 ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು. ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
3 ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ದುಷ್ಟರು ನನ್ನ ಮೇಲೆ ಅಬ್ಬರಿಸಿದರು. ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು. ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
4 ನನ್ನ ಹೃದಯ ಬಡಿತವು ಮಿತಿಮೀರಿದೆ; ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
5 ನಾನು ಭಯದಿಂದ ನಡುಗುತ್ತಿದ್ದೇನೆ. ನಾನು ದಿಗಿಲುಗೊಂಡಿದ್ದೇನೆ.
6 ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ, ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
7 ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿ ಹೋಗುತ್ತಿದ್ದೆನು.
8 ನಾನು ಓಡಿಹೋಗಿ ಹಾನಿಕರವಾದ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
9 ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು. ಪಟ್ಟಣದಲ್ಲಿ ಹಿಂಸೆಯೂ ಕಲಹವೂ ಕಾಣುತ್ತಿದೆ.
10 ಹಗಲಿರುಳು, ನಗರದಲ್ಲೆಲ್ಲಾ ಅಪರಾಧ ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
11 ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ. ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.
12 ನನಗೆ ಅವಮಾನ ಮಾಡುವವನು ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು. ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುಗಳಾಗಿದ್ದಿದ್ದರೆ ಅಡಗಿಕೊಳ್ಳಬಹುದಿತ್ತು.
13 ಆದರೆ ನನಗೆ ಕೇಡು ಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ; ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
14 ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ, ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!
15 ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ! ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ! ಯಾಕಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.
16 ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು. ಯೆಹೋವನು ನನಗೆ ಉತ್ತರ ಕೊಡುವನು.
17 ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು. ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
18 ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ. ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
19 ದೇವರು ನನಗೆ ಕಿವಿಗೊಡುವನು. ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು.
20 ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ. ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
21 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು; ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
22 ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು; ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು. ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
23 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು. ಆತನು ನಿನ್ನನ್ನು ಉದ್ಧಾರ ಮಾಡುವನು. ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×