Bible Versions
Bible Books

Exodus 33 (ERVKN) Easy to Read Version - Kannadam

1 ತರುವಾಯ ಯೆಹೋವನು ಮೋಶೆಗೆ, “ನೀನು ಮತ್ತು ಈಜಿಪ್ಟಿನಿಂದ ನೀನು ಕರೆದುಕೊಂಡು ಬಂದ ಜನರು ಸ್ಥಳವನ್ನು ಬಿಡಬೇಕು. ನಾನು ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ ದೇಶಕ್ಕೆ ಹೋಗಿ. ನಾನು ಅವರಿಗೆ ‘ನಿಮ್ಮ ನಂತರ ಜೀವಿಸುವ ನಿಮ್ಮ ಸಂತತಿಯವರಿಗೆ ದೇಶವನ್ನು ಕೊಡುವೆನು’ ಎಂದು ನಾನು ಅವರಿಗೆ ವಾಗ್ದಾನ ಮಾಡಿದ್ದೇನೆ.
2 ನಿಮ್ಮ ಮುಂದೆ ಹೋಗುವುದಕ್ಕೆ ನಾನು ಒಬ್ಬ ದೂತನನ್ನು ಕಳುಹಿಸುವೆನು. ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಸೋಲಿಸುವೆನು. ನಿಮ್ಮ ದೇಶದಿಂದ ಅವರನ್ನು ಬಲವಂತದಿಂದ ಅಟ್ಟಿಬಿಡುವೆನು.
3 ಆದ್ದರಿಂದ ಸಮೃದ್ಧಿಕರವಾದ ದೇಶಕ್ಕೆ ಹೋಗಿರಿ. ಆದರೆ ನಾನು ನಿಮ್ಮೊಂದಿಗೆ ಬರುವುದಿಲ್ಲ. ನೀವು ನನ್ನ ಆಜ್ಞೆಗೆ ವಿಧೇಯರಾಗದೆ ನನ್ನನ್ನು ಕೋಪಗೊಳಿಸುತ್ತೀರಿ. ನಾನು ನಿಮ್ಮೊಂದಿಗೆ ಬಂದರೆ, ದಾರಿಯಲ್ಲಿ ನಿಮ್ಮನ್ನು ಸಂಹರಿಸುವೆನು” ಎಂದು ಹೇಳಿದನು.
4 ದುಃಖದ ಸಮಾಚಾರವನ್ನು ಕೇಳಿ ಜನರು ನೊಂದುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.
5 ಯೆಹೋವನು ಮೋಶೆಗೆ, “ಇಸ್ರೇಲರಿಗೆ ಹೀಗೆಂದು ಹೇಳು: ನೀವು ಅವಿಧೇಯರಾದ ಜನರಾಗಿದ್ದೀರಿ. ನಾನು ನಿಮ್ಮೊಡನೆ ಕ್ಷಣಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೆಲ್ಲಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದ್ದನ್ನು ನಾನೇ ತಿಳಿಸುವೆನು!” ಎಂದು ಹೇಳಿದನು.
6 ಇಸ್ರೇಲರು ಹೋರೆಬ್ ಬೆಟ್ಟದಲ್ಲಿದ್ದಾಗ ಆಭರಣಗಳನ್ನು ಧರಿಸಿಕೊಳ್ಳುವುದನ್ನು ಬಿಟ್ಟುಬಿಟ್ಟರು.
7 ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ಸ್ವಲ್ಪದೂರ ತೆಗೆದುಕೊಂಡು ಹೋಗುತ್ತಿದ್ದನು. ಮೋಶೆಯು ಅದನ್ನು, “ದೇವದರ್ಶನದ ಗುಡಾರ ಎಂದು ಕರೆದನು. ಯೆಹೋವನಿಂದ ಉತ್ತರವನ್ನು ಕೇಳಬೇಕೆಂದು ಬಯಸುವ ವ್ಯಕ್ತಿಯು ಪಾಳೆಯದ ಹೊರಗಿದ್ದ ದೇವದರ್ಶನ ಗುಡಾರಕ್ಕೆ ಹೋಗುತ್ತಿದ್ದನು.
8 ಮೋಶೆಯು ಗುಡಾರದೊಳಗೆ ಹೋಗುವಾಗ ಜನರೆಲ್ಲರೂ ಅವನನ್ನು ಗಮನಿಸುತ್ತಿದ್ದರು. ಜನರು ತಮ್ಮ ಡೇರೆಗಳ ದ್ವಾರಗಳಲ್ಲಿ ನಿಂತುಕೊಂಡು ಮೋಶೆಯು ದೇವದರ್ಶನಗುಡಾರಕ್ಕೆ ಪ್ರವೇಶಿಸುವವರೆಗೆ ಅವನನ್ನು ಗಮನಿಸುತ್ತಿದ್ದರು.
9 ಮೋಶೆಯು ಗುಡಾರದೊಳಕ್ಕೆ ಹೋದಾಗ ಎತ್ತರವಾದ ಮೇಘಸ್ತಂಭವು ಯಾವಾಗಲೂ ಕೆಳಗಿಳಿಯುತ್ತಿತ್ತು. ಮೇಘಸ್ತಂಭವು ಗುಡಾರದ ದ್ವಾರದಲ್ಲಿ ನಿಲ್ಲುತ್ತಿತ್ತು. ಹೀಗೆ ಯೆಹೋವನು ಮೋಶೆಯೊಡನೆ ಮಾತಾಡುತ್ತಿದ್ದನು.
10 ಗುಡಾರದ ದ್ವಾರದಲ್ಲಿ ಮೇಘಸ್ತಂಭವಿರುವುದನ್ನು ಜನರು ನೋಡಿದಾಗ, ಅವರು ತಮ್ಮ ಸ್ವಂತ ಡೇರೆಗಳ ದ್ವಾರದಲ್ಲಿ ತಲೆಬಾಗಿ ಯೆಹೋವನನ್ನು ಆರಾಧಿಸುತ್ತಿದ್ದರು.
11 ಯೆಹೋವನು ಮೋಶೆಯೊಂದಿಗೆ ಮುಖಾಮುಖಿಯಾಗಿ ಮಾತಾಡುತ್ತಿದ್ದನು. ಒಬ್ಬನು ತನ್ನ ಸ್ನೇಹಿತನೊಂದಿಗೆ ಮಾತಾಡುವಂತೆ ಯೆಹೋವನು ಮೋಶೆಯೊಂದಿಗೆ ಮಾತಾಡುತ್ತಿದ್ದನು. ಯೆಹೋವನೊಂದಿಗೆ ಮಾತಾಡಿದ ನಂತರ ಮೋಶೆಯು ಪಾಳೆಯಕ್ಕೆ ಮರಳಿ ಹೋಗುತ್ತಿದ್ದನು. ನೂನನ ಮಗನೂ ಯೌವನಸ್ಥನೂ ಆಗಿದ್ದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯು ಗುಡಾರವನ್ನು ಬಿಟ್ಟುಹೋದಾಗ ಯೆಹೋಶುವನು ಗುಡಾರದಲ್ಲಿಯೇ ಇರುತ್ತಿದ್ದನು.
12 ಮೋಶೆಯು ಯೆಹೋವನಿಗೆ, “ಈ ಜನರನ್ನು ಮುನ್ನಡೆಸಬೇಕೆಂದು ನೀನು ನನಗೆ ಹೇಳಿರುವೆ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯೆಂದು ನೀನು ಹೇಳಲಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ.
13 ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತಿಳಿದುಕೊಳ್ಳುವಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರೆಂದು ಜ್ಞಾಪಕಮಾಡಿಕೊ” ಎಂದು ವಿಜ್ಞಾಪಿಸಿದನು.
14 ಯೆಹೋವನು “ನಾನೇ ನಿಮ್ಮೊಡನೆ ಬರುವೆನು. ನಾನೇ ನಿಮ್ಮನ್ನು ಮುನ್ನಡೆಸುವೆನು” ಎಂದು ಉತ್ತರಿಸಿದನು.
15 ಆಗ ಮೋಶೆ ಯೆಹೋವನಿಗೆ, “ನೀನು ನಮ್ಮೊಂದಿಗೆ ಬರದಿದ್ದರೆ, ಸ್ಥಳದಿಂದ ನಮ್ಮನ್ನು ಕಳುಹಿಸಬೇಡ.
16 ಮಾತ್ರವಲ್ಲದೆ ನನಗೂ ಜನರಿಗೂ ನಿನ್ನ ದಯೆ ದೊರಕಿದೆಯೆಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನೀನು ನಮ್ಮೊಡನೆ ಬಂದರೆ, ಆಗ ನಾವು ಇದನ್ನು ಖಚಿತವಾಗಿ ತಿಳಿದುಕೊಳ್ಳುವೆವು. ನೀನು ನಮ್ಮೊಡನೆ ಬಾರದಿದ್ದರೆ, ಆಗ ನಮಗೂ ಭೂಮಿಯ ಮೇಲಿರುವ ಇತರ ಜನರಿಗೂ ಯಾವ ವ್ಯತ್ಯಾಸವಿರುವುದಿಲ್ಲ” ಎಂದು ಹೇಳಿದನು.
17 ಆಗ ಯೆಹೋವನು ಮೋಶೆಗೆ, “ನಿನ್ನ ಕೋರಿಕೆಯನ್ನು ಅನುಗ್ರಹಿಸುತ್ತೇನೆ. ನಾನು ನಿನ್ನನ್ನು ಮೆಚ್ಚಿಕೊಂಡದ್ದರಿಂದಲೇ ಇದನ್ನು ಮಾಡುತ್ತೇನೆ. ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು” ಅಂದನು.
18 ಬಳಿಕ ಮೋಶೆ, “ಈಗ ದಯವಿಟ್ಟು ನಿನ್ನ ಮಹಿಮೆಯನ್ನು ನನಗೆ ತೋರಿಸು” ಅಂದನು.
19 ಆಗ ಯೆಹೋವನು “ನನ್ನ ನಾಮದ ಮಹತ್ವವನ್ನು ನಿನ್ನ ಮುಂದೆ ದಾಟಿಹೋಗುವಂತೆ ಮಾಡುವೆನು. ನಾನೇ ಯೆಹೋವನು. ನಿನಗೆ ಕೇಳಿಸುವಂತೆ ನನ್ನ ಹೆಸರನ್ನು ಪ್ರಕಟಿಸುವೆನು. ನಾನು ಆರಿಸಿಕೊಂಡ ಜನರಿಗೆ ದಯೆಯನ್ನೂ ಪ್ರೀತಿಯನ್ನೂ ಅನುಗ್ರಹಿಸುವೆನು.
20 ನನ್ನನ್ನು ಯಾರೂ ಮುಖಾಮುಖಿಯಾಗಿ ಕಾಣಲು ಸಾಧ್ಯವಿಲ್ಲ. ನನ್ನನ್ನು ನೋಡಿದ ಯಾವನೂ ಬದುಕಲಾರನು.
21 ಇಲ್ಲಿ ಒಂದು ಬಂಡೆ ಇದೆ. ನೀನು ಬಂಡೆಯ ಮೇಲೆ ನಿಂತುಕೊ.
22 ನನ್ನ ಮಹಿಮೆಯು ಸ್ಥಳದ ಮೂಲಕ ದಾಟಿಹೋಗುವುದು. ನಾನು ನಿನ್ನನ್ನು ಬಂಡೆಯ ದೊಡ್ಡದಾದ ಬಿರುಕಿನಲ್ಲಿ ಇರಿಸುವೆನು; ನಾನು ದಾಟಿ ಹೋಗುವಾಗ ನನ್ನ ಕೈಯಿಂದ ನಿನ್ನನ್ನು ಮುಚ್ಚುವೆನು.
23 ಬಳಿಕ ನನ್ನ ಕೈಯನ್ನು ತೆಗೆಯುವೆನು. ಆಗ ನೀನು ನನ್ನ ಹಿಂಭಾಗವನ್ನು ನೋಡುವೆ; ಆದರೆ ನನ್ನ ಮುಖವು ನಿನಗೆ ಕಾಣಿಸದು” ಎಂದು ಉತ್ತರಕೊಟ್ಟನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×