Bible Versions
Bible Books

Amos 4 (ERVKN) Easy to Read Version - Kannadam

1 ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.
2 ನನ್ನ ಒಡೆಯನಾದ ಯೆಹೋವನು ಒಂದು ವಾಗ್ದಾನ ಮಾಡಿರುತ್ತಾನೆ. ಆತನ ಪರಿಶುದ್ಧತೆಯ ಮೇಲೆ ಆಣೆಹಾಕಿ ವಾಗ್ದಾನ ಮಾಡಿರುತ್ತಾನೆ. ಏನಂದರೆ ನಿಮ್ಮ ಮೇಲೆ ಸಂಕಟಗಳು ಬರುವವು. ಜನರು ನಿಮಗೆ ಕೊಕ್ಕೆ ಸಿಕ್ಕಿಸಿ ಕೈದಿಗಳನ್ನಾಗಿ ಮಾಡಿ ಎಳೆದುಕೊಂಡು ಹೋಗುವರು. ನಿಮ್ಮ ಮಕ್ಕಳನ್ನು ಮೀನಿನ ಗಾಳಗಳಿಗೆ ಸಿಕ್ಕಿಸಿ ಎಳೆದುಕೊಂಡು ಹೋಗುವರು.
3 ನಿಮ್ಮ ಪಟ್ಟಣಗಳು ನಾಶವಾಗುವವು. ಗೋಡೆಯಲ್ಲಿರುವ ಬಿರುಕುಗಳ ಮೂಲಕ ಹೆಂಗಸರು ತಪ್ಪಿಸಿಕೊಂಡು ಹೋಗಿ ಹೆಣಗಳ ರಾಶಿಯ ಮೇಲೆ ಬೀಳುವರು.
4 ಯೆಹೋವನು ಹೀಗೆ ಹೇಳುತ್ತಾನೆ, “ಬೇತೇಲಿನಲ್ಲಿ ಪಾಪ ಮಾಡಿರಿ. ಗಿಲ್ಗಾಲಿಗೆ ಹೋಗಿ ಇನ್ನೂ ಹೆಚ್ಚಾಗಿ ಪಾಪ ಮಾಡಿರಿ. ನಿಮ್ಮ ಯಜ್ಞವನ್ನು ಮುಂಜಾನೆ ಸಮರ್ಪಿಸಿರಿ. ಮೂರು ದಿವಸಗಳ ಹಬ್ಬಕ್ಕೆ ನಿಮ್ಮ ಬೆಳೆಯ ಹತ್ತನೆಯ ಒಂದು ಭಾಗವನ್ನು ತೆಗೆದುಕೊಂಡು ಬನ್ನಿ.
5 ಹುಳಿಹಾಕಿದ ರೊಟ್ಟಿಗಳನ್ನು ಕೃತಜ್ಞತಾ ಹೋಮಮಾಡಿರಿ. ಸ್ವೇಚ್ಚೆಯಿಂದ ಕೊಡುವ ಕಾಣಿಕೆ ಬಗ್ಗೆ ಎಲ್ಲರಿಗೂ ತಿಳಿಸಿರಿ. ಇಸ್ರೇಲರೇ ಅಂಥಾ ಕಾರ್ಯಗಳನ್ನು ಮಾಡಲು ನಿನಗೆ ಇಷ್ಟ. ಆದುದರಿಂದ ಹೋಗಿ ಅದನ್ನು ಮಾಡಿರಿ.” ಇದು ಯೆಹೋವನ ನುಡಿ.
6 “ನೀವು ನನ್ನ ಬಳಿಗೆ ಬರುವಂತೆ ಅನೇಕ ಕಾರ್ಯಾಗಳನ್ನು ಮಾಡಿದೆನು. ನಿಮಗೆ ನಾನು ಊಟಕ್ಕೆ ಕೊಡಲಿಲ್ಲ. ನಿಮ್ಮ ಯಾವ ಪಟ್ಟಣದಲ್ಲಿಯೂ ಆಹಾರವಿಲ್ಲ. ಆದರೂ ನೀವು ನನ್ನ ಬಳಿಗೆ ಹಿಂದಿರುಗಿ ಬರಲಿಲ್ಲ.” ಇದು ಯೆಹೋವನ ನುಡಿ.
7 “ನಾನು ಮಳೆಯನ್ನು ನಿಲ್ಲಿಸಿದೆನು. ಸುಗ್ಗಿಗೆ ಮೂರು ತಿಂಗಳು ಇರುವಾಗಲೇ ಮಳೆಗೆರೆಯುವುದನ್ನು ನಿಲ್ಲಿಸಿದೆನು. ಆದುದರಿಂದ ಪೈರು ಬೆಳೆಯಲಿಲ್ಲ. ಆಮೇಲೆ ನಾನು ಒಂದು ಪಟ್ಟಣದ ಮೇಲೆ ಮಳೆ ಬೀಳುವಂತೆ ಮಾಡಿದೆನು. ಬೇರೆ ಪಟ್ಟಣಗಳ ಮೇಲೆ ಬೀಳದಂತೆ ಮಾಡಿದೆನು. ದೇಶದ ಒಂದು ಭಾಗದಲ್ಲಿ ಮಳೆ ಸುರಿಯಿತು. ಇನ್ನೊಂದು ಭಾಗವು ಒಣಗಿ ಬೆಂಗಾಡಾಗಿತ್ತು.
8 ಹೀಗೆ ಎರಡು ಮೂರು ಪಟ್ಟಣಗಳ ನಿವಾಸಿಗಳು ನೀರಿಗಾಗಿ ಇನ್ನೊಂದು ಪಟ್ಟಣಕ್ಕೆ ಕಷ್ಟಪಟ್ಟುಕೊಂಡು ಹೋದರು. ಆದರೆ ಅಲ್ಲಿ ಎಲ್ಲರಿಗೂ ನೀರು ದೊರಕಲಿಲ್ಲ. ಹೀಗಾದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇವು ಯೆಹೋವನ ನುಡಿಗಳು.
9 “ನಿಮ್ಮ ಬೆಳೆಗಳು ಸೂರ್ಯನ ಶಾಖದಿಂದಲೂ ರೋಗದಿಂದಲೂ ಸಾಯುವಂತೆ ಮಾಡಿದೆನು. ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ನಾನು ನಾಶಮಾಡಿದೆನು. ಮಿಡಿತೆಗಳು ನಿಮ್ಮ ಅಂಜೂರದ ಮತ್ತು ಆಲೀವ್ ಮರಗಳನ್ನು ತಿಂದು ಬಿಟ್ಟವು. ಆದಾಗ್ಯೂ ಸಹಾಯಕ್ಕಾಗಿ ನೀವು ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
10 “ನಾನು ಈಜಿಪ್ಟಿಗೆ ವ್ಯಾಧಿಗಳನ್ನು ಹೇಗೆ ಬರಮಾಡಿದೆನೋ ಹಾಗೆಯೇ ನಿಮಗೂ ಮಾಡಿದೆನು. ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದೆನು. ನಿಮ್ಮ ಕುದುರೆಗಳನ್ನು ತೆಗೆದುಕೊಂಡೆನು. ಹೆಣಗಳ ರಾಶಿಯಿಂದ ನಿಮ್ಮ ಸ್ಥಳವು ದುರ್ವಾಸನೆಯಿಂದ ತುಂಬುವಂತೆ ಮಾಡಿದೆನು. ಆದಾಗ್ಯೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
11 “ಸೊದೋಮ್ ಗೊಮೋರವನ್ನು ನಾಶಮಾಡಿದಂತೆ ನಾನು ನಿಮ್ಮನ್ನು ನಾಶಮಾಡಿದೆನು. ನಗರಗಳು ಸಂಪೂರ್ಣವಾಗಿ ನಾಶವಾದವು. ನೀವು ಬೆಂಕಿಯಿಂದ ಎಳೆದ ಕೊಳ್ಳಿಯಂತಿದ್ದೀರಿ. ಆದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
12 “ಆದುದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೋ.
13 ನಾನು ಯಾರು? ನಾನೇ ಪರ್ವತಗಳನ್ನು ನಿರ್ಮಿಸಿದಾತನು. ನಿಮ್ಮಲ್ಲಿ ಮನಸ್ಸನ್ನು ಉಂಟುಮಾಡಿದಾತನು ನಾನೇ. ನಾನು ಜನರಿಗೆ ಮಾತನಾಡಲು ಕಲಿಸಿದೆನು. ಕತ್ತಲೆಯನ್ನು ಬೆಳಕು ಮಾಡಿದೆನು. ಭೂಮಿಯ ಮೇಲಿರುವ ಪರ್ವತಗಳ ಮೇಲೆ ನಾನು ನಡಿಯುತ್ತೇನೆ. ನಾನು ಯಾರು? ನನ್ನ ಹೆಸರು ಸೈನ್ಯಗಳ ದೇವರಾದ ಯೆಹೋವನು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×