Bible Versions
Bible Books

1 John 3 (ERVKN) Easy to Read Version - Kannadam

1 ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ದೇವರ ಮಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟರ ಮಟ್ಟಿಗೆ ದೇವರು ನಮ್ಮನ್ನು ಪ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಕ್ಕಳಾಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಕ್ಕಳೆಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರು ದೇವರನ್ನು ತಿಳಿದಿಲ್ಲ.
2 ಪ್ರಿಯ ಸ್ನೇಹಿತರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ. ನಾವು ಮುಂದೆ ಏನಾಗುವೆವೆಂಬುದನ್ನು ನಮಗಿನ್ನೂ ತೋರ್ಪಡಿಸಿಲ್ಲ. ಆದರೆ ಕ್ರಿಸ್ತನು ಮರಳಿ ಬಂದಾಗ ಅದನ್ನು ತಿಳಿದುಕೊಳ್ಳುತ್ತೇವೆ. ನಾವು ಆತನಂತಾಗುವೆವು. ನಾವು ಆತನ ನಿಜಸ್ವರೂಪವನ್ನೇ ನೋಡುವೆವು.
3 ಕ್ರಿಸ್ತನಲ್ಲಿ ನಿರೀಕ್ಷೆಯನ್ನು ಹೊಂದಿರುವ ಪ್ರತಿಯೊಬ್ಬನೂ ಕ್ರಿಸ್ತನು ಶುದ್ಧನಾಗಿರುವಂತೆ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
4 ಪಾಪ ಮಾಡುವವನು ದೇವರ ಕಟ್ಟಳೆಗಳನ್ನು ಉಲ್ಲಂಘಿಸುವವನಾಗಿದ್ದಾನೆ. ಹೌದು, ಪಾಪಮಾಡುವುದಕ್ಕೂ ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ಜೀವಿಸುವುದಕ್ಕೂ ಯಾವ ವ್ಯತ್ಯಾಸವಿಲ್ಲ.
5 ಕ್ರಿಸ್ತನು ಜನರ ಪಾಪಗಳನ್ನು ಹೋಗಲಾಡಿಸಲು ಬಂದನೆಂಬುದು ನಿಮಗೆ ತಿಳಿದಿದೆ. ಆತನಲ್ಲಿ ಪಾಪವೆಂಬುದಿಲ್ಲ.
6 ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.
7 ಪ್ರಿಯ ಮಕ್ಕಳೇ, ನಿಮ್ಮನ್ನು ಯಾರೂ ತಪ್ಪುಮಾರ್ಗಕ್ಕೆ ಎಳೆಯದಂತೆ ನೋಡಿಕೊಳ್ಳಿರಿ. ಕ್ರಿಸ್ತನು ನೀತಿವಂತನಾಗಿದ್ದಾನೆ. ಆತನಂತೆ ನೀತಿವಂತನಾಗಿರಲು ಬಯಸುವವನು ಒಳ್ಳೆಯದನ್ನು ಮಾಡಬೇಕು.
8 ಸೈತಾನನು ಆರಂಭದಿಂದಲೂ ಪಾಪಗಳನ್ನು ಮಾಡುತ್ತಿದ್ದಾನೆ. ಪಾಪಗಳನ್ನು ಮಾಡುತ್ತಲೇ ಇರುವವನು ಸೈತಾನನಿಗೆ ಸೇರಿದವನಾಗಿದ್ದಾನೆ. ದೇವರ ಮಗನಾದ ಕ್ರಿಸ್ತನು ಸೈತಾನನ ಕಾರ್ಯವನ್ನು ನಾಶಪಡಿಸುವುದಕ್ಕಾಗಿಯೇ ಬಂದನು.
9 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪಗಳಲ್ಲಿ ನೆಲೆಗೊಂಡಿರುವುದಿಲ್ಲ. ಏಕೆಂದರೆ ದೇವರು ದಯಪಾಲಿಸಿದ ಹೊಸ ಜೀವವು ಅವನಲ್ಲಿ ನೆಲೆಸಿರುತ್ತದೆ. ಅವನು ದೇವರಿಂದ ಹೊಸದಾಗಿ ಹುಟ್ಟಿದ ಕಾರಣ ಪಾಪದಲ್ಲೇ ಮುಂದುವರಿಯಲು ಅವನಿಗೆ ಸಾಧ್ಯವಿಲ್ಲ.
10 ಆದುದರಿಂದ ದೇವರ ಮಕ್ಕಳು ಯಾರೆಂಬುದನ್ನೂ ಸೈತಾನನ ಮಕ್ಕಳು ಯಾರೆಂಬುದನ್ನೂ ನಾವು ತಿಳಿದುಕೊಳ್ಳಬಹುದು. ಯೋಗ್ಯವಾದುದನ್ನು ಮಾಡದಿರುವ ಜನರು ದೇವರ ಮಕ್ಕಳಲ್ಲ. ತನ್ನ ಸಹೋದರನನ್ನು ಪ್ರೀತಿಸದಿರುವವನು ದೇವರ ಮಗನಲ್ಲ.
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ.
12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.
13 ಸಹೋದರ ಸಹೋದರಿಯರೇ, ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ.
14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ.
15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.
16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು.
17 ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ.
18 ನನ್ನ ಮಕ್ಕಳೇ, ನಮ್ಮ ಪ್ರೀತಿಯು ಕೇವಲ ಶಬ್ಧಗಳಲ್ಲಿ ಮತ್ತು ಮಾತಿನಲ್ಲಿ ಇರಬಾರದು. ನಮ್ಮ ಪ್ರೀತಿಯು ನಿಜವಾದ ಪ್ರೀತಿಯಾಗಿರಬೇಕು. ನಾವು ಮಾಡುವ ಕಾರ್ಯಗಳಲ್ಲಿಯೇ ನಮ್ಮ ಪ್ರೀತಿಯನ್ನು ತೋರ್ಪಡಿಸಬೇಕು.
19 This verse may not be a part of this translation
20 This verse may not be a part of this translation
21 ನನ್ನ ಪ್ರಿಯ ಸ್ನೇಹಿತರೇ, ನಾವು ತಪ್ಪು ಮಾಡುತ್ತಿಲ್ಲ ಎಂದು ನಮಗೆ ತಿಳಿದಿದ್ದರೆ, ನಾವು ದೇವರ ಬಳಿಗೆ ಧೈರ್ಯವಾಗಿ ಬರಲು ಸಾಧ್ಯ.
22 ಮತ್ತು ನಾವು ಕೇಳಿಕೊಳ್ಳುವವುಗಳನ್ನು ದೇವರು ನಮಗೆ ನೀಡುತ್ತಾನೆ. ನಾವು ಆತನಿಗೆ ವಿಧೇಯರಾಗಿರುವುದರಿಂದ ಮತ್ತು ಆತನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವುದರಿಂದ ಅವುಗಳನ್ನು ಆತನಿಂದ ಪಡೆದುಕೊಳ್ಳುತ್ತೇವೆ.
23 ದೇವರ ಆಜ್ಞೆ ಏನೆಂದರೆ ಆತನ ಮಗನಾದ ಯೇಸು ಕ್ರಿಸ್ತನಲ್ಲಿ ನಾವು ನಂಬಿಕೆಯಿಟ್ಟು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ.
24 ದೇವರ ಆಜ್ಞೆಗಳಿಗೆ ವಿಧೇಯನಾಗಿರುವವನು ದೇವರಲ್ಲಿ ನೆಲೆಸಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಸಿರುತ್ತಾನೆ. ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ಹೇಗೆ ತಿಳಿದದೆ? ದೇವರು ನಮಗೆ ದಯಪಾಲಿಸಿರುವ ಪವಿತ್ರಾತ್ಮನಿಂದಲೇ ನಮಗೆ ತಿಳಿದದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×