Bible Versions
Bible Books

Job 42 (ERVKN) Easy to Read Version - Kannadam

1 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಇಂತೆಂದನು:
2 “ಯೆಹೋವನೇ, ನೀನು ಪ್ರತಿಯೊಂದನ್ನೂ ಮಾಡಬಲ್ಲೆ ಎಂದು ನನಗೆ ಗೊತ್ತಿದೆ. ನೀನು ಮಾಡಿದ ಆಲೋಚನೆಗಳನ್ನು ಯಾವುದೂ ಬದಲಿಸಲಾರದು; ಯಾವುದೂ ನಿಲ್ಲಿಸಲಾರದು.
3 ಯೆಹೋವನೇ, ‘ಈ ಮೂರ್ಖಸಂಗತಿಗಳನ್ನು ಹೇಳುತ್ತಿರುವ ಮೂಢನು ಯಾರು? ಎಂದು ನೀನು ಪ್ರಶ್ನಿಸಿದೆ. ನನಗೆ ಅರ್ಥವಾಗಿಲ್ಲದ ಸಂಗತಿಗಳ ಬಗ್ಗೆಯೂ ನಾನು ತಿಳಿಯಲಾಗದಷ್ಟು ಆಶ್ಚರ್ಯಕರವಾದ ಅದ್ಭುತಕಾರ್ಯಗಳ ಬಗ್ಗೆಯೂ ನಾನು ಮಾತಾಡಿದ್ದೇನೆ.
4 “ಯೋಹೋವನೇ, ನೀನು ನಿನಗೆ, ‘ಯೋಬನೇ, ಆಲಿಸು; ನಾನು ಮಾತಾಡುತ್ತೇನೆ. ನಾನು ನಿನಗೆ ಪ್ರಶ್ನೆಗಳನ್ನು ಕೇಳುತ್ತೇನೆ. ನೀನು ನನಗೆ ಉತ್ತರಿಸು’ ಎಂದು ಹೇಳಿದೆ.
5 ಯೆಹೋವನೇ, ಮೊದಲಾದರೋ ನಾನು ನಿನ್ನ ಬಗ್ಗೆ ಕೇಳಿದ್ದೆನು; ಈಗಲಾದರೋ ಕಣ್ಣಾರೆ ನಿನ್ನನ್ನು ಕಂಡಿದ್ದೇನೆ.
6 ಯೆಹೋವನೇ, ನನ್ನ ವಿಷಯದಲ್ಲಿ ನನಗೇ ನಾಚಿಕೆಯಾಗಿದೆ. ನನಗೆ ಎಷ್ಟೋ ದುಃಖವಾಗಿದೆ. ನಾನು ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತುಕೊಳ್ಳುತ್ತೇನೆ. ನನ್ನ ಹೃದಯವನ್ನೂ ಜೀವಿತವನ್ನೂ ಮಾರ್ಪಡಿಸಿಕೊಳ್ಳುವುದಾಗಿ ನಾನು ನಿನಗೆ ವಾಗ್ದಾನ ಮಾಡುತ್ತೇನೆ.”
7 ಯೆಹೋವನು ಯೋಬನೊಂದಿಗೆ ಮಾತಾಡಿದ ಮೇಲೆ, ಎಲೀಫಜನೊಂದಿಗೆ ಮಾತಾಡಿದನು. ಎಲೀಫಜನು ತೇಮಾನ್ ಪಟ್ಟಣದವನಾಗಿದ್ದನು. ಯೆಹೋವನು ಎಲೀಫಜನಿಗೆ, “ನಾನು ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ. ಯಾಕೆಂದರೆ ನೀನು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ. ಆದರೆ ಯೋಬನು ನನ್ನ ಬಗ್ಗೆ ಹೇಳಿದವುಗಳು ಸತ್ಯವಾಗಿವೆ. ಯೋಬನು ನನ್ನ ಸೇವಕ.
8 ಆದ್ದರಿಂದ, ಈಗ ನೀವು (ಮೂವರು) ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಹೋಗಿ ಅವುಗಳನ್ನು ನಿಮಗೋಸ್ಕರ ದೋಷಪರಿಹಾರಕಯಜ್ಞ ಮಾಡಿರಿ. ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥಿಸುವನು. ಆಗ ನಾನು ಅವನ ಪ್ರಾರ್ಥನೆಗೆ ಖಂಡಿತವಾಗಿ ಉತ್ತರಿಸುವೆನು; ನಿಮ್ಮ ಮೂರ್ಖತನಕ್ಕೆ ಬರಬೇಕಾಗಿದ್ದ ದಂಡನೆಯನ್ನು ಮನ್ನಿಸುವೆನು. ನೀವು ನನ್ನ ಬಗ್ಗೆ ಹೇಳಿದವುಗಳು ಸತ್ಯವಲ್ಲ; ಆದರೆ ನನ್ನ ಸೇವಕನಾದ ಯೋಬನು ಹೇಳಿದವುಗಳು ಸತ್ಯವಾಗಿವೆ.” ಎಂದನು.
9 ಆಗ ತೇಮಾನ್ ಪಟ್ಟಣದ ಎಲೀಫಜನೂ ಶೂಹ ದೇಶದ ಬಿಲ್ದದನೂ ನಾಮಾಥ್ಯ ದೇಶದ ಚೋಫರನೂ ಯೆಹೋವನಿಗೆ ವಿಧೇಯರಾದರು. ಯೆಹೋವನು ಯೋಬನ ಪ್ರಾರ್ಥನೆಗೆ ಉತ್ತರವನ್ನು ನೀಡಿದನು.
10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಮೇಲೆ ಯೆಹೋವನು ಯೋಬನನ್ನು ಅಭಿವೃದ್ಧಿಪಡಿಸಿದನು. ಆತನು ಯೋಬನಿಗೆ, ಮೊದಲಿಗಿಂತ ಎರಡರಷ್ಟು ಹೆಚ್ಚಿಗೆ ಆಸ್ತಿಯನ್ನು ಕೊಟ್ಟನು.
11 ಯೋಬನ ಸಹೋದರ ಸಹೋದರಿಯರೂ ಅವನ ಪರಿಚಯಸ್ಥರೂ ಅವನ ಮನೆಗೆ ಬಂದರು; ಅವನೊಂದಿಗೆ ಊಟ ಮಾಡಿದರು; ಯೆಹೋವನು ಅವನಿಗೆ ಬಹಳ ಕಷ್ಟವನ್ನು ಬರಮಾಡಿದ್ದರಿಂದ ಅವರು ಮರುಕದಿಂದ ಅವನನ್ನು ಸಂತೈಸಿದರು. ಪ್ರತಿಯೊಬ್ಬರು ಯೋಬನಿಗೆ ಒಂದು ಬೆಳ್ಳಿಯ ನಾಣ್ಯವನ್ನೂ ಒಂದು ಚಿನ್ನದ ಉಂಗುರವನ್ನೂ ಕೊಟ್ಟರು.
12 ಯೆಹೋವನು ಯೋಬನ ಜೀವಿತದ ಅಂತಿಮ ಸ್ಥಿತಿಯನ್ನು ಮೊದಲನೆ ಸ್ಥಿತಿಗಿಂತಲೂ ಹೆಚ್ಚಾಗಿ ಆಶೀರ್ವದಿಸಿದನು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರುಸಾವಿರ ಒಂಟೆಗಳೂ ಒಂದುಸಾವಿರ ಜೊತೆ ಎತ್ತುಗಳೂ ಒಂದುಸಾವಿರ ಹೆಣ್ಣು ಕತ್ತೆಗಳೂ ಇದ್ದವು.
13 ಅಲ್ಲದೆ ಯೋಬನು ಏಳು ಗಂಡುಮಕ್ಕಳನ್ನೂ ಮೂವರು ಹೆಣ್ಣುಮಕ್ಕಳನ್ನೂ ಪಡೆದನು.
14 ಯೋಬನು ಮೊದಲನೆ ಮಗಳಿಗೆ ‘ಯೆಮೀಮ’ ಎಂತಲೂ, ಎರಡನೆಯವಳಿಗೆ ‘ಕೆಚೀಯ’ ಎಂತಲೂ ಮೂರನೆಯವಳಿಗೆ ‘ಕೆರೆನ್ಹಪ್ಪೂಕ್’ ಎಂತಲೂ ಹೆಸರಿಟ್ಟನು.
15 ಯೋಬನ ಹೆಣ್ಣುಮಕ್ಕಳು ಇಡೀ ದೇಶದಲ್ಲೇ ಅತ್ಯಂತ ಸೌಂದರ್ಯವುಳ್ಳ ಸ್ತ್ರೀಯರಾಗಿದ್ದರು. ಯೋಬನು ತನ್ನ ಗಂಡುಮಕ್ಕಳಿಗೆ ಆಸ್ತಿಯನ್ನು ಕೊಟ್ಟಂತೆ ತನ್ನ ಹೆಣ್ಣುಮಕ್ಕಳಿಗೂ ಕೊಟ್ಟನು.
16 ಮೇಲೆ ಯೋಬನು ನೂರನಲವತ್ತು ವರ್ಷಗಳ ಕಾಲ ಬದುಕಿದ್ದನು. ಅವನು ತನ್ನ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಮರಿಮಕ್ಕಳನ್ನೂ ಮರಿಮೊಮ್ಮಕ್ಕಳನ್ನೂ ಮರಿಮೊಮ್ಮಕ್ಕಳಿಗೆ ಹುಟ್ಟಿದ ಮಕ್ಕಳನ್ನೂ ಕಣ್ಣಾರೆಕಂಡನು.
17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ತೀರಿಕೊಂಡನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×