Bible Versions
Bible Books

Exodus 7 (ERVKN) Easy to Read Version - Kannadam

1 ಯೆಹೋವನು ಮೋಶೆಗೆ, “ನಾನು ನಿನ್ನನ್ನು ಫರೋಹನಿಗೆ ಮಹಾರಾಜನಂತೆ ಮಾಡಿರುವೆನು; ಆರೋನನು ಅಧಿಕೃತ ಮಾತುಗಾರನಾಗಿರುವನು.
2 ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಆರೋನನಿಗೆ ಹೇಳು. ಆಗ ಅವನು ಅವುಗಳನ್ನೆಲ್ಲಾ ರಾಜನಿಗೆ ತಿಳಿಸುವನು. ಇಸ್ರೇಲರು ದೇಶವನ್ನು ಬಿಟ್ಟು ಹೋಗುವುದಕ್ಕೆ ಫರೋಹನು ಸಮ್ಮತಿಸುವನು.
3 ಆದರೆ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ನನ್ನ ಆಜ್ಞೆಗಳಿಗೆ ವಿಧೇಯನಾಗುವುದಿಲ್ಲ. ಆಗ ನಾನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡುವೆನು. ಆದರೂ ಅವನು ವಿಧೇಯನಾಗುವುದಿಲ್ಲ.
4 ಆಗ ನಾನು ಈಜಿಪ್ಟನ್ನು ಭಯಂಕರವಾಗಿ ದಂಡಿಸಿ ನನ್ನ ಜನರನ್ನು ದೇಶದಿಂದ ಹೊರತರುವೆನು.
5 ನಾನು ಈಜಿಪ್ಟಿನ ವಿರುದ್ಧವಾಗಿ ನನ್ನ ಕೈಯನ್ನು ಚಾಚಿ ನನ್ನ ಜನರನ್ನು ಅವರ ದೇಶದಿಂದ ಬಿಡುಗಡೆ ಮಾಡಿದಾಗ, ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು.”
6 ಯೆಹೋವನು ಆಜ್ಞಾಪಿಸಿದವುಗಳಿಗೆಲ್ಲಾ ಮೋಶೆ ಆರೋನರು ವಿಧೇಯರಾದರು.
7 ಅವರು ಫರೋಹನೊಡನೆ ಮಾತಾಡಿದಾಗ ಮೋಶೆಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಆರೋನನಿಗೆ ಎಂಭತ್ತ ಮೂರು ವರ್ಷ ವಯಸ್ಸಾಗಿತ್ತು.
8 ಯೆಹೋವನು ಮೋಶೆ ಆರೋನರಿಗೆ,
9 “ಫರೋಹನು ನಿಮಗೆ, ಅದ್ಭುತಕಾರ್ಯವೊಂದನ್ನು ಮಾಡಿ ನಿಮ್ಮ ಅಧಿಕಾರವನ್ನು ರುಜುವಾತುಪಡಿಸಬೇಕೆಂದು ಕೇಳುವನು. ಆಗ ಮೋಶೆಯು ಆರೋನನಿಗೆ ಊರುಗೋಲನ್ನು ನೆಲದ ಮೇಲೆ ಬಿಸಾಡಲು ಹೇಳಬೇಕು. ಆರೋನನು ಬಿಸಾಡಿದ ಕೂಡಲೇ ಕೋಲು ಅವರ ಕಣ್ಣೆದುರಿನಲ್ಲಿಯೇ ಸರ್ಪವಾಗುವುದು” ಅಂದನು.
10 ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋದರು. ಯೆಹೋವನು ಆಜ್ಞಾಪಿಸಿದ್ದಂತೆಯೇ ಅವರು ಮಾಡಿದರು. ಆರೋನನು ತನ್ನ ಊರುಗೋಲನ್ನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ನೆಲದ ಮೇಲೆ ಬಿಸಾಡಿದಾಗ ಅದು ಸರ್ಪವಾಯಿತು.
11 ಆಗ ರಾಜನು ತನ್ನ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಯಿಸಿದನು. ಅವರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು.
12 ಅವರು ತಮ್ಮ ಊರುಗೋಲುಗಳನ್ನು ನೆಲದ ಮೇಲೆ ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
13 ಯೆಹೋವನು ಹೇಳಿದ್ದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಮೋಶೆ ಮತ್ತು ಆರೋನರ ಮಾತಿಗೆ ಕಿವಿಗೊಡಲಿಲ್ಲ.
14 ಆಗ ಯೆಹೋವನು ಮೋಶೆಗೆ, “ಫರೋಹನ ಹೃದಯ ಮೊಂಡಾಗಿದೆ; ಅವನು ಜನರನ್ನು ಹೋಗಗೊಡಿಸುವುದಿಲ್ಲ.
15 ಮುಂಜಾನೆ ಅವನು ನದಿಗೆ ಹೋಗುವನು. ಸರ್ಪವಾಗಿ ಮಾರ್ಪಾಟಾದ ಊರುಗೋಲನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಅವನನ್ನು ಭೇಟಿಯಾಗಿ ಅವನಿಗೆ,
16 ‘ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ. ಆತನ ಜನರು ಅರಣ್ಯದಲ್ಲಿ ಆತನನ್ನು ಆರಾಧಿಸುವುದಕ್ಕೆ ನೀನು ಅವರಿಗೆ ಅಪ್ಪಣೆಕೊಡಬೇಕೆಂದು ಆತನು ನಿನಗೆ ಆಜ್ಞಾಪಿಸುತ್ತಾನೆ. ಇದುವರೆಗೆ ನೀನು ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.
17 ಆದ್ದರಿಂದ ಆತನೇ ಯೆಹೋವನೆಂದು ನಿನಗೆ ತಿಳಿಯಲೆಂದು ನನ್ನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಯುವೆನು; ನದಿಯ ನೀರು ರಕ್ತವಾಗುವುದು.
18 ನದಿಯಲ್ಲಿರುವ ಮೀನುಗಳು ಸಾಯುವವು; ನದಿಯು ಹೊಲಸಾಗುವುದು; ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗುವುದಿಲ್ಲ’ ಎಂದು ಹೇಳಬೇಕು” ಅಂದನು.
19 ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಊರುಗೋಲನ್ನು ನದಿಗಳ, ಕಾಲುವೆಗಳ, ಕೆರೆಗಳ ಮತ್ತು ನೀರಿರುವ ಪ್ರತಿಯೊಂದು ಸ್ಥಳದ ಮೇಲೆ ಚಾಚು’ ಎಂದು ಹೇಳು. ಅವನು ಚಾಚಿದಾಗ ನೀರೆಲ್ಲಾ ರಕ್ತವಾಗುವುದು. ಮರದ ಮತ್ತು ಕಲ್ಲಿನ ಪಾತ್ರೆಗಳಲ್ಲಿರುವ ನೀರು ಸಹ ರಕ್ತವಾಗುವುದು” ಎಂದು ಹೇಳಿದನು.
20 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಆರೋನರು ಮಾಡಿದರು. ಆರೋನನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ಕೋಲನ್ನು ಎತ್ತಿ ನೈಲ್ ನದಿಯ ನೀರನ್ನು ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು.
21 ನದಿಯಲ್ಲಿದ್ದ ಮೀನುಗಳು ಸತ್ತವು; ನದಿಯು ಹೊಲಸಾಗತೊಡಗಿತು. ಆದ್ದರಿಂದ ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಈಜಿಪ್ಟಿನ ನೀರೆಲ್ಲಾ ರಕ್ತವೇ ಆಗಿತ್ತು.
22 ಮಾಂತ್ರಿಕರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
23 ಫರೋಹನು ತನ್ನ ಮನೆಗೆ ಹೊರಟುಹೋದನು. ಮೋಶೆ ಆರೋನರು ಮಾಡಿದ ಮಹತ್ಕಾರ್ಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.
24 ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಆದ್ದರಿಂದ ಅವರು ನದಿಯ ಸುತ್ತಲೂ ಕುಡಿಯುವ ನೀರಿಗಾಗಿ ಬಾವಿಗಳನ್ನು ಅಗೆದರು.
25 ಯೆಹೋವನು ನೈಲ್ ನದಿಯ ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದ ಬಳಿಕ ಏಳು ದಿನಗಳು ಕಳೆದವು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×