Bible Versions
Bible Books

Colossians 4 (ERVKN) Easy to Read Version - Kannadam

1 ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.
2 ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
3 ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ.
4 ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
5 ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ.
6 ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.
7 ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ.
8 ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ.
9 This verse may not be a part of this translation
10 ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.)
11 ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.
12 ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ.
13 ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ.
14 ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.
15 ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ.
16 ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ.
17 ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.
18 ನಿಮಗೆ ನನ್ನ ವಂದನೆಗಳು. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಇದನ್ನು ಬರೆದಿದ್ದೇನೆ. ಸೆರೆಮನೆಯಲ್ಲಿರುವ ನನ್ನನ್ನು ಜ್ಞಾಪಿಸಿಕೊಳ್ಳಿರಿ. ದೇವರ ಕೃಪೆಯು ನಿಮ್ಮೊಂದಿಗಿರಲಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×