Bible Versions
Bible Books

2 Chronicles 10 (ERVKN) Easy to Read Version - Kannadam

1 ರೆಹಬ್ಬಾಮನು ಶೆಕೆಮಿಗೆ ಹೋದನು. ಯಾಕಂದರೆ ಅಲ್ಲಿ ಇಸ್ರೇಲ್ ಜನರೆಲ್ಲಾ ಅವನನ್ನು ಅರಸನನ್ನಾಗಿ ಮಾಡಲು ಕೂಡಿ ಬಂದಿದ್ದರು.
2 ಯಾರೊಬ್ಬಾಮನು ರಾಜನಾದ ಸೊಲೊಮೋನನ ಬಳಿಯಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸಿಸುತ್ತಿದ್ದನು. ಅವನು ನೆಬಾಟನ ಮಗನು. ರೆಹಬ್ಬಾಮನು ರಾಜನಾದನೆಂಬ ಸುದ್ದಿ ತಿಳಿದಕೂಡಲೇ ಅವನು ಈಜಿಪ್ಟಿನಿಂದ ಹಿಂತಿರುಗಿ ಬಂದನು.
3 ಇಸ್ರೇಲರು ಯಾರೊಬ್ಬಾಮನನ್ನು ತಮ್ಮ ಬಳಿಗೆ ಕರೆಯಿಸಿದರು. ಆಗ ಯಾರೊಬ್ಬಾಮನೂ ಇಸ್ರೇಲರೂ ರೆಹಬ್ಬಾಮನ ಬಳಿಗೆ ಹೋಗಿ,
4 “ರೆಹಬ್ಬಾಮನೇ, ನಿನ್ನ ತಂದೆಯು ನಮ್ಮ ಮೇಲೆ ತುಂಬ ಭಾರವಾದ ನೊಗವನ್ನು ಹೊರಿಸಿದ್ದನು. ಭಾರವನ್ನು ನೀನು ಕಡಿಮೆ ಮಾಡಬೇಕು. ಆಗ ನಾವು ನಿನ್ನ ಸೇವೆಮಾಡುವೆವು” ಅಂದರು.
5 ಅದಕ್ಕೆ ರೆಹಬ್ಬಾಮನು, “ನೀವು ಮೂರು ದಿನಗಳ ನಂತರ ನನ್ನ ಬಳಿಗೆ ಬನ್ನಿರಿ” ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟನು.
6 ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಾಲೋಚಕರಾಗಿದ್ದ ಹಿರಿಯರೊಡನೆ ಮಾತಾಡಿ, “ಇವರಿಗೆ ನಾನು ಏನು ಉತ್ತರಕೊಡಬೇಕು?” ಎಂದು ವಿಚಾರಿಸಿದನು.
7 ಹಿರಿಯರು ಅವನಿಗೆ, “ನೀನು ಅವರಿಗೆ ಕರುಣೆಯನ್ನು ತೋರಿ, ಅವರನ್ನು ಮೆಚ್ಚಿಸಿ, ಅವರಿಗೆ ಒಳ್ಳೆಯ ಮಾತುಗಳನ್ನಾಡಿದರೆ ಅವರು ನಿರಂತರವಾಗಿ ನಿನ್ನ ಸೇವೆಮಾಡುವರು” ಎಂದು ಹೇಳಿದರು.
8 ಆದರೆ ರೆಹಬ್ಬಾಮನು ಹಿರಿಯರ ಸಲಹೆಯನ್ನು ಕೇಳಲಿಲ್ಲ. ಅವನೊಂದಿಗೆ ಬೆಳೆದ ಅವನ ಸಮಪ್ರಾಯದ ಯೌವನಸ್ಥರನ್ನು ವಿಚಾರಿಸಿ,
9 “ನನ್ನ ತಂದೆಯು ಅವರಿಗೆ ಕೊಟ್ಟ ಭಾರವನ್ನು ಹಗುರ ಮಾಡಲು ಜನರು ಕೇಳುತ್ತಿದ್ದಾರೆ. ನಾನು ಅವರಿಗೆ ಏನು ಉತ್ತರಕೊಡಬೇಕು?” ಎಂದು ಕೇಳಿದನು.
10 ಯೌವನಸ್ಥರು, “ನೀನು ಅವರಿಗೆ, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಕಿರಿಬೆರಳು ದಪ್ಪವಾಗಿದೆ.
11 ನನ್ನ ತಂದೆಯು ಭಾರವಾದ ನೊಗವನ್ನು ನಿಮ್ಮ ಮೇಲೆ ಹೊರಿಸಿದನು. ನಾನಾದರೋ ಅದನ್ನು ಅಧಿಕಗೊಳಿಸುವೆನು. ನನ್ನ ತಂದೆಯು ಚಾಟಿಯಿಂದ ನಿಮ್ಮನ್ನು ಶಿಕ್ಷಿಸಿದನು. ನಾನಾದರೋ ಮುಳ್ಳುಕೊರಡೆಗಳಿಂದ ನಿಮ್ಮನ್ನು ಶಿಕ್ಷಿಸುವೆನು’ ಎಂದು ಹೇಳು” ಎಂಬುದಾಗಿ ಸಲಹೆ ನೀಡಿದರು.
12 ಮೂರು ದಿವಸಗಳ ಬಳಿಕ ಯಾರೊಬ್ಬಾಮನೂ ಎಲ್ಲಾ ಇಸ್ರೇಲರು ರೆಹಬ್ಬಾಮನ ಬಳಿಗೆ ಬಂದರು. “ಮೂರು ದಿನಗಳ ನಂತರ ಬನ್ನಿ” ಎಂದು ರೆಹಬ್ಬಾಮನೇ ಅವರಿಗೆ ಹೇಳಿದ್ದನು.
13 ಆಗ ಅರಸನಾದ ರೆಹಬ್ಬಾಮನು ಹಿರಿಯರ ಸಲಹೆಯನ್ನು ತಿರಸ್ಕರಿಸಿ ಜನರೊಂದಿಗೆ ಬಹಳ ಕೀಳಾಗಿ ಮಾತನಾಡಿದನು.
14 ಯೌವನಸ್ಥರು ಹೇಳಿದ ಪ್ರಕಾರ ರೆಹಬ್ಬಾಮನು ಅವರಿಗೆ, “ನನ್ನ ತಂದೆಯು ನಿಮಗೆ ಭಾರವಾದ ನೊಗವನ್ನು ಹೊರಿಸಿದನು. ನಾನಾದರೋ ಅದನ್ನು ಇನ್ನೂ ಅಧಿಕಗೊಳಿಸುವೆನು. ನನ್ನ ತಂದೆಯು ಚಾಟಿಯಿಂದ ನಿಮ್ಮನ್ನು ಹೊಡೆದನು. ನಾನಾದರೋ ಮುಳ್ಳುಕೊರಡೆಗಳಿಂದ ನಿಮ್ಮನ್ನು ಹೊಡೆಯುವೆನು” ಅಂದನು.
15 ಹೀಗೆ ರೆಹಬ್ಬಾಮನು ಜನರ ಬೇಡಿಕೆಯನ್ನು ಕೇಳಲಿಲ್ಲ. ಯಾಕಂದರೆ ಇದು ದೇವರ ಚಿತ್ತವಾಗಿತ್ತು. ದೇವರು ಅಹೀಯನ ಮುಖಾಂತರ ಯಾರೊಬ್ಬಾಮನಿಗೆ ಹೇಳಿದ ಮಾತು ನೆರವೇರುವಂತೆ ಹೀಗಾಯಿತು. ಅಹೀಯನು ಶೀಲೋವಿನವನಾಗಿದ್ದನು. ಯಾರೊಬ್ಬಾಮನು ನೆಬಾಟನ ಮಗನಾಗಿದ್ದನು.
16 ರಾಜನಾದ ರೆಹಬ್ಬಾಮನು ತಮ್ಮ ಮಾತನ್ನು ಕೇಳದೆ ಹೋದದ್ದನ್ನು ಇಸ್ರೇಲರು ನೋಡಿ ಅವನಿಗೆ, “ನಾವು ದಾವೀದನ ಕುಟುಂಬದ ಭಾಗವಾಗಿದ್ದೇವೋ? ಇಲ್ಲ. ನಮಗೆ ಇಷಯನ ಆಸ್ತಿಯಲ್ಲಿ ಪಾಲಿದೆಯೋ? ಇಲ್ಲ. ಆದುದರಿಂದ ಇಸ್ರೇಲರೇ, ನಾವು ನಮ್ಮನಮ್ಮ ಮನೆಗಳಿಗೆ ಹೋಗೋಣ. ದಾವೀದನ ಮಗನು ಅವನ ವಂಶದವರನ್ನೇ ಆಳಲಿ” ಎಂದು ಹೇಳಿ ಸೇರಿ ಬಂದವರನ್ನೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಕ್ಕೆ ಕಳುಹಿಸಿದರು.
17 ಆದರೆ ಇಸ್ರೇಲರಲ್ಲಿ ಕೆಲವರು ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಇವರಿಗೆ ರೆಹಬ್ಬಾಮನೇ ರಾಜನಾದನು.
18 ಹದೋರಾಮನು ಬಿಟ್ಟೀಕೆಲಸ ಮಾಡುತ್ತಿದ್ದವರ ಅಧಿಕಾರಿ. ಅವನನ್ನು ರೆಹಬ್ಬಾಮನು ಇಸ್ರೇಲರ ಬಳಿಗೆ ಕಳುಹಿಸಿದನು. ಆದರೆ ಇಸ್ರೇಲರು ಅವನ ಮೇಲೆ ಕಲ್ಲೆಸೆದು ಕೊಂದರು. ಇದನ್ನು ನೋಡಿದ ರೆಹಬ್ಬಾಮನು ಓಡಿಹೋಗಿ ತನ್ನ ರಥವನ್ನು ಏರಿ ಅಲ್ಲಿಂದ ತಪ್ಪಿಸಿಕೊಂಡು ಜೆರುಸಲೇಮಿಗೆ ಬಂದನು.
19 ಅಂದಿನಿಂದ ಇಂದಿನವರೆಗೆ ಇಸ್ರೇಲರು ದಾವೀದನ ಕುಟುಂಬಕ್ಕೆ ವಿರುದ್ಧವಾದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×