Bible Versions
Bible Books

Joel 2 (ERVKN) Easy to Read Version - Kannadam

1 ಚೀಯೋನಿನಲ್ಲಿ ತುತ್ತೂರಿಯನ್ನೂದಿರಿ. ನನ್ನ ಪವಿತ್ರ ಪರ್ವತದಲ್ಲಿ ಧ್ವನಿಯೆತ್ತಿ ಎಚ್ಚರಿಕೆ ನೀಡಿರಿ. ದೇಶದಲ್ಲಿ ವಾಸಿಸುವ ಎಲ್ಲಾ ಜನರು ಭಯದಿಂದ ನಡುಗಲಿ. ಯೆಹೋವನ ಮಹಾದಿನವು ಬರಲಿದೆ; ಯೆಹೋವನ ಮಹಾದಿನವು ಹತ್ತಿರವೇ ಇದೆ.
2 ದಿನವು ಕರಾಳ ದಿನ. ಮೋಡದಿಂದ ತುಂಬಿದ ದಿನವಾಗಿದೆ. ಅಂದು ಸೂರ್ಯೋದಯದ ಸಮಯದಲ್ಲಿ ಪರ್ವತದಲ್ಲಿ ಹರಡಿದ ಸೈನ್ಯವನ್ನು ನೀವು ನೋಡುವಿರಿ. ಅದು ಬಲಿಷ್ಠವಾದ ಮಹಾಸೈನ್ಯ. ಅಂಥ ಸೈನ್ಯವು ಹಿಂದೆಂದೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.
3 ಸೈನ್ಯವು ಸುಡುವ ಬೆಂಕಿಯಂತೆ ದೇಶವನ್ನು ನಾಶ ಮಾಡುವದು. ಏದೆನ್ ತೋಟದಂತೆ ಕಂಗೊಳಿಸುತ್ತಿದ್ದ ದೇಶವು ಅದು ಬಂದ ಮೇಲೆ ಬೆಂಗಾಡಿನಂತಿರುವದು. ಅವರಿಂದ ಯಾರೂ ತಪ್ಪಿಸಿಕೊಳ್ಳಲಾರರು.
4 ಅವರು ಕುದುರೆಯಂತೆ ಕಾಣುವರು, ಯುದ್ಧದ ಕುದುರೆಯಂತೆ ಓಡುವರು.
5 ಕಿವಿಗೊಟ್ಟು ಕೇಳಿರಿ. ಪರ್ವತಗಳ ಮೇಲೆ ಓಡುವ ರಥಗಳ ಶಬ್ದದಂತೆ ಅವರ ಶಬ್ದವು ಕೇಳುತ್ತದೆ. ಬೆಂಕಿಯ ಜ್ವಾಲೆಗಳು ಹೊಟ್ಟನ್ನು ಸುಡುವಂತೆ ಅವರ ಶಬ್ದವು ಕೇಳುತ್ತದೆ. ಬಲಿಷ್ಠರಾದ ಅವರು ಯುದ್ಧಕ್ಕೆ ಸಿದ್ಧರಾಗಿದ್ದಾರೆ.
6 ಸೈನ್ಯವನ್ನು ನೋಡುವ ಜನರು ಹೆದರಿ ನಡುಗುವರು; ಅವರ ಮುಖಗಳು ಕಂಗೆಡುವದು.
7 ಸೈನಿಕರು ವೇಗವಾಗಿ ಓಡುವರು; ಗೋಡೆ ಹತ್ತುವರು, ನೇರವಾಗಿ ಮುಂದೆ ಹೋಗುವರು. ದಾರಿಯಿಂದ ಅತ್ತಿತ್ತ ಹೋಗರು;
8 ಒಬ್ಬರ ಮೇಲೊಬ್ಬರು ಬೀಳದೆ ಪ್ರತಿಯೊಬ್ಬ ಸೈನಿಕನು ತನ್ನ ದಾರಿಯಲ್ಲಿಯೇ ಮುಂದುವರಿಯುವನು. ಒಬ್ಬ ಸೈನಿಕನಿಗೆ ಗಾಯವಾಗಿ ಬಿದ್ದರೂ ಉಳಿದವರು ನಿಲ್ಲದೆ ಮುಂದಕ್ಕೆ ನುಗ್ಗುತ್ತಾ ಇರುವರು.
9 ಅವರು ಪಟ್ಟಣದ ಕಡೆಗೆ ಓಡಿ ತ್ವರೆಯಾಗಿ ಗೋಡೆ ಹತ್ತುವರು. ಮನೆಯೊಳಗೆ ನುಗ್ಗುವರು; ಕಳ್ಳರಂತೆ ಕಿಟಕಿಯಿಂದ ನುಸುಳುವರು.
10 ಅವರ ಮುಂದೆ ಭೂಮಿಯೂ ಆಕಾಶವೂ ನಡುಗುವುದು; ಸೂರ್ಯಚಂದ್ರರು ಕಪ್ಪಾಗಿ ಹೋಗುವರು; ನಕ್ಷತ್ರಗಳು ಹೊಳಪನ್ನು ಕಳೆದುಕೊಳ್ಳುವುದು.
11 ಯೆಹೋವನು ತನ್ನ ಸೈನ್ಯವನ್ನು ಮಹಾಧ್ವನಿಯಿಂದ ಕರೆಯುತ್ತಾನೆ. ಆತನ ಶಿಬಿರವು ದೊಡ್ಡದಾಗಿದೆ. ಸೈನ್ಯವು ಆತನ ಆಜ್ಞೆಯನ್ನು ಪಾಲಿಸುತ್ತದೆ; ಸೈನ್ಯವು ಮಹಾ ಬಲಿಷ್ಠವಾಗಿದೆ. ಯೆಹೋವನ ಮಹಾದಿನವು ಮಹಾ ಭಯಂಕರವಾದ ದಿನವಾಗಿದೆ. ಅದನ್ನು ಸಹಿಸಲು ಯಾರಿಗೂ ಸಾಧ್ಯವಿಲ್ಲ.
12 ಇದು ಯೆಹೋವನ ಸಂದೇಶ: “ನಿಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಬನ್ನಿರಿ, ನೀವು ದುಷ್ಟತ್ವವನ್ನು ನಡಿಸಿರುವದರಿಂದ ದುಃಖಿಸಿರಿ, ಅಳಿರಿ, ಉಪವಾಸ ಮಾಡಿರಿ.
13 ನಿಮ್ಮ ಬಟ್ಟೆಗಳನ್ನಲ್ಲ, ಹೃದಯವನ್ನು ಹರಿಯಿರಿ.” ನಿಮ್ಮ ದೇವರಾದ ಯೆಹೋವನ ಬಳಿಗೆ ಬನ್ನಿರಿ. ಆತನು ದಯಾಪರನೂ ಕನಿಕರವುಳ್ಳವನೂ ಆಗಿದ್ದಾನೆ. ಆತನು ಬೇಗನೇ ಕೋಪಿಸುವುದಿಲ್ಲ. ಆತನಲ್ಲಿ ಆಳವಾದ ಪ್ರೀತಿ ಇದೆ. ಆತನು ಯೋಚಿಸಿದ ಶಿಕ್ಷೆಯನ್ನು ಒಂದುವೇಳೆ ನಿಮಗೆ ಕೊಡದೆ ತನ್ನ ಮನಸ್ಸನ್ನು ಬದಲಾಯಿಸಾನು.
14 ಒಂದುವೇಳೆ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿದರೂ ಬದಲಾಯಿಸಾನು, ಹೇಳಲು ಬರುವುದಿಲ್ಲ. ಒಂದುವೇಳೆ ಆತನು ನಿಮಗಾಗಿ ಆಶೀರ್ವಾದವನ್ನು ಬಿಟ್ಟು ಹೋಗಬಹುದು. ಆಗ ನೀವು ದೇವರಾದ ಯೆಹೋವನಿಗೆ ಧಾನ್ಯ ಮತ್ತು ಪಾನ ಸಮರ್ಪಣೆ ಮಾಡುವಿರಿ.
15 ಚೀಯೋನಿನಲ್ಲಿ ತುತ್ತೂರಿ ಊದಿರಿ. ವಿಶೇಷ ಕೂಟಕ್ಕಾಗಿ ಜನರನ್ನು ಕೂಡಿಸಿರಿ. ಉಪವಾಸದ ದಿನ ಗೊತ್ತು ಮಾಡಿರಿ.
16 ವಿಶೇಷ ಕೂಟಕ್ಕಾಗಿ ಜನರನ್ನು ಒಟ್ಟಾಗಿ ಕೂಡಿಸಿರಿ. ಪ್ರಾಯಸ್ಥರನ್ನು ಕೂಡಿಸಿರಿ. ಮಕ್ಕಳನ್ನೂ ಕೂಡಿಸಿರಿ. ಮೊಲೆ ಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ. ವಧುವರರು ತಮ್ಮ ಶೋಭನದ ಕೋಣೆಯಿಂದ ಹೊರಬರಲಿ.
17 ಯೆಹೋವನ ಸೇವಕರಾದ ಯಾಜಕರು ಮಂಟಪಕ್ಕೂ ವೇದಿಕೆಗೂ ಮಧ್ಯದಲ್ಲಿ ಗೋಳಾಡಲಿ. ಜನರೆಲ್ಲಾ ಹೀಗೆ ಹೇಳಬೇಕು, “ಯೆಹೋವನೇ, ನಿನ್ನ ಜನರ ಮೇಲೆ ಕರುಣೆ ಇಡು, ನಿನ್ನ ಜನರನ್ನು ನಾಚಿಕೆಗೆ ತುತ್ತಾಗುವಂತೆ ಮಾಡಬೇಡ. ನಿನ್ನ ಜನರ ವಿಷಯವಾಗಿ ಅನ್ಯಜನರು ಗೇಲಿ ಮಾಡದಿರಲಿ. ಇತರ ದೇಶದ ಜನರು ನಮಗೆ ಹಾಸ್ಯ ಮಾಡುತ್ತಾ, ‘ಅವರ ದೇವರು ಎಲ್ಲಿ?’ ಎಂದು ಹೇಳದ ಹಾಗೆ ಮಾಡು.”
18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು. ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು: “ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು. ನಿಮಗೆ ಬೇಕಾದಷ್ಟು ಇರುವದು. ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು. ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು. ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು, ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು. ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು. ಆಗ ಭಯಂಕರ ಹೊಲಸು ವಾಸನೆ ಇರುವದು.”
21 ದೇಶವೇ, ಭಯಪಡದಿರು. ಯೆಹೋವನು ಮಹತ್ಕಾರ್ಯವನ್ನು ಮಾಡಲಿಕ್ಕಿರುವದರಿಂದ ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ. ಮರುಭೂಮಿಯು ಹುಲ್ಲುಗಾವಲಾಗುವದು. ಮರಗಳು ಹಣ್ಣುಗಳನ್ನು ಬಿಡುವವು. ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ತುಂಬಾ ಹಣ್ಣುಗಳನ್ನು ಬಿಡುವವು.
23 ಆದುದರಿಂದ ಚೀಯೋನಿನ ಜನರೇ, ಸಂತೋಷಪಡಿರಿ. ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ. ಆತನು ನಿಮಗೆ ಮಳೆ ಸುರಿಸುವನು. ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.
24 ಕಣಜಗಳು ಗೋದಿಯಿಂದ ತುಂಬಿರುವವು. ಪಿಪಾಯಿಗಳು ಎಣ್ಣೆಯಿಂದಲೂ, ದ್ರಾಕ್ಷಾರಸದಿಂದಲೂ ತುಂಬಿತುಳುಕುವವು.
25 “ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು. ಮಿಡಿತೆಗಳ ಗುಂಪು, ದೊಡ್ಡ ಮಿಡಿತೆ, ನಾಶಮಾಡುವ ಮಿಡಿತೆ, ಹಾರುವ ಮಿಡಿತೆ, ಚೂರಿ ಮಿಡಿತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು. ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
26 ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ. ನೀವು ಸಂತೃಪ್ತರಾಗುವಿರಿ. ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ. ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು.
27 ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ. ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ. ನನ್ನ ಹೊರತು ಬೇರೆ ದೇವರುಗಳಿಲ್ಲ. ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.
28 “ಆ ಬಳಿಕ ನಾನು ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು. ನಿಮ್ಮ ಗಂಡು ಹೆಣ್ಣು ಮಕ್ಕಳು ಪ್ರವಾದಿಸುವರು. ನಿಮ್ಮ ವೃದ್ಧರು ಕನಸು ಕಾಣುವರು. ನಿಮ್ಮ ಯುವಕರಿಗೆ ದರ್ಶನಗಳಾಗುವವು.
29 ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.
30 ಭೂಮ್ಯಾಕಾಶಗಳಲ್ಲಿ ವಿಚಿತ್ರ ಸಂಗತಿಗಳನ್ನು ನಾನು ತೋರಿಸುವೆನು. ಅಲ್ಲಿ ರಕ್ತ, ಬೆಂಕಿ ಮತ್ತು ದಟ್ಟವಾದ ಹೊಗೆಯು ಇರುವದು.
31 ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತದಂತಾಗುವನು. ಆಗ ಯೆಹೋವನ ಭಯಂಕರ ದಿನವು ಬರುವುದು.
32 ಆಗ ಯೆಹೋವನ ಹೆಸರನ್ನು ಹೇಳಿಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು. ಚೀಯೋನ್ ಪರ್ವತದಲ್ಲಿಯೂ ಜೆರುಸಲೇಮಿನಲ್ಲಿಯೂ ರಕ್ಷಿಸಲ್ಪಟ್ಟ ಜನರಿರುವರು. ಯೆಹೋವನು ಹೇಳಿದ ಪ್ರಕಾರವೇ ಇದು ಆಗುವುದು. ಉಳಿದ ಜನರಲ್ಲಿ ಯೆಹೋವನು ಕರೆದಿರುವ ಜನರು ಸೇರಿಕೊಂಡಿರುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×