Bible Versions
Bible Books

1 Samuel 31 (ERVKN) Easy to Read Version - Kannadam

1 ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಸೋತು ಓಡಿಹೋದರು. ಬಹಳ ಜನ ಇಸ್ರೇಲರು ಗಿಲ್ಬೋವ ಶಿಖರದಲ್ಲಿ ಹತರಾದರು.
2 ಫಿಲಿಷ್ಟಿಯರು ಸೌಲ ಮತ್ತು ಅವನ ಮಕ್ಕಳೊಂದಿಗೆ ಭೀಕರವಾಗಿ ಹೋರಾಡಿದರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ ಮತ್ತು ಮಲ್ಕೀಷೂವರನ್ನು ಫಿಲಿಷ್ಟಿಯರು ಕೊಂದರು.
3 ಸೌಲನ ವಿರುದ್ಧವಾದ ಯುದ್ಧವು ಬಹಳ ಘೋರವಾಗಿತ್ತು. ಬಿಲ್ಲುಗಾರರು ಸೌಲನ ಮೇಲೆ ಬಾಣಗಳನ್ನು ಬಿಟ್ಟಿದ್ದರಿಂದ ಸೌಲನು ಬಹಳವಾಗಿ ಗಾಯಗೊಂಡನು.
4 ಸೌಲನು ತನ್ನ ಅಯುಧವಾಹಕನಿಗೆ, “ನಿನ್ನ ಖಡ್ಗದಿಂದ ಇರಿದು ನನ್ನನ್ನು ಕೊಂದುಬಿಡು. ಆಗ, ಪರದೇಶೀಯರು ನನ್ನನ್ನು ಗಾಯಗೊಳಿಸುವುದಕ್ಕಾಗಲೀ ಅಪಹಾಸ್ಯ ಮಾಡುವುದಕ್ಕಾಗಲೀ ಸಾಧ್ಯವಾಗುವುದಿಲ್ಲ” ಎಂದನು. ಆದರೆ ಸೌಲನ ಆಯುಧವಾಹಕನು ನಿರಾಕರಿಸಿದನು. ಸೌಲನ ಸಹಾಯಕನು ಬಹಳ ಭಯಗೊಂಡಿದ್ದನು. ಆದ್ದರಿಂದ ಸೌಲನು ತನ್ನ ಸ್ವಂತ ಖಡ್ಗದಿಂದಲೇ ಇರಿದು ಆತ್ಮಹತ್ಯೆ ಮಾಡಿಕೊಂಡನು.
5 ಸೌಲನು ಸತ್ತುಹೋದದ್ದನ್ನು ಕಂಡ ಆಯುಧವಾಹಕನೂ ತನ್ನ ಖಡ್ಗದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡನು. ಅವನು ಸೌಲನೊಂದಿಗೆ ಅಲ್ಲಿಯೇ ಸತ್ತುಹೋದನು.
6 ಹೀಗೆ ಸೌಲನು ಮತ್ತು ಅವನ ಮೂವರು ಗಂಡುಮಕ್ಕಳೂ ಮತ್ತು ಸೌಲನ ಆಯುಧವಾಹಕನೂ ಅದೇ ದಿನ ಸತ್ತುಹೋದರು.
7 ಇಸ್ರೇಲರ ಸೈನ್ಯವು ಓಡಿಹೋಗುತ್ತಿರುವುದನ್ನು ಕಣಿವೆಯ ಮತ್ತೊಂದು ಪಕ್ಕದಲ್ಲಿ ವಾಸಮಾಡುತ್ತಿದ್ದ ಇಸ್ರೇಲರು ನೋಡಿದರು. ಸೌಲನು ಮತ್ತು ಅವನ ಮಕ್ಕಳು ಸತ್ತದ್ದನ್ನೂ ಅವರು ನೋಡಿದರು. ಆದುದರಿಂದ ಇಸ್ರೇಲರು ತಮ್ಮ ನಗರಗಳನ್ನು ಬಿಟ್ಟು ಓಡಿಹೋದರು. ನಂತರ ಫಿಲಿಷ್ಟಿಯರು ಬಂದು ನಗರಗಳನ್ನು ವಶಪಡಿಸಿಕೊಂಡು ನೆಲೆಸಿದರು.
8 ಮಾರನೆಯ ದಿನ, ಸತ್ತದೇಹಗಳಿಂದ ವಸ್ತುಗಳನ್ನು ದೋಚಲು ಫಿಲಿಷ್ಟಿಯರು ಬಂದರು. ಸೌಲನು ಮತ್ತು ಅವನ ಮೂರು ಜನ ಮಕ್ಕಳು ಗಿಲ್ಬೋವ ಶಿಖರದಲ್ಲಿ ಸತ್ತಿರುವುದನ್ನು ಅವರು ನೋಡಿದರು.
9 ಸೌಲನ ತಲೆಯನ್ನು ಫಿಲಿಷ್ಟಿಯರು ಕಡಿದುಹಾಕಿದರು. ಮತ್ತು ಅವನ ಆಯುಧಗಳನ್ನು ತೆಗೆದುಕೊಂಡರು. ಫಿಲಿಷ್ಟಿಯ ಜನರಿಗೆ ಮತ್ತು ಅವರ ವಿಗ್ರಹಗಳ ಗುಡಿಗೆ ವಿಜಯದ ವಾರ್ತೆಯನ್ನು ಕಳುಹಿಸಿದರು.
10 ಅಷ್ಟೋರೆತಳ ದೇವಾಲಯದಲ್ಲಿ ಅವರು ಸೌಲನ ಆಯುಧಗಳನ್ನು ಇಟ್ಟರು. ಫಿಲಿಷ್ಟಿಯರು ಸೌಲನ ದೇಹವನ್ನು ಬೇತ್‌ಷೆಯಾನಿನ ಗೋಡೆಗೆ ನೇತುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬುದನ್ನು ಯಾಬೆಷ್‌ಗಿಲ್ಯಾದಿನಲ್ಲಿ ವಾಸಿಸುತ್ತಿದ್ದ ಜನರೆಲ್ಲ ತಿಳಿದುಕೊಂಡರು.
12 ಆದುದರಿಂದ ಯಾಬೆಷಿನ ಸೈನಿಕರೆಲ್ಲ ಬೇತ್‌ಷೆಯಾನಿಗೆ ಹೋದರು. ಅವರು ರಾತ್ರಿಯೆಲ್ಲಾ ನಡೆದರು! ನಂತರ ಅವರು ಬೇತ್‌ಷೆಯಾನಿನ ಗೋಡೆಯಲ್ಲಿದ್ದ ಸೌಲನ ದೇಹವನ್ನು ಇಳಿಸಿದರು. ನಂತರ ಅವರು ಸೌಲನ ಗಂಡುಮಕ್ಕಳ ದೇಹಗಳನ್ನೂ ಇಳಿಸಿದರು. ನಂತರ ಅವರು ದೇಹಗಳನ್ನು ಯಾಬೇಷಿಗೆ ತೆಗೆದುಕೊಂಡು ಹೋದರು. ಸೌಲ ಮತ್ತು ಅವನ ಮೂವರು ಗಂಡುಮಕ್ಕಳ ದೇಹಗಳನ್ನು ಯಾಬೇಷಿನ ಜನರು ಅಲ್ಲಿ ದಹಿಸಿಬಿಟ್ಟರು.
13 ನಂತರ ಜನರು ಸೌಲ ಮತ್ತು ಅವನ ಮೂರು ಮಕ್ಕಳ ಮೂಳೆಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನ ಪಿಚುಲ ಮರದ ಕೆಳಗೆ ಸಮಾಧಿಮಾಡಿದರು. ನಂತರ ಯಾಬೇಷಿನ ಜನರು ದುಃಖದಿಂದ ಏಳು ದಿನಗಳ ಕಾಲ ಉಪವಾಸ ಮಾಡಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×