Bible Versions
Bible Books

1 Kings 17 (ERVKN) Easy to Read Version - Kannadam

1 ಎಲೀಯನು ಗಿಲ್ಯಾದಿನ ತಿಷ್ಬಿ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.
2 ನಂತರ ಯೆಹೋವನು ಎಲೀಯನಿಗೆ,
3 “ಈ ಸ್ಥಳವನ್ನು ತ್ಯಜಿಸಿ, ಪೂರ್ವದಿಕ್ಕಿಗೆ ಹೋಗು. ಕೆರೀತ್ ಹಳ್ಳದ ಹತ್ತಿರ ಅಡಗಿಕೊ. ಹಳ್ಳವು ಜೋರ್ಡನ್ ನದಿಯ ಪೂರ್ವದಲ್ಲಿದೆ.
4 ನೀನು ಹಳ್ಳದ ನೀರನ್ನು ಕುಡಿಯಬಹುದು. ಸ್ಥಳದಲ್ಲಿರುವ ನಿನಗೆ ಆಹಾರವನ್ನು ತಂದುಕೊಡಬೇಕೆಂದು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
5 ಆದುದರಿಂದ ಯೆಹೋವನು ಹೇಳಿದಂತೆ ಅವನು ಮಾಡಿದನು. ಅವನು ಜೋರ್ಡನ್ ನದಿಯ ಪೂರ್ವಕ್ಕಿರುವ ಕೆರೀತ್ ಹಳ್ಳದ ಹತ್ತಿರ ವಾಸಿಸಲು ಹೋದನು.
6 ಕಾಗೆಗಳು ಪ್ರತಿ ಮುಂಜಾನೆ ಮತ್ತು ಸಂಜೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತಂದು ಕೊಡುತ್ತಿದ್ದವು. ಎಲೀಯನು ಹಳ್ಳದ ನೀರನ್ನು ಕುಡಿಯುತ್ತಿದ್ದನು.
7 ಅಲ್ಲಿಯೂ ಮಳೆಯಿಲ್ಲದ್ದರಿಂದ, ಸ್ವಲ್ಪಕಾಲದ ಬಳಿಕ ಹಳ್ಳವೂ ಬತ್ತಿಹೋಯಿತು.
8 ನಂತರ ಯೆಹೋವನು ಎಲೀಯನಿಗೆ,
9 “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು.
11 ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
12 ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
13 ಎಲೀಯನು ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ.
14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ” ಎಂದು ಹೇಳಿದನು.
15 ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು.
16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.
17 ಸ್ವಲ್ಪಕಾಲದ ತರುವಾಯ ಸ್ತ್ರೀಯ ಮಗನು ಅಸ್ವಸ್ಥನಾದನು. ಅವನಿಗೆ ರೋಗವು ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಬಾಲಕನು ಉಸಿರಾಡುವುದನ್ನೇ ನಿಲ್ಲಿಸಿದನು.
18 ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯ ಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.
19 ಎಲೀಯನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿದನು. ಎಲೀಯನು ಬಾಲಕನನ್ನು ಅವಳಿಂದ ತೆಗೆದುಕೊಂಡು, ಮೇಲಂತಸ್ತಿಗೆ ಹೋದನು. ಅವನು ನೆಲೆಸಿದ್ದ ಕೊಠಡಿಯ ಹಾಸಿಗೆಯ ಮೇಲೆ ಬಾಲಕನನ್ನು ಮಲಗಿಸಿದನು.
20 ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು.
21 ಬಳಿಕ ಬಾಲಕನ ಮೇಲೆ ಎಲೀಯನು ಮೂರು ಬಾರಿ ಬೋರಲ ಬಿದ್ದು, “ನನ್ನ ದೇವರಾದ ಯೆಹೋವನೇ, ಬಾಲಕನಿಗೆ ಮತ್ತೆ ಜೀವವನ್ನು ಕೊಡು” ಎಂದು ಪ್ರಾರ್ಥಿಸಿದನು.
22 ಯೆಹೋವನು ಎಲೀಯನ ಪ್ರಾರ್ಥನೆಗೆ ಕಿವಿಗೊಟ್ಟನು. ಬಾಲಕನು ಮತ್ತೆ ಉಸಿರಾಡಲಾರಂಭಿಸಿದನು. ಅವನು ಜೀವಂತನಾದನು!
23 ಎಲೀಯನು ಬಾಲಕನನ್ನು ಕೆಳ ಅಂತಸ್ತಿಗೆ ಕರೆದೊಯ್ದನು. ಎಲೀಯನು ಬಾಲಕನನ್ನು ಅವನ ತಾಯಿಗೆ ಒಪ್ಪಿಸಿ, “ನಿನ್ನ ಮಗ ಬದುಕಿದ್ದಾನೆ, ನೋಡು” ಎಂದು ಹೇಳಿದನು.
24 ಸ್ತ್ರೀಯು, “ಈಗ ನಿಜವಾಗಿಯೂ ನೀನು ದೇವಮನುಷ್ಯನೆಂಬುದು ನನಗೆ ತಿಳಿಯಿತು. ಯೆಹೋವನು ನಿನ್ನ ಮೂಲಕ ನಿಜವಾಗಿಯೂ ಮಾತಾಡುತ್ತಾನೆಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×