Bible Versions
Bible Books

Job 15 (ERVKN) Easy to Read Version - Kannadam

1 ಬಳಿಕ ತೇಮಾನಿನ ಎಲೀಫಜನು ಯೋಬನಿಗೆ ಉತ್ತರಿಸಿದನು:
2 “ಯೋಬನೇ, ನೀನು ನಿಜವಾಗಿಯೂ ಜ್ಞಾನಿಯಾಗಿದ್ದರೆ, ಬರಿದಾದ ನಿನ್ನ ವೈಯಕ್ತಿಕ ಮಾತುಗಳಿಂದ ಉತ್ತರಿಸುವುದಿಲ್ಲ. ಜ್ಞಾನಿಯು ಬಿಸಿಗಾಳಿಯಂತೆ ಉತ್ತರಿಸುವನೇ?
3 ಜ್ಞಾನಿಯು ನಿಷ್ಪ್ರಯೋಜಕವಾದ ಮಾತುಗಳಿಂದ ವಾದಿಸುತ್ತಾನೆಂದು ಭಾವಿಸಿಕೊಂಡಿರುವೆಯಾ?
4 ನೀನು ನಿನ್ನ ಮಾರ್ಗದಲ್ಲಿ ಹೋಗುವುದಾದರೆ, ದೇವರಲ್ಲಿ ಯಾರೂ ಭಯಭಕ್ತಿಯಿಡುವುದಿಲ್ಲ; ಆತನಿಗೆ ಯಾರೂ ಪ್ರಾರ್ಥಿಸುವುದಿಲ್ಲ.
5 ನಿನ್ನ ಪಾಪವೇ ನಿನ್ನ ಮಾತುಗಳಿಗೆ ಪ್ರೇರಕವಾಗಿವೆ. ನೀನು ಮೋಸಕರವಾದ ಮಾತುಗಳನ್ನು ಬಳಸುತ್ತಿರುವೆ.
6 ನೀನು ತಪ್ಪಿತಸ್ಥನೆಂದು ನಾನು ನಿರೂಪಿಸುವ ಅಗತ್ಯವಿಲ್ಲ. ಯಾಕಂದರೆ ನಿನ್ನ ಬಾಯ ಮಾತುಗಳೇ ನಿನ್ನನ್ನು ತಪ್ಪಿತಸ್ಥನೆಂದು ತೋರಿಸುತ್ತವೆ. ನಿನ್ನ ಸ್ವಂತ ತುಟಿಗಳೇ ನಿನಗೆ ವಿರುದ್ಧವಾಗಿ ಸಾಕ್ಷಿಕೊಡುತ್ತವೆ.
7 “ಯೋಬನೇ, ಎಲ್ಲರಿಗಿಂತ ಮೊದಲು ನೀನೇ ಹುಟ್ಟಿರುವುದಾಗಿ ಭಾವಿಸಿಕೊಂಡಿರುವಿಯಾ? ಬೆಟ್ಟಗಳಿಗಿಂತ ಮೊದಲೇ ನೀನು ಹುಟ್ಟಿದಿಯಾ?
8 ದೇವರ ರಹಸ್ಯ ಯೋಜನೆಗಳನ್ನು ಆಲಿಸಿರುವೆಯಾ? ನೀನೊಬ್ಬನೇ ಜ್ಞಾನಿಯೆಂದು ಭಾವಿಸಿಕೊಂಡಿರುವಿಯಾ?
9 ಯೋಬನೇ, ನಿನಗೆ ಗೊತ್ತಿರುವುದೆಲ್ಲಾ ನಮಗೂ ಗೊತ್ತಿದೆ. ನಿನಗೆ ಅರ್ಥವಾಗುವುದೆಲ್ಲಾ ನಮಗೂ ಅರ್ಥವಾಗುತ್ತದೆ.
10 ನಿನ್ನ ತಂದೆಗಿಂತಲೂ ವಯಸ್ಸಾಗಿರುವ, ಕೂದಲು ಬೆಳ್ಳಗಾಗಿರುವ ವೃದ್ಧನು ನಮ್ಮಲ್ಲಿದ್ದಾನೆ.
11 ದೇವರ ಆಧರಣೆಯ ಮಾತುಗಳೂ ನಮ್ಮ ನಯವಾದ ಮಾತುಗಳೂ ನಿನಗೆ ಸಾಲುವುದಿಲ್ಲವೇ?
12 ಯೋಬನೇ, ನಿನ್ನ ಆಲೋಚನೆಗಳು ನಿನ್ನನ್ನು ಕೊಂಡೊಯ್ದದ್ದೇಕೆ? ನಿನ್ನ ಕಣ್ಣುಗಳು ನಮ್ಮ ಮೇಲೆ ಕಿಡಿಕಿಡಿಯಾಗುವುದೇಕೆ?
13 ನೀನು ದೇವರ ಮೇಲೆ ಕೋಪಗೊಂಡು ನಿನ್ನ ಬಾಯಿಂದ ಅಂತಹ ಮಾತುಗಳನ್ನು ಸುರಿಸುತ್ತಿರುವೆ!
14 “ಮನುಷ್ಯನು ಎಷ್ಟರವನು? ಅವನು ಪರಿಶುದ್ಧನಾಗಿರಲು ಸಾಧ್ಯವೇ? ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಲು ಸಾಧ್ಯವೇ?
15 ದೇವರು ತನ್ನ ದೂತರುಗಳನ್ನು ಸಹ ನಂಬುವುದಿಲ್ಲ. ಆತನ ದೃಷ್ಟಿಯಲ್ಲಿ ಆಕಾಶಗಳು ಸಹ ಅಶುದ್ಧವಾಗಿವೆ.
16 ಹೀಗಿರಲು ದುಷ್ಟತನವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ ಕೆಟ್ಟವನೂ ಆಗಿರುವ ಮನುಷ್ಯನು ಎಷ್ಟೋ ಅಶುದ್ಧನಲ್ಲವೇ?
17 “ಯೋಬನೇ, ನನಗೆ ಕಿವಿಗೊಡು, ಆಗ ನಾನು ನಿನಗೆ ಅದನ್ನು ವಿವರಿಸುವೆನು. ನಾನು ನೋಡಿರುವುದನ್ನೇ ನಿನಗೆ ತಿಳಿಸುವೆನು.
18 ಜ್ಞಾನಿಗಳು ನನಗೆ ತಿಳಿಸಿದ ಸಂಗತಿಗಳನ್ನು ನಾನು ನಿನಗೆ ಹೇಳುವೆನು. ಜ್ಞಾನಿಗಳಿಗೆ ಅವರ ಪೂರ್ವಿಕರೇ ಸಂಗತಿಗಳನ್ನು ತಿಳಿಸಿದ್ದಾರೆ. ಅವರು ಯಾವ ರಹಸ್ಯಗಳನ್ನೂ ನನಗೆ ಮರೆಮಾಡಲಿಲ್ಲ.
19 ಅವರು ಮಾತ್ರ ತಮ್ಮ ದೇಶದಲ್ಲಿ ವಾಸಿಸಿದರು. ಅವರ ಮಧ್ಯದಲ್ಲಿ ಯಾವ ವಿದೇಶಿಯನೂ ಹಾದು ಹೋಗುತ್ತಿರಲಿಲ್ಲ.
20 ದುಷ್ಟನು ತನ್ನ ಜೀವಮಾನವೆಲ್ಲಾ ಯಾತನೆಯನ್ನು ಅನುಭವಿಸುವನು. ಕ್ರೂರಿಯು ತನಗೆ ನೇಮಕಗೊಂಡಿರುವ ವರ್ಷಗಳಲ್ಲೆಲ್ಲಾ ಕಷ್ಟಪಡುವನು.
21 ಭೀಕರವಾದ ಶಬ್ದಗಳು ಅವನ ಕಿವಿಗಳಲ್ಲೇ ಇರುತ್ತವೆ. ತಾನು ಸುರಕ್ಷಿತನಾಗಿರುವುದಾಗಿ ಅವನು ಯೋಚಿಸುವಾಗಲೇ ವೈರಿಯು ಅವನ ಮೇಲೆ ಆಕ್ರಮಣಮಾಡುವನು.
22 ದುಷ್ಟನಿಗೆ ಕತ್ತಲೆಯಿಂದ ಪಾರಾಗುತ್ತೇನೆ ಎಂಬ ನಿರೀಕ್ಷೆಯೇ ಇಲ್ಲ. ಅವನನ್ನು ಕೊಲ್ಲಲು ಕತ್ತಿಯು ಎಲ್ಲೋ ಕಾದುಕೊಂಡಿದೆ.
23 ಅವನು ಅತ್ತಿತ್ತ ಅಲೆದಾಡುವನು; ಅವನ ದೇಹವು ರಣಹದ್ದುಗಳಿಗೆ ಆಹಾರವಾಗುವುದು. ಮರಣವು ತನಗೆ ಬಹು ಸಮೀಪವಾಗಿರುವುದು ಅವನಿಗೆ ಗೊತ್ತೇ ಇದೆ.
24 ಚಿಂತೆಸಂಕಟಗಳು ಅವನನ್ನು ಭಯಗೊಳಿಸುತ್ತವೆ. ಅವನನ್ನು ನಾಶಮಾಡಲು ಸಿದ್ಧನಾಗಿರುವ ರಾಜನಂತೆ ಅವು ಅವನ ಮೇಲೆ ಆಕ್ರಮಣಮಾಡುತ್ತವೆ.
25 ಯಾಕಂದರೆ ದುಷ್ಟನು ದೇವರಿಗೆ ವಿರುದ್ಧವಾಗಿ ತನ್ನ ಕೈಯನ್ನು ಝಳಪಿಸುತ್ತಾನೆ. ದುಷ್ಟನು ಸರ್ವಶಕ್ತನಾದ ದೇವರ ವಿರುದ್ಧವಾಗಿ ಮಹಾಶೂರನಂತೆ ಆಕ್ರಮಣ ಮಾಡುವನು.
26 ಅವನು ಬಹು ಮೊಂಡನಾಗಿದ್ದಾನೆ. ದುಷ್ಟನು ಮಹಾಗುರಾಣಿಯನ್ನು ಹಿಡಿದು ದೇವರನ್ನು ಎದುರಿಸಲು ಪ್ರಯತ್ನಿಸುವನು.
27 “ದುಷ್ಟನ ಮುಖದಲ್ಲಿ ಕೊಬ್ಬೇರಿದೆ. ಅವನ ಸೊಂಟದಲ್ಲಿ ಬೊಜ್ಜು ಬೆಳೆದುಕೊಂಡಿದೆ.
28 ಪಾಳುಬಿದ್ದಿರುವ ಮನೆಗಳಲ್ಲಿ ದುಷ್ಟನು ವಾಸಿಸುವನು ಹಾಳುದಿಬ್ಬಗಳಾಗಬೇಕೆಂಬುದೇ ಮನೆಗಳ ಗತಿಯಾಗಿದೆ.
29 ದುಷ್ಟನು ಬಹುಕಾಲದವರೆಗೆ ಐಶ್ವರ್ಯವಂತನಾಗಿರಲು ಸಾಧ್ಯವಿಲ್ಲ. ಅವನ ಐಶ್ವರ್ಯವು ಶಾಶ್ವತವಲ್ಲ; ಅವನ ಆಸ್ತಿಗಳು ದೇಶದಲ್ಲಿ ವೃದ್ಧಿಯಾಗುವುದಿಲ್ಲ.
30 ದುಷ್ಟನು ಕತ್ತಲೆಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ. ಬೆಂಕಿಯಿಂದ ಸುಟ್ಟುಹೋದ ಕೊಂಬೆಗಳನ್ನು ಹೊಂದಿರುವ ಮರದಂತೆ ಅವನಿರುವನು. ದೇವರ ಉಸಿರು ದುಷ್ಟನನ್ನು ಬಡಿದುಕೊಂಡು ಹೋಗುವುದು.
31 ದುಷ್ಟನು ಅಯೋಗ್ಯವಾದವುಗಳ ಮೇಲೆ ನಂಬಿಕೆಯಿಟ್ಟು, ತನ್ನನ್ನು ತಾನೇ ಮೋಸಮಾಡಿಕೊಳ್ಳದಿರಲಿ. ಯಾಕಂದರೆ ಅದಕ್ಕೆ ಪ್ರತಿಫಲವಾಗಿ ಅವನಿಗೇನೂ ದೊರೆಯುವುದಿಲ್ಲ.
32 ದುಷ್ಟನು ತನ್ನ ಜೀವಿತ ಮುಗಿಯುವುದಕ್ಕಿಂತ ಮೊದಲೇ ಮುದುಕನಾಗುವನು; ಒಣಗಿಹೋಗಿ ಇನ್ನೆಂದಿಗೂ ಹಸುರಾಗದ ಬಳ್ಳಿಯಂತಾಗುವನು;
33 ಮಾಗುವುದಕ್ಕಿಂತ ಮೊದಲೇ ತನ್ನ ದ್ರಾಕ್ಷಿಯನ್ನು ಕಳೆದುಕೊಳ್ಳುವ ದ್ರಾಕ್ಷಿ ಬಳ್ಳಿಯಂತಿರುವನು; ಹೂವುಗಳು ಉದುರಿ ಹೋದ ಆಲಿವ್ ಮರದಂತಿರುವನು.
34 ಯಾಕಂದರೆ ದೇವರಿಲ್ಲದ ಜನರು ಫಲ ಕೊಡಲಾರರು. ಲಂಚಕೋರರ ಗುಡಾರಗಳು ಬೆಂಕಿಯಿಂದ ಸುಟ್ಟುಹೋಗುತ್ತವೆ.
35 ಅವರು ಗರ್ಭಧರಿಸಿ ಕೆಡುಕನ್ನೇ ಹೆರುವರು. ಅವರ ಗರ್ಭದಲ್ಲಿರುವ ಮಗುವು ಮೋಸಕರವಾದದ್ದು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×