Bible Versions
Bible Books

1 Peter 4 (ERVKN) Easy to Read Version - Kannadam

1 ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ.
2 ಆದ್ದರಿಂದ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ.
3 ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.
4 ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದುದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು.
5 ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು.
6 ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.
7 ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ.
8 ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ.
9 ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ.
10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ.
11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.
12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ.
13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ.
14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ.
15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ರೀತಿಯ ಸಂಕಟಕ್ಕೆ ಒಳಗಾಗಬಾರದು.
16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು.
17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?
18 ”ನೀತಿವಂತನೇ ರಕ್ಷಣೆಹೊಂದಲು ಕಷ್ಟವಾದರೆ ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”
19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×