Bible Versions
Bible Books

John 20 (ERVKN) Easy to Read Version - Kannadam

1 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು
2 ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.
3 ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು.
4 ಅವರಿಬ್ಬರೂ ಓಡುತ್ತಾ ಹೋದರು. ಆದರೆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು.
5 ಶಿಷ್ಯನು ಬಗ್ಗಿ ಒಳಗೆ ನೋಡಿದನು.
6 ನಾರು ಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು.
7 ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು.
8 ಬಳಿಕ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು.
9 (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)
10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು.
11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ,
12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತು ಕೊಂಡಿದ್ದನು.
13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು. ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು.
14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.
15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು. ತೋಟವನ್ನು ನೋಡಿಕೊಳ್ಳುವವನೇ ಇವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.
16 ಯೇಸು ಆಕೆಗೆ, “ಮರಿಯಳೇ” ಎಂದನು. ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”)
17 ಯೇಸು ಆಕೆಗೆ, “ನನ್ನನ್ನು ಹಿಡಿದುಕೊಳ್ಳಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ؅ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ ಎಂಬುದಾಗಿ ಹೇಳು” ಎಂದನು.
18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.
19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು.
20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.
21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು.
22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ.
23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.
24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು.
25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.
26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು.
27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.
28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.
29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.
30 ಯೇಸು ಇನ್ನೂ ಅನೇಕ ಸೂಚಕ ಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಅದ್ಭುತಕಾರ್ಯಗಳನ್ನು ಪುಸ್ತಕದಲ್ಲಿ ಬರೆದಿಲ್ಲ.
31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×