Bible Versions
Bible Books

Ezra 3 (ERVKN) Easy to Read Version - Kannadam

1 ತಮ್ಮತಮ್ಮ ಸ್ವಂತ ಊರುಗಳಲ್ಲಿ ಹೋಗಿ ನೆಲೆಸಿದ್ದ ಇಸ್ರೇಲರು ಏಳನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಒಂದೇ ಮನಸ್ಸಿನಿಂದ ಬಂದು ಸೇರಿದರು.
2 ಆಗ ಯೋಚಾದಾಕನ ಮಗನಾದ ಯೇಷೂವನೂ ಅವನೊಂದಿಗೆ ಇದ್ದ ಯಾಜಕರೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಅವನೊಂದಿಗಿದ್ದ ಜನರೊಂದಿಗೆ ಇಸ್ರೇಲ್ ದೇವರಿಗೆ ಯಜ್ಞವೇದಿಕೆಯನ್ನು ಕಟ್ಟಿದರು. ದೇವರ ಸೇವಕನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ದೇವರಿಗೆ ಯಜ್ಞವನ್ನು ಸಮರ್ಪಿಸಲು ಇವರು ವೇದಿಕೆಯನ್ನು ಕಟ್ಟಿದರು.
3 ತಮ್ಮ ಸುತ್ತಲು ವಾಸಿಸುವ ಅನ್ಯಜನರಿಗೆ ಅವರು ಭಯಪಟ್ಟರೂ ಹಳೆಯ ಅಸ್ತಿವಾರದ ಮೇಲೆ ವೇದಿಕೆಯನ್ನು ಕಟ್ಟಿದರು. ಅವರು ಹಾಗೆ ಮಾಡುವುದನ್ನು ನಿಲ್ಲಿಸಲಿಲ್ಲ. ಕಟ್ಟಿ ಮುಗಿಸಿದ ಬಳಿಕ ಬೆಳಿಗ್ಗೆ, ಸಾಯಂಕಾಲ ಹೋಮ ಯಜ್ಞಾದಿಗಳನ್ನು ಸಮರ್ಪಿಸಿದರು.
4 ಇದಲ್ಲದೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರತಿ ದಿವಸಗಳಲ್ಲಿ ನೇಮಿತ ಸರ್ವಾಂಗಹೋಮಗಳನ್ನು ಅರ್ಪಿಸಿದರು.
5 ಇದಾದ ಬಳಿಕ ಅವರು ನಿತ್ಯಸರ್ವಾಂಗ ಹೋಮವನ್ನೂ ಅಮಾವಾಸ್ಯೆ ಮತ್ತು ಇತರ ಹಬ್ಬದ ದಿನಗಳಲ್ಲಿ ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಬೇಕಾದ ಯಜ್ಞಹೋಮಗಳನ್ನೂ ಸಮರ್ಪಿಸಿದರು. ಜನರು ತಾವು ಯೆಹೋವನಿಗೆ ಕೊಡಬೇಕೆಂದಿದ್ದ ಇತರ ಕಾಣಿಕೆಗಳನ್ನು ಸಹ ತಂದು ಕೊಡಲಾರಂಭಿಸಿದರು.
6 ದೇವಾಲಯವು ತಿರಿಗಿ ಕಟ್ಟಲ್ಪಡದಿದ್ದರೂ ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಇಸ್ರೇಲರು ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ಪ್ರಾರಂಭಿಸಿದರು.
7 ಸೆರೆಯಿಂದ ಹಿಂತಿರುಗಿಬಂದ ಜನರು ಬಡಗಿಗಳಿಗೂ ಕಲ್ಲುಕುಟಿಗರಿಗೂ ಹಣ ಕೊಟ್ಟರು. ಲೆಬನೋನಿನಿಂದ ದೇವದಾರು ಮರಗಳನ್ನು ಸಾಗಿಸುವ ತೂರ್ಯರಿಗೆ ಮತ್ತು ಚೀದೋನ್ಯರಿಗೆ ಆಹಾರ ಪದಾರ್ಥಗಳನ್ನು, ಆಲಿವ್ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಸಂಬಳವಾಗಿ ಕೊಟ್ಟರು. ಸೊಲೊಮೋನನು ಮೊದಲನೆಯ ದೇವಾಲಯವನ್ನು ಕಟ್ಟುವಾಗ ಅದಕ್ಕೆ ಬೇಕಾದ ಮರಗಳನ್ನು ಸಮುದ್ರ ಮಾರ್ಗವಾಗಿ ತಂದಂತೆಯೇ ಇವರೂ ಜೆರುಸಲೇಮಿಗೆ ಸಮೀಪವಿರುವ ಯೊಪ್ಪಕ್ಕೆ ಸಮುದ್ರ ಮಾರ್ಗವಾಗಿ ತಂದರು. ಪರ್ಶಿಯಾದ ಅರಸನಾದ ಸೈರಸನ ಆಜ್ಞೆಗನುಸಾರವಾಗಿ ಇವೆಲ್ಲವೂ ಮಾಡಲ್ಪಟ್ಟವು.
8 ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರುಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೋಚಾದಾಕನ ಮಗನಾದ ಯೇಷೂವನು ಕೆಲಸವನ್ನು ಪ್ರಾರಂಭಿಸಿದರು. ಅವರ ಸಹೋದರರು, ಯಾಜಕರು, ಲೇವಿಯರು ಮತ್ತು ಅವರೊಂದಿಗೆ ಸೆರೆಯಿಂದ ಬಂದವರೆಲ್ಲರೂ ಕೆಲಸ ಮಾಡಿದರು. ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಲೇವಿಯವರನ್ನು ಮೇಲ್ವಿಚಾರಕರನ್ನಾಗಿ ಅವರು ನೇಮಿಸಿದರು.
9 ದೇವಾಲಯವನ್ನು ಕಟ್ಟುವ ಕೆಲಸವನ್ನು ಮೇಲ್ವಿಚಾರಣೆ ಮಾಡಿದವರು ಕೆಳಕಂಡಂತಿರುವರು. ಯೇಷೂವನೂ ಅವನ ಮಕ್ಕಳೂ; ಕದ್ಮೀಯೇಲನು ಮತ್ತು ಅವನ ಮಕ್ಕಳು (ಇವರು ಯೆಹೂದ ಸಂತತಿಯವರು.); ಲೇವಿಯನಾದ ಹೇನಾದಾದನ ಗಂಡುಮಕ್ಕಳು ಮತ್ತು ಅವನ ಅಣ್ಣತಮ್ಮಂದಿರು.
10 ಕಟ್ಟುವವರು ದೇವಾಲಯದ ಅಸ್ತಿವಾರವನ್ನು ಕಟ್ಟಿ ಮುಗಿಸಿದಾಗ ಯಾಜಕರು ತಮ್ಮ ಯಾಜಕ ಬಟ್ಟೆಗಳನ್ನು ಧರಿಸಿ ತುತ್ತೂರಿಗಳನ್ನು ತೆಗೆದುಕೊಂಡರು; ಆಸಾಫನ ಮಕ್ಕಳು ತಾಳಗಳನ್ನು ತೆಗೆದುಕೊಂಡರು; ಅಲ್ಲದೆ ಇಸ್ರೇಲಿನ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡು ಯೆಹೋವನನ್ನು ಸ್ತುತಿಸಿದರು.
11 ಯೆಹೋವನು ಒಳ್ಳೆಯವನು; ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ಕರುಣೆ ಮತ್ತು ನಿಜಪ್ರೀತಿ ಇಸ್ರೇಲರಿಗೆ ಶಾಶ್ವತವಾಗಿದೆ ಎಂದು ಹಾಡಿದರು. ಆಗ ಉಳಿದವರು ಸಂತೋಷದಿಂದ ಆರ್ಭಟಿಸಿದರು; ದೇವಾಲಯದ ಅಸ್ತಿವಾರ ಹಾಕಿದ್ದಕ್ಕೆ ಯೆಹೋವನನ್ನು ಸ್ತುತಿಸಿದರು.
12 ಆದರೆ ಮೊದಲಿನ ದೇವಾಲಯವನ್ನೂ ಅದರ ವೈಭವವನ್ನೂ ನೋಡಿದ್ದ ಕುಲಪ್ರಧಾನರು, ಯಾಜಕರು ಮತ್ತು ಲೇವಿಯರು ಗಟ್ಟಿಯಾಗಿ ಅತ್ತರು. ಇತರರು ಗಟ್ಟಿಯಾಗಿ ಹರ್ಷಧ್ವನಿ ಮಾಡಿದರು.
13 ಅವರ ಉತ್ಸಾಹಧ್ವನಿಯಲ್ಲಿ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ತಿಳಿಯುತ್ತಿರಲಿಲ್ಲ. ಆದರೆ ಧ್ವನಿಯು ಬಹುದೂರದವರೆಗೂ ಕೇಳಿಸಿತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×