Bible Versions
Bible Books

1 Kings 5 (ERVKN) Easy to Read Version - Kannadam

1 ಹೀರಾಮನು ತೂರಿನ ರಾಜನಾಗಿದ್ದನು. ಹೀರಾಮನು ಯಾವಾಗಲೂ ದಾವೀದನ ಸ್ನೇಹಿತನಾಗಿದ್ದನು. ದಾವೀದನ ನಂತರ ಸೊಲೊಮೋನನು ನೂತನ ರಾಜನಾದನೆಂದು ಹೀರಾಮನು ಕೇಳಿ, ತನ್ನ ಸೇವಕರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು.
2 ಸೊಲೊಮೋನನು ರಾಜನಾದ ಹೀರಾಮನಿಗೆ,
3 “ನನ್ನ ತಂದೆಯಾದ ದಾವೀದನು ತನ್ನ ಸುತ್ತಮುತ್ತಲಿನವರೊಂದಿಗೆ ಅನೇಕ ಯುದ್ಧಗಳನ್ನು ಮಾಡಬೇಕಾಯಿತು, ಆದುದರಿಂದ ಅವನು ತನ್ನ ದೇವರಾದ ಯೆಹೋವನ ಗೌರವಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ತನ್ನ ಎಲ್ಲಾ ಶತ್ರುಗಳನ್ನು ಸೋಲಿಸಲು ಯೆಹೋವನು ಅವಕಾಶ ಕೊಡುವ ತನಕ ರಾಜನಾದ ದಾವೀದನು ಕಾಯುತ್ತಿದ್ದನು.
4 ಆದರೆ ಈಗ ನನ್ನ ದೇವರಾದ ಯೆಹೋವನು ನನ್ನ ದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದ್ದಾನೆ. ಈಗ ನನಗೆ ಶತ್ರುಗಳೇ ಇಲ್ಲ. ನನ್ನ ಜನರಿಗೆ ಯಾವ ಅಪಾಯವೂ ಇಲ್ಲ.
5 ನನ್ನ ತಂದೆಯಾದ ದಾವೀದನಿಗೆ ಯೆಹೋವನು, ‘ನಿನ್ನ ನಂತರ ನಿನ್ನ ಮಗನನ್ನು ನಾನು ರಾಜನನ್ನಾಗಿ ಮಾಡುತ್ತೇನೆ. ನನ್ನನ್ನು ಸನ್ಮಾನಿಸಲು ನಿನ್ನ ಮಗನು ನನಗೆ ಒಂದು ದೇವಾಲಯವನ್ನು ಕಟ್ಟುತ್ತಾನೆ’ ಎಂದು ವಾಗ್ದಾನ ಮಾಡಿದ್ದನು. ಈಗ, ನನ್ನ ದೇವರಾದ ಯೆಹೋವನ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಬೇಕೆಂದಿದ್ದೇನೆ.
6 ಆದುದರಿಂದ ನಿನ್ನ ಸಹಾಯವು ನನಗೆ ಬೇಕಾಗಿದೆ. ನಿನ್ನ ಜನರನ್ನು ಲೆಬನೋನಿಗೆ ಕಳುಹಿಸು. ಅಲ್ಲಿ ಅವರು ನನಗಾಗಿ ದೇವದಾರುಮರಗಳನ್ನು ಕಡಿದು ಬೀಳಿಸಲಿ. ನನ್ನ ಸೇವಕರೂ ನಿನ್ನವರೊಂದಿಗೆ ಕೆಲಸ ಮಾಡುತ್ತಾರೆ. ನಿನ್ನ ಸೇವಕರಿಗೆ ಗೊತ್ತುಪಡಿಸಿದ ವೇತನವನ್ನು ನಾನು ಕೊಡುತ್ತೇನೆ. ಆದರೆ ನಿನ್ನ ಸಹಾಯ ನನಗೆ ಬೇಕು. ನಮ್ಮ ಬಡಗಿಗಳು ಚೀದೋನ್ಯರ ಬಡಗಿಗಳಂತೆ ಕುಶಲಕರ್ಮಿಗಳಲ್ಲ” ಎಂದು ಹೇಳಿ ಕಳುಹಿಸಿದನು.
7 ಸೊಲೊಮೋನನು ಹೇಳಿದುದನ್ನು ಹೀರಾಮನು ಕೇಳಿದಾಗ ಬಹಳ ಸಂತೋಷಗೊಂಡು, “ಈ ಮಹಾ ಜನಾಂಗಕ್ಕೋಸ್ಕರ ದಾವೀದನಿಗೆ ವಿವೇಕಿಯಾದ ಮಗನನ್ನು ಕರುಣಿಸಿದ್ದಕ್ಕಾಗಿ ನಾನು ಯೆಹೋವನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದನು.
8 ನಂತರ ಹೀರಾಮನು ಸೊಲೊಮೋನನಿಗೆ ಸಂದೇಶವನ್ನು ಕಳುಹಿಸಿದನು: “ನಿನ್ನ ಕೋರಿಕೆಯು ನನಗೆ ತಿಳಿಯಿತು. ನಾನು ನಿನಗೆ ಬೇಕಾದ ಎಲ್ಲ ದೇವದಾರು ಮರಗಳನ್ನು ಮತ್ತು ತುರಾಯಿ ಮರಗಳನ್ನು ಕೊಡುತ್ತೇನೆ.
9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರತೀರಕ್ಕೆ ತರುತ್ತಾರೆ. ನಂತರ ನಾನು ಅವುಗಳನ್ನು ಒಟ್ಟಾಗಿ ಕಟ್ಟಿ, ನೀನು ತಿಳಿಸಿದ ಸ್ಥಳಕ್ಕೆ ತೇಲಿಬಿಡುತ್ತೇನೆ. ಗೊತ್ತುಪಡಿಸಿದ ಸ್ಥಳದಲ್ಲಿ ದಿಮ್ಮಿಗಳನ್ನು ಬೇರ್ಪಡಿಸುತ್ತೇನೆ; ನೀನು ಅವುಗಳನ್ನು ತೆಗೆದುಕೊಳ್ಳಬಹುದು. ಅವುಗಳಿಗೆ ಬದಲಾಗಿ ನೀನು ನನ್ನ ಮನೆಯವರಿಗೆ ಆಹಾರ ಸಾಮಾಗ್ರಿಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.”
10 This verse may not be a part of this translation
11 This verse may not be a part of this translation
12 ಯೆಹೋವನು ತಾನು ವಾಗ್ದಾನ ಮಾಡಿದ್ದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಹೀರಾಮನ ಮತ್ತು ಸೊಲೊಮೋನನ ನಡುವೆ ಸಮಾಧಾನವಿತ್ತು. ಇಬ್ಬರು ರಾಜರುಗಳು ತಮ್ಮತಮ್ಮಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.
13 ರಾಜನಾದ ಸೊಲೊಮೋನನು ಇಸ್ರೇಲಿನ ಮೂವತ್ತು ಸಾವಿರ ಜನರನ್ನು ಬಲತ್ಕಾರದಿಂದ ಕಾರ್ಯಕ್ಕೆ ನೇಮಿಸಿದನು.
14 ರಾಜನಾದ ಸೊಲೊಮೋನನು ಅದೋನಿರಾಮ ಎಂಬವನನ್ನು ಇವರಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿದನು. ಸೊಲೊಮೋನನು ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಒಂದೊಂದು ಗುಂಪಿನಲ್ಲಿ ಹತ್ತು ಸಾವಿರ ಜನರಿದ್ದರು. ಪ್ರತಿಯೊಂದು ಗುಂಪಿನವರು ಲೆಬನೋನಿನಲ್ಲಿ ಒಂದು ತಿಂಗಳು ಕೆಲಸ ಮಾಡಿದ ನಂತರ ಎರಡು ತಿಂಗಳು ಮನೆಗೆ ಹಿಂತಿರುಗುತ್ತಿದ್ದರು.
15 ಸೊಲೊಮೋನನು ಎಂಭತ್ತು ಸಾವಿರ ಜನರನ್ನು ಬಲಾತ್ಕಾರದಿಂದ ಬೆಟ್ಟಪ್ರದೇಶದಲ್ಲಿ ಕೆಲಸ ಮಾಡಲು ನೇಮಿಸಿದನು. ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಎಪ್ಪತ್ತು ಸಾವಿರ ಜನರು ಕಲ್ಲುಗಳನ್ನು ಹೊರುತ್ತಿದ್ದರು.
16 ಅಲ್ಲಿ ಕೆಲಸ ಮಾಡುವ ಜನರ ಮೇಲ್ವಿಚಾರಕರಾಗಿ ಮೂರು ಸಾವಿರದ ಮುನ್ನೂರು ಜನರಿದ್ದರು.
17 ರಾಜನಾದ ಸೊಲೊಮೋನನು ದೇವಾಲಯದ ಅಡಿಪಾಯಕ್ಕಾಗಿ ದೊಡ್ಡದಾದ ಹಾಗೂ ಬೆಲೆಬಾಳುವ ಕಲ್ಲುಗಳನ್ನು ಕೊರೆದು ತೆಗೆಯಲು ಆಜ್ಞಾಪಿಸಿದನು. ಕಲ್ಲುಗಳನ್ನು ಬಹು ಜಾಗರೂಕತೆಯಿಂದ ಕತ್ತರಿಸಿ ತೆಗೆದರು.
18 ನಂತರ ಸೊಲೊಮೋನನ ಮತ್ತು ಹೀರಾಮನ ಕಟ್ಟಡ ಕಟ್ಟುವವರು ಮತ್ತು ಗೆಬಾಲ್ಯ ಜನರು ಕಲ್ಲುಗಳನ್ನು ಕೆತ್ತಿದರು. ಅವರು ಕಲ್ಲುಗಳನ್ನು ಮತ್ತು ತೊಲೆಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಸಿದ್ಧಗೊಳಿಸಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×