Bible Versions
Bible Books

Isaiah 43 (ERVKN) Easy to Read Version - Kannadam

1 ಯಾಕೋಬೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಇಸ್ರೇಲೇ, ಯೆಹೋವನು ನಿನ್ನನ್ನು ನಿರ್ಮಿಸಿದನು. ಈಗ ಆತನು ಹೇಳುವದೇನೆಂದರೆ: “ಭಯಪಡಬೇಡ. ನಾನೇ ನಿನ್ನನ್ನು ರಕ್ಷಿಸಿದ್ದೇನೆ. ನಾನು ನಿನಗೆ ಹೆಸರಿಟ್ಟೆನು. ನೀನು ನನ್ನವನೇ.
2 ನಿನ್ನ ಕಷ್ಟಕಾಲದಲ್ಲಿ ನಾನು ನಿನ್ನೊಂದಿಗಿರುವೆನು. ನೀನು ಜಲರಾಶಿಯನ್ನು ಹಾದುಹೋಗುವಾಗ ನಾನೇ ನಿನ್ನೊಂದಿಗಿರುವೆ. ನೀನು ನದಿಗಳನ್ನು ದಾಟುವಾಗ ಅಪಾಯಕ್ಕೆ ಗುರಿಯಾಗದಿರುವೆ. ಬೆಂಕಿಯೊಳಗಿಂದ ನಡೆಯುವಾಗ ನಿನಗೆ ಹಾನಿಯಾಗದು.
3 ಯಾಕೆಂದರೆ ಯೆಹೋವನಾದ ನಾನೇ ನಿನ್ನ ದೇವರು. ಇಸ್ರೇಲಿನ ಪರಿಶುದ್ಧನಾದ ನಾನೇ ನಿನ್ನ ರಕ್ಷಕನು. ಈಜಿಪ್ಟನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ; ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ನಿನಗೆ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟೆನು.
4 ನೀನು ನನಗೆ ಅಮೂಲ್ಯನಾದುದರಿಂದ ನಾನು ನಿನ್ನನ್ನು ಗೌರವಿಸಿ ಪ್ರೀತಿಸುವೆನು. ನೀನು ವಾಸಿಸುವಂತೆ ನಾನು ನಿನಗೆ ಎಲ್ಲಾ ಜನರನ್ನು ಮತ್ತು ಜನಾಂಗಗಳನ್ನು ಕೊಡುವೆನು.
5 “ಆದುದರಿಂದ ಭಯಪಡಬೇಡ, ನಾನೇ ನಿನ್ನೊಂದಿಗಿದ್ದೇನೆ. ನಾನು ನಿನ್ನ ಮಕ್ಕಳನ್ನು ಒಟ್ಟುಗೂಡಿಸಿ ನಿನ್ನ ಬಳಿಗೆ ಕರೆತರುವೆನು. ನಾನು ಪೂರ್ವಪಶ್ಚಿಮ ದಿಕ್ಕುಗಳಿಂದ ಅವರನ್ನು ಒಟ್ಟುಗೂಡಿಸುವೆನು.
6 ನಾನು ಉತ್ತರಕ್ಕೆ ‘ನನ್ನ ಜನರನ್ನು ಬಿಟ್ಟುಕೊಡು’ ಎಂದು ಹೇಳುವೆನು. ದಕ್ಷಿಣಕ್ಕೆ, ‘ನನ್ನ ಜನರನ್ನು ಸೆರೆಮನೆಯಲ್ಲಿರಿಸಬೇಡ’ ಎಂದು ಹೇಳುವೆನು. ಬಹುದೂರ ದೇಶಗಳಿಂದ ನನ್ನ ಮಕ್ಕಳನ್ನು ನನ್ನ ಬಳಿಗೆ ಕರೆದುಕೊಂಡು ಬಾ.
7 ನನ್ನ ಹೆಸರನ್ನು ಹೊಂದಿರುವ ನನ್ನ ಜನರನ್ನೆಲ್ಲಾ ನನ್ನ ಬಳಿಗೆ ಕರೆದುಕೊಂಡು ಬಾ. ನನಗಾಗಿಯೇ ನಿರ್ಮಿಸಿದ ನನ್ನ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವರನ್ನು ನಿರ್ಮಿಸಿದಾತನು ನಾನೇ, ಅವರು ನನ್ನವರೇ!
8 “ಕಣ್ಣಿದ್ದೂ ಕುರುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಕಿವಿಯಿದ್ದೂ ಕಿವುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ.
9 ಎಲ್ಲಾ ಜನಾಂಗದವರೂ ಎಲ್ಲಾ ಜನರೂ ಒಟ್ಟುಗೂಡಬೇಕು. ಅವರ ಸುಳ್ಳುದೇವರಲ್ಲಿ ಒಬ್ಬನು ಆದಿಯಲ್ಲಿ ಸಂಭವಿಸಿದ್ದನ್ನು ಹೇಳುವದಾಗಿದ್ದರೆ ತನ್ನ ಸಾಕ್ಷಿಗಳನ್ನು ಕರೆದು ತರಲಿ. ಸಾಕ್ಷಿಗಳು ಸತ್ಯವನ್ನಾಡಲಿ. ಆಗ ಅವರು ಸತ್ಯವಂತರೊ ಇಲ್ಲವೊ ಎಂದು ಗೊತ್ತಾಗುವದು.”
10 ಯೆಹೋವನು ಹೇಳುವದೇನೆಂದರೆ: “ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನು ಆರಿಸಿಕೊಂಡ ಸೇವಕನು ನೀನೇ. ಜನರು ನನ್ನನ್ನು ನಂಬುವಂತೆ ನಾನು ನಿಮ್ಮನ್ನು ಆರಿಸಿಕೊಂಡೆನು. ನಾನು ನಿಜ ದೇವರು ಎಂದು ನೀವು ತಿಳಿಯಬೇಕೆಂದು ನಿಮ್ಮನ್ನು ಆರಿಸಿಕೊಂಡೆನು. ನಾನೇ ನಿಜವಾದ ದೇವರು. ನನಗಿಂತ ಮೊದಲು ಯಾರೂ ಇರಲಿಲ್ಲ, ಇನ್ನು ಮುಂದೆಯೂ ನನ್ನ ಹೊರತು ಯಾವ ದೇವರೂ ಇರುವದಿಲ್ಲ.
11 ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ!
12 ನಾನೇ ನಿಮ್ಮೊಂದಿಗೆ ಮಾತನಾಡಿದೆನು. ನಾನೇ ನಿಮ್ಮನ್ನು ರಕ್ಷಿಸಿದೆನು. ನಾನು ವಿಷಯಗಳನ್ನು ನಿಮಗೆ ತಿಳಿಸಿದೆನು. ನಿಮ್ಮೊಂದಿಗೆ ಇದ್ದಾತನು ಅಪರಿಚಿತನಾಗಿರಲಿಲ್ಲ. ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನೇ ನಿಮ್ಮ ದೇವರು.” (ಯೆಹೋವನು ತಾನೇ ವಿಷಯಗಳನ್ನು ಹೇಳಿದ್ದಾನೆ.)
13 “ನಾನು ಯಾವಾಗಲೂ ದೇವರಾಗಿದ್ದೇನೆ. ನನ್ನ ಕಾರ್ಯವನ್ನು ತಡೆಯಲು ಯಾರಿಗೆ ಸಾಧ್ಯ? ನನ್ನ ಬಲವಾದ ಹಸ್ತದಿಂದ ಯಾರು ಬಿಡಿಸಬಲ್ಲರು?”
14 ಇಸ್ರೇಲರ ಪರಿಶುದ್ಧನೇ, ನಿಮ್ಮನ್ನು ರಕ್ಷಿಸುವಾತನು. ಯೆಹೋವನು ಹೇಳುವದೇನೆಂದರೆ: “ನಾನು ನಿಮಗೋಸ್ಕರ ಬಾಬಿಲೋನಿಗೆ ಸೈನ್ಯವನ್ನು ಕಳುಹಿಸುವೆನು. ಎಷ್ಟೋ ಮಂದಿ ಸೆರೆಹಿಡಿಯಲ್ಪಡುವರು. ಕಲ್ದೀಯ ಜನರು ಅವರ ಹಡಗುಗಳಿಂದಲೇ ಒಯ್ಯಲ್ಪಡುವರು. (ಅವರು ಹಡಗುಗಳ ಬಗ್ಗೆ ಬಹು ಹೆಮ್ಮೆಯಿಂದಿದ್ದಾರೆ.)
15 ನಾನೇ ನಿಮ್ಮ ಪರಿಶುದ್ಧನಾದ ಯೆಹೋವನು. ನಾನು ಇಸ್ರೇಲನ್ನು ಸೃಷ್ಟಿಸಿದೆನು; ನಾನೇ ನಿಮ್ಮ ಅರಸನು.”
16 ಯೆಹೋವನು ಸಮುದ್ರದ ಮೂಲಕ ಮಾರ್ಗವನ್ನು ನಿರ್ಮಿಸುವನು. ಅಲ್ಲೋಲಕಲ್ಲೋಲವಾಗಿರುವ ನೀರಿನ ಮೂಲಕ ತನ್ನ ಜನರಿಗೆ ಮಾರ್ಗವನ್ನು ಮಾಡುವನು. ಯೆಹೋವನು ಹೇಳುವದೇನೆಂದರೆ,
17 “ನನ್ನ ವಿರುದ್ಧವಾಗಿ ಯುದ್ಧಮಾಡುವ ಅಶ್ವದಳ, ರಥಬಲ ಮತ್ತು ಭೂದಳವು ಸೋತು ಹೋಗುವವು. ಮತ್ತೆ ಅವರು ಏಳುವದೇ ಇಲ್ಲ. ಅವರೆಲ್ಲರೂ ನಾಶವಾಗುವರು. ಮೇಣದ ಬತ್ತಿಯ ಬೆಂಕಿಯು ಆರಿಸಲ್ಪಡುವಂತೆಯೇ ಅವರು ನಂದಿಸಲ್ಪಡುವರು.
18 ಆದುದರಿಂದ ಆದಿಯಲ್ಲಿ ನಡೆದ ಸಂಗತಿಗಳನ್ನು ಜ್ಞಾಪಕಮಾಡಿಕೊಳ್ಳಬೇಡ. ಬಹಳ ಕಾಲದ ಹಿಂದೆ ನಡೆದ ಸಂಗತಿಗಳನ್ನು ನೆನೆಸಬೇಡ.
19 ಯಾಕೆಂದರೆ, ನಾನು ಹೊಸ ಕಾರ್ಯಗಳನ್ನು ಮಾಡುವೆನು. ನೀವು ಹೊಸ ಸಸಿಯ ರೀತಿಯಲ್ಲಿ ಬೆಳೆಯುವಿರಿ. ಇದು ಸತ್ಯವೆಂದು ನಿಮಗೆ ಗೊತ್ತಿದೆ. ನಾನು ಮರುಭೂಮಿಯಲ್ಲಿ ಖಂಡಿತವಾಗಿಯೂ ರಸ್ತೆಯನ್ನು ಮಾಡುತ್ತೇನೆ; ಒಣನೆಲದಲ್ಲಿ ನದಿ ಹರಿಯುವಂತೆ ಮಾಡುತ್ತೇನೆ.
20 ವನ್ಯಜೀವಿಗಳೂ ನನಗೆ ಕೃತಜ್ಞತೆಯಿಂದ ಇರುತ್ತವೆ. ದೊಡ್ಡ ಗಾತ್ರದ ಪ್ರಾಣಿಗಳೂ ಪಕ್ಷಿಗಳೂ ನನ್ನನ್ನು ಗೌರವಿಸುವವು. ನಾನು ಮರುಭೂಮಿಯಲ್ಲಿ ನೀರನ್ನು ಬರಮಾಡುವಾಗ ಅವು ನನ್ನನ್ನು ಗೌರವಿಸುವವು. ನಾನು ಆರಿಸಿಕೊಂಡ ನನ್ನ ಜನರಿಗೆ ನೀರನ್ನು ಕೊಡುವುದಕ್ಕಾಗಿ ನಾನು ಇದನ್ನು ಮಾಡುವೆನು.
21 ನಾನು ನಿರ್ಮಿಸಿದ ಜನರು ನನಗೆ ಸ್ತೋತ್ರಗಾನ ಹಾಡುವರು.
22 “ಯಾಕೋಬೇ, ನೀನು ನನಗೆ ಪ್ರಾರ್ಥಿಸಲಿಲ್ಲ. ಇಸ್ರೇಲೇ, ನೀನು ನನ್ನ ವಿಷಯದಲ್ಲಿ ಆಯಾಸಗೊಂಡಿದ್ದೀ.
23 ನಿನ್ನ ಕುರಿಗಳನ್ನು ನನ್ನ ಬಳಿಗೆ ಯಜ್ಞಮಾಡುವದಕ್ಕಾಗಿ ತರಲಿಲ್ಲ. ನೀನು ನನ್ನನ್ನು ಸನ್ಮಾನಿಸಲಿಲ್ಲ. ನೀನು ನನಗೆ ಬಲಿಯರ್ಪಣೆ ಮಾಡಲಿಲ್ಲ. ನೀನು ಬಲಿಯರ್ಪಣೆ ಮಾಡಬೇಕೆಂದು ನಾನು ನಿನ್ನನ್ನು ಬಲವಂತಪಡಿಸಲಿಲ್ಲ. ನೀನು ಆಯಾಸಗೊಳ್ಳುವ ತನಕ ಧೂಪಹಾಕಬೇಕೆಂದು ನಾನು ನಿನ್ನನ್ನು ಒತ್ತಾಯಪಡಿಸಲಿಲ್ಲ.
24 ನೀನು ನನ್ನ ಗೌರವಾರ್ಥವಾಗಿ ಕಾಣಿಕೆಗಳನ್ನು ಮತ್ತು ಧೂಪವನ್ನು ಖರೀದಿ ಮಾಡಲು ನಿನ್ನ ಹಣವನ್ನು ಖರ್ಚು ಮಾಡಲಿಲ್ಲ. ಆದರೆ ನೀನು ನನ್ನನ್ನು ನಿನ್ನ ಗುಲಾಮನಾಗುವಂತೆ ಬಲವಂತಪಡಿಸಿದಿ. ನೀನು ನಿನ್ನ ಪಾಪಗಳಿಂದ ನನಗೆ ಭಾರವನ್ನುಂಟುಮಾಡಿರುವೆ ಮತ್ತು ನಿನ್ನ ಅಪರಾಧಗಳಿಂದ ನನ್ನನ್ನು ಕುಗ್ಗಿಸಿರುವೆ.
25 “ನಿಮ್ಮ ಪಾಪಗಳನ್ನೆಲ್ಲಾ ಅಳಿಸಿ ಹಾಕುವಾತನು ನಾನೇ. ನಾನು ಇದನ್ನು ನನಗೋಸ್ಕರವಾಗಿ ಮಾಡುತ್ತೇನೆ. ನಾನು ನಿಮ್ಮ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
26 ಆದರೆ ನೀನು ನನ್ನನ್ನು ಜ್ಞಾಪಿಸಿಕೊಳ್ಳಬೇಕು. ನಾವು ಒಟ್ಟಾಗಿ ಸೇರಿ ಯಾವದು ಸರಿ ಎಂದು ನಿರ್ಧರಿಸಬೇಕು. ನೀನು ಮಾಡಿದ್ದು ಸರಿಯಾಗಿದ್ದರೆ ರುಜುವಾತು ಮಾಡಬೇಕು.
27 ನಿನ್ನ ಮೊದಲನೆ ತಂದೆಯು ಪಾಪದಲ್ಲಿ ಬಿದ್ದನು. ನಿನ್ನ ವಕೀಲರು ನನಗೆ ವಿರುದ್ಧವಾಗಿ ಕಾರ್ಯ ಮಾಡಿದರು. 28ಪರಿಶುದ್ಧವಾಗಿ ಆಳುವ ನಿನ್ನವರನ್ನು ನಾನು ಅಪರಿಶುದ್ಧ ಮಾಡುವೆನು. ಯಾಕೋಬನನ್ನು ಸಂಪೂರ್ಣವಾಗಿ ನಾಶಮಾಡುವೆನು. ಇಸ್ರೇಲಿಗೆ ಕೆಟ್ಟ ವಿಷಯಗಳು ಸಂಭವಿಸುವವು.”
28 This verse may not be a part of this translation
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×