Bible Versions
Bible Books

1 Chronicles 10 (ERVKN) Easy to Read Version - Kannadam

1 ಫಿಲಿಷ್ಟಿಯರು ಇಸ್ರೇಲರ ವಿರೋಧವಾಗಿ ಕಾದಾಡಿದರು. ಆದರೆ ಇಸ್ರೇಲರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಬೇಕಾಯಿತು. ಇಸ್ರೇಲರಲ್ಲಿ ಬಹಳ ಮಂದಿ ಗಿಲ್ಬೋವ ಬೆಟ್ಟದ ಮೇಲೆ ಹತರಾದರು.
2 ಫಿಲಿಷ್ಟಿಯರು ಸೌಲನನ್ನು ಬೆನ್ನಟ್ಟುತ್ತಾ ಹೋಗಿ ಕೊನೆಗೆ ಸೌಲನನ್ನೂ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು.
3 ಸೌಲನ ಸುತ್ತಲೂ ಯುದ್ಧವು ಬಹು ಘೋರವಾಗಿ ನಡೆಯಿತು. ಬಿಲ್ಲುಗಾರರು ತಮ್ಮ ಬಿಲ್ಲುಗಳಿಂದ ಸೌಲನ ಕಡೆಗೆ ಗುರಿಯಿಟ್ಟು ಹೊಡೆದು ಅವನನ್ನು ಗಾಯ ಪಡಿಸಿದರು.
4 ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಖಡ್ಗದಿಂದ ನನ್ನನ್ನು ಇರಿದು ಕೊಂದುಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯಪಡಿಸಿ ಹಾಸ್ಯ ಮಾಡಲು ಸಾಧ್ಯವಾಗುವುದಿಲ್ಲ” ಎಂದನು. ಆದರೆ ಅವನ ಆಯುಧಹೊರುವವನು ಅದಕ್ಕೆ ಒಪ್ಪಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೆದರಿದನು. ಆಗ ಸೌಲನು ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸತ್ತನು.
5 ಅವನ ಆಯುಧ ಹೊರುವವನು ಸೌಲನು ಸತ್ತದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡನು.
6 ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಒಟ್ಟಿಗೆ ಸತ್ತರು.
7 ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರು ತಮ್ಮ ಸೈನ್ಯವು ವೈರಿಗಳಿಂದ ಓಡಿಸಲ್ಪಡುವದನ್ನು ನೋಡಿದರು. ಅರಸನಾದ ಸೌಲನು ಮತ್ತು ಅವನ ಗಂಡುಮಕ್ಕಳು ಸತ್ತು ಹೋಗಿರುವುದು ಅವರಿಗೆ ತಿಳಿಯಿತು. ಆಗ ಅವರೂ ತಮ್ಮತಮ್ಮ ಮನೆಗಳನ್ನು ಬಿಟ್ಟು ಓಡಿದರು. ಫಿಲಿಷ್ಟಿಯರು ಅವರ ಮನೆಗಳಿಗೆ ಬಂದಾಗ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ವಾಸಿಸಿದರು.
8 ಮರುದಿವಸ ಫಿಲಿಷ್ಟಿಯರು ಹೆಣಗಳ ಮೇಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದರು. ಆಗ ಅವರಿಗೆ ಗಿಲ್ಬೋವ ಬೆಟ್ಟದ ಮೇಲೆ ಸೌಲ ಮತ್ತು ಅವನ ಗಂಡುಮಕ್ಕಳ ಶರೀರಗಳು ದೊರಕಿದವು.
9 ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನೂ ತೆಗೆದುಕೊಂಡು ತಮ್ಮ ಊರಿನಲ್ಲಿದ್ದ ಜನರಿಗೂ ಅವರ ಸುಳ್ಳುದೇವರುಗಳಿಗೂ ತಿಳಿಸಲು ಸಂದೇಶಕರನ್ನು ಕಳುಹಿಸಿದರು.
10 ಫಿಲಿಷ್ಟಿಯರು ಸೌಲನ ಆಯುಧಗಳನ್ನು ತಮ್ಮ ದೇವರ ಆಲಯದಲ್ಲಿಟ್ಟರು. ಸೌಲನ ತಲೆಯನ್ನು ದಾಗೋನನ ದೇವಸ್ಥಾನದಲ್ಲಿ ತೂಗು ಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದು ಯಾಬೇಷ್ ಗಿಲ್ಯಾದಿನ ಜನರಿಗೆ ತಿಳಿಯಿತು.
12 ಆಗ ಯಾಬೇಷ್ ಗಿಲ್ಯಾದಿನ ರಣವೀರರು ಹೊರಟು ಸೌಲನ ಮತ್ತು ಅವನ ಗಂಡುಮಕ್ಕಳ ಶವಗಳನ್ನು ಯಾಬೇಷ್ ಗಿಲ್ಯಾದಿಗೆ ತಂದರು. ರಣವೀರರು ಸೌಲನ ಮತ್ತು ಅವನ ಗಂಡುಮಕ್ಕಳ ಎಲುಬುಗಳನ್ನು ಯಾಬೇಷಿನಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಹೂಳಿಟ್ಟರು. ಅನಂತರ ಏಳು ದಿವಸಗಳ ತನಕ ಅವರು ಶೋಕಿಸಿದರು.
13 ಸೌಲನು ಯೆಹೋವನಿಗೆ ಅವಿಧೇಯನಾಗಿದ್ದರಿಂದ ಸತ್ತನು. ಅವನು ಯೆಹೋವನ ಮಾತನ್ನು ಕೇಳದೆ ಹೋದನು.
14 ಅಲ್ಲದೆ ಅವನು ಯೆಹೋವನ ಸಲಹೆಯನ್ನು ಪಡೆದುಕೊಳ್ಳುವ ಬದಲಾಗಿ ಮಾಟಮಂತ್ರ ಮಾಡುವ ಹೆಂಗಸಿನ ಬಳಿಗೆ ಹೋದನು. ಆದ್ದರಿಂದಲೇ ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಷಯನ ಮಗನಾದ ದಾವೀದನಿಗೆ ಕೊಟ್ಟನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×