Bible Versions
Bible Books

Amos 7 (ERVKN) Easy to Read Version - Kannadam

1 ಯೆಹೋವನು ನನಗೆ ಇದನ್ನು ತೋರಿಸಿದನು: ಎರಡನೇ ಬೆಳೆಯು ಬೆಳೆಯಲಾರಂಭಿಸಿದ ಕಾಲದಲ್ಲಿ ಆತನು ಮಿಡಿತೆಗಳನ್ನು ತಯಾರುಮಾಡುತ್ತಿದ್ದನು. ಅರಸನು ಮೊದಲನೇ ಬೆಳೆಯನ್ನು ರಾಶಿಮಾಡಿಸಿಕೊಂಡು ಹೋದ ನಂತರದ ಬೆಳೆ ಇದು.
2 ಮಿಡಿತೆಗಳು ದೇಶದ ಎಲ್ಲಾ ಹುಲ್ಲನ್ನು ತಿಂದುಬಿಟ್ಟವು. ಬಳಿಕ ನಾನು ಹೇಳಿದ್ದೇನಂದರೆ, “ನನ್ನ ಒಡೆಯನಾದ ಯೆಹೋವನೇ, ನಮ್ಮನ್ನು ಕ್ಷಮಿಸು. ಯಾಕೋಬನು ತೀರಾ ದುರ್ಬಲನಾಗಿರುವದರಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಅವನಿಗಾಗಿ ನಾನು ನಿನ್ನನ್ನು ಬೇಡುತ್ತೇನೆ.”
3 ಆಗ ಯೆಹೋವನು ತನ್ನ ನಿರ್ಧಾರವನ್ನು ಬದಲಿಸಿ ಹೀಗಂದನು, “ಅದು ನೆರವೇರುವುದಿಲ್ಲ.”
4 ನನ್ನ ಒಡೆಯನಾದ ಯೆಹೋವನು ವಿಷಯಗಳನ್ನು ನನಗೆ ತೋರಿಸಿದನು. ದೇವರಾದ ಯೆಹೋವನು ಬೆಂಕಿಯಿಂದ ನ್ಯಾಯತೀರಿಸುವುದಕ್ಕಾಗಿ ಕರೆಯುವುದನ್ನು ಕಂಡೆನು. ಬೆಂಕಿಯು ಮಹಾ ಸಾಗರವನ್ನು ನಾಶಮಾಡಿತು. ಭೂಮಿಯನ್ನು ತಿಂದುಬಿಡಲೂ ಪ್ರಾರಂಭಿಸಿತು.
5 ಆಗ ನಾನು, “ದೇವರಾದ ಯೆಹೋವನೇ, ಸಾಕು, ನಿಲ್ಲಿಸು ಎಂದು ಬೇಡುತ್ತೇನೆ, ಯಾಕೋಬನು ಇದರಿಂದ ಉಳಿಯಲಿಕ್ಕಿಲ್ಲ. ಅವನು ಇನ್ನೂ ಚಿಕ್ಕವನು” ಅಂದೆನು.
6 ಆಗ ದೇವರಾದ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ, “ಇದು ಕೂಡಾ ನೆರವೇರದು” ಎಂದು ಹೇಳಿದನು.
7 ಯೆಹೋವನು ದರ್ಶನವನ್ನು ನನಗೆ ದಯಪಾಲಿಸಿದನು. ಕೈಯಲ್ಲಿ ತೂಗುಗುಂಡನ್ನು ಹಿಡಿದುಕೊಂಡು ಗೋಡೆಯ ಬದಿಯಲ್ಲಿ ನಿಂತಿದ್ದನು. ಗೋಡೆಯು ನೂಲಿನಿಂದ ಗುರುತು ಮಾಡಲ್ಪಟ್ಟಿತ್ತು.
8 ಆಗ ಯೆಹೋವನು ನನಗೆ, “ಆಮೋಸನೇ, ಏನನ್ನು ನೋಡುತ್ತೀ?” ಎಂದು ಕೇಳಿದನು. ಅದಕ್ಕೆ ನಾನು, “ನೂಲು ಗುಂಡು” ಅಂದೆನು. ಆಗ ನನ್ನ ಒಡೆಯನು, “ನೋಡು, ನನ್ನ ಜನರಾದ ಇಸ್ರೇಲರ ಮೇಲೆ ನೂಲುಗುಂಡನ್ನು ಹಾಕುವೆನು. ಅವರನ್ನು ನಾನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಅವರ ಪಾಪದ ಸ್ಥಳಗಳನ್ನು ನಾನು ತೆಗೆದುಬಿಡುವೆನು.
9 ಇಸಾಕನ ವೇದಿಕೆಗಳೆಲ್ಲಾ ನಾಶವಾಗುವದು. ಇಸ್ರೇಲಿನ ಪವಿತ್ರ ಸ್ಥಳಗಳೆಲ್ಲಾ ಬಂಡೆಯ ರಾಶಿಯಾಗಿ ಮಾರ್ಪಡುವವು. ಯಾರೊಬ್ಬಾಮನ ಕುಟುಂಬದ ಮೇಲೆ ಆಕ್ರಮಣ ಮಾಡಿ ಅವರನ್ನು ಸಂಹರಿಸುವೆನು” ಎಂದು ಹೇಳಿದನು.
10 ಬೇತೇಲಿನ ಯಾಜಕನಾದ ಅಮಚ್ಯನು ಇಸ್ರೇಲಿನ ಅರಸನಾದ ಯಾರೊಬ್ಬಾಮನಿಗೆ ಪತ್ರವನ್ನು ಕಳುಹಿಸಿದನು. “ನಿನಗೆ ವಿರುದ್ಧವಾಗಿ ಆಮೋಸನು ಯೋಜನೆಗಳನ್ನು ಮಾಡುತ್ತಿದ್ದಾನೆ. ಇಸ್ರೇಲಿನ ಜನರು ನಿನಗೆ ವಿರುದ್ಧವಾಗಿ ಯುದ್ಧಮಾಡುವಂತೆ ಪ್ರಯತ್ನಿಸುತ್ತಾನೆ. ಅವನು ಎಷ್ಟೆಲ್ಲಾ ಮಾತಾಡುತ್ತಾನೆಂದರೆ, ದೇಶವು ಅವನ ಮಾತುಗಳನ್ನು ತುಂಬಲು ಸಾಧ್ಯವಿಲ್ಲ.
11 ಅಮೋಸನು, ‘ಯಾರೊಬ್ಬಾಮನು ಕತ್ತಿಯಿಂದ ಸಂಹರಿಸಲ್ಪಡುವನು ಮತ್ತು ಇಸ್ರೇಲಿನ ಜನರು ಸೆರೆಹಿಡಿಯಲ್ಪಟ್ಟವರಾಗಿ ಪರದೇಶಕ್ಕೆ ಒಯ್ಯಲ್ಪಡುವರು” ಎಂದು ಹೇಳಿದ್ದಾನೆ.
12 ಅಮಚ್ಯನು ಆಮೋಸನಿಗೆ ಹೇಳಿದ್ದೇನಂದರೆ, “ಭವಿಷ್ಯವಾದಿಯೇ, ನೀನು ಯೆಹೂದಕ್ಕೆ ಹೋಗಿ ನಿನ್ನ ಹೊಟ್ಟೆ ಹೊರಕೋ. ನಿನ್ನ ಪ್ರಸಂಗವನ್ನು ಅಲ್ಲಿಯೇ ಮಾಡು.
13 ಬೇತೇಲಿನಲ್ಲಿ ಇನ್ನು ನೀನು ಪ್ರವಾದಿಸುವದು ಬೇಡ. ಇದು ಯಾರೊಬ್ಬಾಮನ ಪವಿತ್ರಸ್ಥಳ. ಇದು ಇಸ್ರೇಲಿನ ದೇವಾಲಯ” ಎಂದು ಹೇಳಿದನು.
14 ಅದಕ್ಕೆ ಅಮೋಸನು ಅಮಚ್ಯನಿಗೆ, “ಪ್ರವಾದಿಸುವದು ನನ್ನ ಕೆಲಸವಲ್ಲ. ಅಲ್ಲದೆ ನಾನು ಪ್ರವಾದಿಗಳ ಕುಟುಂಬಕ್ಕೂ ಸೇರಿದವನಲ್ಲ. ನಾನು ದನ ಮೇಯಿಸುವವನೂ, ಅತ್ತಿ ಮರಗಳನ್ನು ಹತ್ತಿ ಹಣ್ಣು ಕೀಳುವವನೂ ಆಗಿದ್ದೇನೆ.
15 ನಾನು ಕುರಿಕಾಯುತ್ತಿರುವಾಗ ಯೆಹೋವನು ನನ್ನನ್ನು ಕುರಿಗಳ ಹಿಂದೆ ಹೋಗಬೇಡ ಎಂದು ಕರೆದನು. ಆತನು ನನಗೆ, ‘ನನ್ನ ಜನರಾದ ಇಸ್ರೇಲರ ಬಳಿಗೆ ಹೋಗಿ ಪ್ರವಾದಿಸು’ ಎಂದು ಹೇಳಿದನು.
16 ಆದುದರಿಂದ ಯೆಹೋವನ ಸಂದೇಶಕ್ಕೆ ಕಿವಿಗೊಡು. ಆದರೆ ನೀನು, ‘ಇಸ್ರೇಲರಿಗೆ ವಿರುದ್ಧವಾಗಿ ಪ್ರವಾದಿಸಬೇಡ. ಇಸಾಕನ ಕುಟುಂಬದ ವಿರುದ್ಧ ಪ್ರಸಂಗಿಸಬೇಡ’ ಎಂದು ಹೇಳುತ್ತಿ.
17 ಆದರೆ ದೇವರಾದ ಯೆಹೋವನು ಹೇಳುವದೇನೆಂದರೆ, ‘ನಿನ್ನ ಹೆಂಡತಿಯು ಪಟ್ಟಣದೊಳಗೆ ವೇಶ್ಯೆಯಾಗುವಳು. ನಿನ್ನ ಗಂಡು, ಹೆಣ್ಣುಮಕ್ಕಳು ಕತ್ತಿಯಿಂದ ಸಾಯುವರು. ಅನ್ಯರು ನಿನ್ನ ದೇಶವನ್ನು ಕಿತ್ತುಕೊಂಡು ತಮ್ಮೊಳಗೆ ಹಂಚಿಕೊಳ್ಳುವರು. ಮತ್ತು ನೀನು ಪರದೇಶದಲ್ಲಿ ಸಾಯುವಿ. ಇಸ್ರೇಲಿನ ಜನರು ಖಂಡಿತವಾಗಿಯೂ ಸೆರೆಹಿಡಿಯಲ್ಪಟ್ಟು ತಮ್ಮ ದೇಶದಿಂದ ಒಯ್ಯಲ್ಪಡುವರು.’“
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×