Bible Versions
Bible Books

1 Samuel 7 (ERVKN) Easy to Read Version - Kannadam

1 ಕಿರ್ಯತ್ಯಾರೀಮಿನ ಜನರು ಬಂದು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು. ಯೆಹೋವನ ಪೆಟ್ಟಿಗೆಯನ್ನು ಬೆಟ್ಟದ ಮೇಲಿದ್ದ ಅಬೀನಾದಾಬನ ಮನೆಯಲ್ಲಿಟ್ಟರು. ಯೆಹೋವನ ಪೆಟ್ಟಿಗೆಯನ್ನು ಕಾಯುವುದಕ್ಕಾಗಿ ಅಬೀನಾದಾಬನ ಮಗನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.
2 ಪೆಟ್ಟಿಗೆಯು ಕಿರ್ಯತ್ಯಾರೀಮಿನವರಲ್ಲಿ ಬಹುಕಾಲದವರೆಗೆ ಅಂದರೆ ಇಪ್ಪತ್ತು ವರ್ಷಗಳವರೆಗೆ ಇತ್ತು. ಇಸ್ರೇಲರು ಯೆಹೋವನ ಮಾರ್ಗವನ್ನು ಮತ್ತೆ ಅನುಸರಿಸಲು ಆರಂಭಿಸಿದರು.
3 ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.
4 ಆದ್ದರಿಂದ ಇಸ್ರೇಲರು ಬಾಳ್‌ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ತ್ಯಜಿಸಿ ಯೆಹೋವನ ಸೇವೆಯನ್ನು ಮಾತ್ರ ಮಾಡಿದರು.
5 ಸಮುವೇಲನು ಅವರಿಗೆ, “ಇಸ್ರೇಲರೆಲ್ಲರೂ ಮಿಚ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
6 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.
7 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಷ್ಟಿಯರಿಗೆ ಗೊತ್ತಾಯಿತು. ಫಿಲಿಷ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು. ಫಿಲಿಷ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯಗೊಂಡರು.
8 ಇಸ್ರೇಲರು ಸಮುವೇಲನಿಗೆ, “ನಮ್ಮ ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೋ!” ಎಂದು ಹೇಳಿದರು.
9 ಸಮುವೇಲನು ಕುರಿಮರಿಯೊಂದನ್ನು ತಂದು ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಸಮುವೇಲನು ಇಸ್ರೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು.
10 ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು.
11 ಇಸ್ರೇಲರು ಮಿಚ್ಪೆಯಿಂದ ಬಂದು ಫಿಲಿಷ್ಟಿಯರನ್ನು ದಾರಿಯುದ್ದಕ್ಕೂ ಸಂಹರಿಸುತ್ತಾ ಬೇತ್ಕರಿನವರೆಗೆ ಅಟ್ಟಿಸಿಕೊಂಡು ಹೋದರು.
12 ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು” ಎಂದು ಹೆಸರಿಟ್ಟನು.
13 ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ರೇಲರ ಭೂಮಿಯಲ್ಲಿ ಹೆಜ್ಜೆ ಇಡಲಿಲ್ಲ. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು.
14 ಫಿಲಿಷ್ಟಿಯರು ಎಕ್ರೋನ್‌ನಿಂದ ಗತ್‌ವರೆಗಿನ ಪ್ರದೇಶದ ಇಸ್ರೇಲ್ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇಸ್ರೇಲರು ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡರು. ಇಸ್ರೇಲರ ಮತ್ತು ಅಮೋರಿಯರ ಮಧ್ಯೆ ಶಾಂತಿ ನೆಲೆಸಿತ್ತು.
15 ಸಮುವೇಲನು ತನ್ನ ಜೀವಮಾನವೆಲ್ಲಾ ಇಸ್ರೇಲರನ್ನು ಮುನ್ನಡೆಸಿದನು;
16 ಇಸ್ರೇಲಿನಲ್ಲಿ ನ್ಯಾಯಪರಿಪಾಲನೆಗಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್ ಮತ್ತು ಮಿಚ್ಪೆ ಎಂಬ ಪಟ್ಟಣಗಳಿಗೆ ಹೋದನು. ಹೀಗೆ ಅವನು ಸ್ಥಳಗಳಲ್ಲೆಲ್ಲಾ ಇಸ್ರೇಲರಿಗೆ ನ್ಯಾಯತೀರಿಸುತ್ತಾ ಅವರನ್ನು ಆಳಿದನು.
17 ಆದರೆ ಸಮುವೇಲನ ಮನೆಯು ರಾಮದಲ್ಲಿತ್ತು. ಆದ್ದರಿಂದ ಸಮುವೇಲನು ಯಾವಾಗಲೂ ರಾಮಕ್ಕೆ ಹಿಂತಿರುಗುತ್ತಿದ್ದನು. ಸಮುವೇಲನು ರಾಮದಿಂದ ಇಸ್ರೇಲರಿಗೆ ನ್ಯಾಯತೀರ್ಪು ನೀಡುತ್ತಾ ಆಳಿದನು; ರಾಮದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×