Bible Versions
Bible Books

Exodus 4 (ERVKN) Easy to Read Version - Kannadam

1 ಮೋಶೆಗೆ ಸಾಕ್ಷಿ ಆಗ ಮೋಶೆಯು ಯೆಹೋವನಿಗೆ, “ಆದರೆ ನೀನು ನನ್ನನ್ನು ಕಳುಹಿಸಿರುವೆ ಎಂದು ಇಸ್ರೇಲರು ನಂಬುವುದೂ ಇಲ್ಲ; ಕೇಳುವುದೂ ಇಲ್ಲ. ಅವರು, ‘ಯೆಹೋವನು ನಿನಗೆ ಪ್ರತ್ಯಕ್ಷನಾಗಲಿಲ್ಲ’ ಎಂದು ಹೇಳುವರು” ಎಂದು ಹೇಳಿದನು.
2 ಯೆಹೋವನು ಮೋಶೆಗೆ, “ನಿನ್ನ ಕೈಯಲ್ಲಿರುವುದೇನು?” ಅಂದನು. ಮೋಶೆ, “ಊರುಗೋಲು” ಎಂದು ಉತ್ತರಿಸಿದನು.
3 ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು. ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು.
4 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿದುಕೊ” ಎಂದು ಹೇಳಿದನು.’ ಮೋಶೆಯು ಕೈಚಾಚಿ ಹಾವಿನ ಬಾಲವನ್ನು ಹಿಡಿದನು. ಆಗ ಹಾವು ಕೋಲಾಯಿತು.
5 ಆಗ ದೇವರು, “ನಿನ್ನ ಕೋಲನ್ನು ರೀತಿಯಲ್ಲಿ ಉಪಯೋಗಿಸು. ನಿನ್ನ ಪೂರ್ವಿಕರ, ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರು ನಿನಗೆ ಪ್ರತ್ಯಕ್ಷನಾದನೆಂದು ಆಗ ಅವರು ನಂಬುವರು” ಎಂದು ಹೇಳಿದನು.
6 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಇನ್ನೊಂದು ಸಾಕ್ಷಿಯನ್ನು ಕೊಡುತ್ತೇನೆ. ನಿನ್ನ ಕೈಯನ್ನು ಉಡಿಯಲ್ಲಿ ಹಾಕು” ಅಂದನು. ಮೋಶೆ ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದಕ್ಕೆ ತೊನ್ನು ಹಿಡಿದಿತ್ತು.
7 ಆಗ ದೇವರು, “ನಿನ್ನ ಕೈಯನ್ನು ತಿರಿಗಿ ಉಡಿಯಲ್ಲಿ ಹಾಕು” ಅಂದನು. ಅಂತೆಯೇ ಮೋಶೆಯು ತನ್ನ ಕೈಯನ್ನು ಮತ್ತೆ ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಆಗಿತ್ತು.
8 ಆಗ ಯೆಹೋವನು ಅವನಿಗೆ, “ನೀನು ನಿನ್ನ ಊರುಗೋಲಿನಿಂದ ಸೂಚಕಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯಕೊಡುವರು.
9 ನೀನು ಎರಡು ಸೂಚಕಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬದಿದ್ದರೆ, ನೈಲ್ ನದಿಯಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೊಡಲೇ ರಕ್ತವಾಗುವುದು” ಎಂದು ಹೇಳಿದನು.
10 ಮೋಶೆಯು ಯೆಹೋವನಿಗೆ, “ಸ್ವಾಮೀ, ನಾನು ನಿನಗೆ ಸತ್ಯವಾಗಿ ಹೇಳುವುದೇನೆಂದರೆ ನನಗೆ ವಾಕ್ಚಾತುರ್ಯವಿಲ್ಲ. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.
11 ಆಗ ಯೆಹೋವನು ಅವನಿಗೆ, “ಮನುಷ್ಯನ ಬಾಯನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡನನ್ನಾಗಿ ಅಥವಾ ಮೂಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಟ್ಟವನು ಯಾರು? ಯೆಹೋವನಾದ ನಾನಲ್ಲವೇ.
12 ಈಗ ಹೋಗು. ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು.
13 ಆದರೆ ಮೋಶೆ, “ನನ್ನ ಯೆಹೋವನೇ, ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಡಿಕೊಂಡನು.
14 ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನೂ ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು.
15 ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು.
16 ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು.
17 ಆದ್ದರಿಂದ ಹೋಗು. ನಿನ್ನ ಊರುಗೋಲನ್ನೂ ತೆಗೆದುಕೊಂಡು ಹೋಗು. ಯಾಕೆಂದರೆ ಅದರಿಂದಲೇ ನೀನು ಅದ್ಭುತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು. ಮೋಶೆ ಈಜಿಪ್ಟಿಗೆ ಹಿಂತಿರುಗಿದ್ದು
18 ಬಳಿಕ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂತಿರುಗಿದನು. ಮೋಶೆ ಇತ್ರೋನನಿಗೆ, “ಈಜಿಪ್ಟಿನಲ್ಲಿರುವ ನನ್ನ ಜನರ ಬಳಿಗೆ ಹೋಗಿ ಅವರು ಇನ್ನೂ ಜೀವಂತವಾಗಿದ್ದಾರೋ ಏನೋ ನೋಡುವೆನು” ಎಂದು ಹೇಳಿದನು. ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗಿ ಬಾ” ಎಂದು ಹೇಳಿದನು.
19 ಮೋಶೆ ಇನ್ನೂ ಮಿದ್ಯಾನಿನಲ್ಲಿದ್ದಾಗ ಯೆಹೋವನು, “ಈಗ ನೀನು ಸುರಕ್ಷಿತವಾಗಿ ಈಜಿಪ್ಟಿಗೆ ಹೋಗಬಹುದು. ನಿನ್ನನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋಗಿದ್ದಾರೆ” ಅಂದನು.
20 ಆದ್ದರಿಂದ ಮೋಶೆ ತನ್ನ ಹೆಂಡತಿಯನ್ನೂ ಗಂಡುಮಕ್ಕಳನ್ನೂ ಕತ್ತೆಗಳ ಮೇಲೆ ಕುಳ್ಳಿರಿಸಿ ಈಜಿಪ್ಟ್ ದೇಶಕ್ಕೆ ಮರಳಿ ಪ್ರಯಾಣ ಮಾಡಿದನು. ಮೋಶೆಯು ಯೆಹೋವನ ಶಕ್ತಿಯಿಂದ ಕೂಡಿದ ತನ್ನ ಊರುಗೋಲನ್ನು ಹಿಡಿದುಕೊಂಡು ಹೋದನು.
21 ಮೋಶೆ ಈಜಿಪ್ಟಿಗೆ ಪ್ರಯಾಣ ಮಾಡುತ್ತಿದ್ದಾಗ ಯೆಹೋವನು ಅವನೊಡನೆ ಮಾತಾಡಿ, “ನೀನು ಫರೋಹನೊಂದಿಗೆ ಮಾತಾಡುವಾಗ ನಾನು ತೋರಿಸಿಕೊಟ್ಟ ಅದ್ಭುತಕಾರ್ಯಗಳನ್ನೆಲ್ಲಾ ಅವನ ಮುಂದೆ ಮಾಡು. ಆದರೂ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ಇಸ್ರೇಲರನ್ನು ಹೋಗಗೊಡಿಸುವುದಿಲ್ಲ.
22 ಆಗ ನೀನು ಫರೋಹನಿಗೆ, ‘ಇಸ್ರೇಲ್ ಜನಾಂಗವು ಯೆಹೋವನಿಗೆ ಚೊಚ್ಚಲು ಮಗನಂತಿದೆ.
23 ನನ್ನ ಮಗನು ನಿನ್ನ ದೇಶದಿಂದ ಹೋಗಿ ನನ್ನನ್ನು ಆರಾಧಿಸಲು ನೀನು ಅಪ್ಪಣೆಕೊಡಬೇಕು. ಇಲ್ಲವಾದರೆ ನಾನು ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು’ ಎಂದು ಯೆಹೋವನು ಹೇಳುತ್ತಾನೆ” ಎಂಬುದಾಗಿ ತಿಳಿಸಬೇಕು.
24 ಮೋಶೆಯು ಈಜಿಪ್ಟಿಗೆ ತನ್ನ ಪ್ರಯಾಣವನ್ನು ಮುಂದುವರೆಸಿ ಛತ್ರವೊಂದರಲ್ಲಿ ಇಳಿದುಕೊಂಡನು. ಆಗ ಯೆಹೋವನು ಮೋಶೆಯನ್ನು ಸಂಧಿಸಿ ಅವನನ್ನು ಕೊಲ್ಲಬೇಕೆಂದಿದ್ದನು.
25 ಆದರೆ ಚಿಪ್ಪೋರಳು ಕಲ್ಲಿನ ಚೂರಿಯನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿಮಾಡಿ ಚರ್ಮವನ್ನು ತೆಗೆದುಕೊಂಡು ಮೋಶೆಯ ಪಾದಗಳಿಗೆ ಮುಟ್ಟಿಸಿ, “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಅಂದಳು.
26 ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಎಂದು ಹೇಳಿದ್ದರಿಂದ ಯೆಹೋವನು ಅವನನ್ನು ಉಳಿಸಿದನು.
27 ಯೆಹೋವನು ಆರೋನನೊಡನೆ ಮಾತಾಡಿ ಅವನಿಗೆ, “ಅರಣ್ಯಕ್ಕೆ ಹೋಗಿ ಮೋಶೆಯನ್ನು ಭೇಟಿಯಾಗು” ಎಂದು ಹೇಳಿದ್ದನು. ಆದ್ದರಿಂದ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಭೇಟಿಯಾದನು. ಆರೋನನು ಮೋಶೆಯನ್ನು ಕಂಡು ಅವನಿಗೆ ಮುದ್ದಿಟ್ಟನು.
28 ಯೆಹೋವನು ಹೇಳಿದ್ದನ್ನೆಲ್ಲಾ ಮೋಶೆಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ಭುತಕಾರ್ಯಗಳನ್ನು ಮಾಡಬೇಕೆಂದೂ ಆರೋನನಿಗೆ ವಿವರಿಸಿದನು.
29 ಆದ್ದರಿಂದ ಮೋಶೆ ಆರೋನರು ಹೋಗಿ ಇಸ್ರೇಲ್ ಜನರ ಹಿರಿಯರೆಲ್ಲರನ್ನು ಒಟ್ಟುಗೂಡಿಸಿದರು.
30 ಆಗ ಆರೋನನು ಜನರೊಂದಿಗೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸಿದನು. ಬಳಿಕ ಮೋಶೆ ಜನರೆಲ್ಲರೂ ನೋಡುವಂತೆ ಸಾಕ್ಷ್ಯಾಧಾರಗಳನ್ನು ಮಾಡಿದನು.
31 ಯೆಹೋವನು ಮೋಶೆಯನ್ನು ಕಳುಹಿಸಿದ್ದಾನೆಂದು ಜನರು ನಂಬಿದರು. ಯೆಹೋವನು ಇಸ್ರೇಲರಿಗೆ ಸಹಾಯಮಾಡಬೇಕೆಂದಿರುವುದನ್ನು ಅವರು ತಿಳಿದು ತಲೆಬಾಗಿ ಆತನನ್ನು ಆರಾಧಿಸಿದರು. ಯೆಹೋವನು ತಮ್ಮ ಸಂಕಟಗಳನ್ನು ನೋಡಿದ್ದರಿಂದ ಅವರು ಆತನನ್ನು ಆರಾಧಿಸಿದರು. ಫರೋಹನ ಮುಂದೆ ಮೋಶೆ ಆರೋನರು
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×