Bible Versions
Bible Books

Joshua 3 (ERVKN) Easy to Read Version - Kannadam

1 ಮರುದಿನ, ಬೆಳಗಿನ ಜಾವದಲ್ಲಿ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಎದ್ದು ಆಕಾಶಿಯದಿಂದ ಹೊರಟು ಜೋರ್ಡನ್ ನದಿಯವರೆಗೆ ಬಂದರು. ಅವರು ಜೋರ್ಡನ್ ನದಿಯನ್ನು ದಾಟುವ ಮೊದಲು ಅಲ್ಲಿ ಪಾಳೆಯ ಮಾಡಿಕೊಂಡರು.
2 ಮೂರು ದಿನಗಳ ತರುವಾಯ ಜನನಾಯಕರು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ,
3 “ಯಾಜಕರು ಮತ್ತು ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ನೀವು ಕಾಣುವಾಗ ಅವರನ್ನು ಹಿಂಬಾಲಿಸಿರಿ.
4 ನಿಮಗೂ ಒಡಂಬಡಿಕೆಯ ಪೆಟ್ಟಿಗೆಗೂ ಮೂರು ಸಾವಿರ ಅಡಿ ಅಂತರವಿರಲಿ. ಅದರ ಸಮೀಪ ನೀವು ಹೋಗಕೂಡದು. ದಾರಿಯಲ್ಲಿ ನೀವು ಹಿಂದೆಂದೂ ಪ್ರಯಾಣ ಮಾಡಿಲ್ಲ. ಆದರೆ ನೀವು ಅವರನ್ನು ಹಿಂಬಾಲಿಸಿದರೆ ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿಯುತ್ತದೆ” ಎಂದು ಸಾರಿದರು.
5 “ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಿರಿ. ನಾಳೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುತ್ತಾನೆ” ಎಂದು ಯೆಹೋಶುವನು ಜನರಿಗೆ ತಿಳಿಸಿದನು.
6 ಬಳಿಕ ಯೆಹೋಶುವನು ಯಾಜಕರಿಗೆ, “ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜನಗಳ ಮುಂದೆ ನದಿಯ ಕಡೆಗೆ ನಡೆಯಿರಿ” ಎಂದನು. ಯಾಜಕರು ಪೆಟ್ಟಿಗೆಯನ್ನು ಹೊತ್ತುಕೊಂಡು ಜನರ ಮುಂದೆ ನಡೆದರು.
7 ಆಗ ಯೆಹೋವನು ಯೆಹೋಶುವನಿಗೆ, “ನಾನು ನಿನ್ನನ್ನು ಇಂದಿನಿಂದ ಎಲ್ಲಾ ಇಸ್ರೇಲರ ಮುಂದೆ ಘನವಂತನನ್ನಾಗಿ ಮಾಡುವೆನು. ನಾನು ಮುಂಚೆ ಮೋಶೆಯ ಸಂಗಡ ಇದ್ದಂತೆಯೇ ನಿನ್ನ ಸಂಗಡವೂ ಇದ್ದೇನೆಂಬುದು ಆಗ ಜನರಿಗೆ ತಿಳಿಯುತ್ತದೆ.
8 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಯಾಜಕರಿಗೆ, ‘ನೀವು ಜೋರ್ಡನ್ ನದಿಯ ತೀರಕ್ಕೆ ಹೋಗಿ, ನೀರಿನೊಳಗೆ ಕಾಲಿಡದೆ ಅದರ ಅಂಚಿನಲ್ಲೇ ನಿಂತುಕೊಳ್ಳಿರಿ’ ಎಂದು ಹೇಳು” ಅಂದನು.
9 ಆಗ ಯೆಹೋಶುವನು ಇಸ್ರೇಲರಿಗೆ, “ಇಲ್ಲಿ ಬನ್ನಿರಿ; ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ.
10 ಚೈತನ್ಯಸ್ವರೂಪನಾದ ದೇವರು ನಿಜವಾಗಿಯೂ ನಿಮ್ಮ ಸಂಗಡ ಇದ್ದಾನೆ ಎಂಬುದಕ್ಕೆ ಇಲ್ಲಿ ಒಂದು ಸಾಕ್ಷಿ ಇದೆ. ಆತನು ನಿಜವಾಗಿಯೂ ನಿಮ್ಮ ವೈರಿಗಳನ್ನು ಸೋಲಿಸುತ್ತಾನೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ. ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು, ಇವರನ್ನೆಲ್ಲಾ ಆತನು ಸೋಲಿಸುತ್ತಾನೆ. ದೇಶದಿಂದ ಅವರನ್ನು ಬಲವಂತವಾಗಿ ಹೊರಗಟ್ಟುತ್ತಾನೆ.
11 ಇದೋ ಇಲ್ಲಿದೆ ಸಾಕ್ಷಿ. ನೀವು ಜೋರ್ಡನ್ ನದಿಯನ್ನು ದಾಟುವಾಗ ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ನಿಮ್ಮ ಮುಂದೆ ಹೋಗುವುದು.
12 ಈಗ ಇಸ್ರೇಲರ ಕುಲಗಳಿಂದ ಪ್ರತಿಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಿರಿ.
13 ಯಾಜಕರು ಯೆಹೋವನ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವರು. ಯೆಹೋವನು ಸರ್ವಲೋಕದ ಒಡೆಯನಾಗಿದ್ದಾನೆ. ಅವರು ಪೆಟ್ಟಿಗೆಯನ್ನು ನಿಮ್ಮ ಮುಂದೆ ಜೋರ್ಡನ್ ನದಿಯಲ್ಲಿ ತೆಗೆದುಕೊಂಡು ಹೋಗುವರು. ಅವರು ನೀರಿನಲ್ಲಿ ಪ್ರವೇಶ ಮಾಡಿದಾಗ ಜೋರ್ಡನ್ ನದಿಯ ನೀರು ಹರಿಯದೆ ನಿಂತುಬಿಡುವುದು. ನೀರು ಮುಂದಕ್ಕೆ ಹರಿಯದೆ ಹರಡಿಕೊಂಡು ಸರೋವರದಂತೆ ತೋರುವುದು” ಎಂದು ತಿಳಿಸಿದನು.
14 ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ನಡೆದರು. ಜನರು ತಾವು ಪಾಳೆಯ ಮಾಡಿಕೊಂಡಿದ್ದ ಸ್ಥಳದಿಂದ ಹೊರಟು ಜೋರ್ಡನ್ ನದಿಯ ಕಡೆಗೆ ಹೋದರು.
15 (ಆಗ ಸುಗ್ಗಿಕಾಲವಾದ್ದರಿಂದ ಜೋರ್ಡನ್ ನದಿಯು ದಡಮೀರಿ ಹರಿಯುತ್ತಿತ್ತು.) ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ತೀರಕ್ಕೆ ಬಂದರು. ಅವರು ನೀರಿನಲ್ಲಿ ಹೆಜ್ಜೆ ಇಟ್ಟರು.
16 ಆಗ ನೀರು ಹರಿಯದೆ ನಿಂತುಬಿಟ್ಟಿತು. ಸ್ಥಳದ ಹಿಂಭಾಗದಲ್ಲಿ ಒಂದು ಸರೋವರದಂತೆ ನೀರು ತುಂಬಿಕೊಂಡಿತು. ನೀರು ಬಹುದೂರದಲ್ಲಿರುವ ಆದಾಮ್ ಊರು ಅಂದರೆ ಜಾರೆತಾನಿನ ಹತ್ತಿರ ಇರುವ ಒಂದು ಊರಿನವರೆಗೂ ರಾಶಿರಾಶಿಯಾಗಿ ನಿಂತುಕೊಂಡಿತು. ಜನರು ಜೆರಿಕೊವಿನ ಹತ್ತಿರ ನದಿಯನ್ನು ದಾಟಿದರು.
17 ಸ್ಥಳದಲ್ಲಿ ನೆಲವು ಒಣಗಿತ್ತು; ಯಾಜಕರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನದಿಯ ಮಧ್ಯದವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಿಂತುಕೊಂಡರು. ಯಾಜಕರು ಅಲ್ಲಿಯೇ ನಿಂತುಕೊಂಡಿರಲಾಗಿ ಎಲ್ಲಾ ಇಸ್ರೇಲರು ಒಣನೆಲದ ಮೇಲೆ ನಡೆದುಕೊಂಡು ಹೋಗಿ ಜೋರ್ಡನ್ ನದಿಯನ್ನು ದಾಟಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×