Bible Versions
Bible Books

Leviticus 9 (ERVKN) Easy to Read Version - Kannadam

1 ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಇಸ್ರೇಲರ ಹಿರಿಯರನ್ನೂ ಕರೆದನು.
2 ಮೋಶೆಯು ಆರೋನನಿಗೆ ಹೀಗೆಂದನು; “ಒಂದು ಎಳೆಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊ. ಪಶುಗಳಲ್ಲಿ ಏನೂ ದೋಷವಿರಬಾರದು. ಹೋರಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಟಗರನ್ನು ಸರ್ವಾಂಗಹೋಮವಾಗಿಯೂ ಯೆಹೋವನಿಗೆ ಸಮರ್ಪಿಸು.
3 ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಪ್ರಾಣಿಗಳಲ್ಲಿ ಯಾವ ದೋಷವಿರಬಾರದು.
4 ಸಮಾಧಾನ ಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.”
5 ಆದ್ದರಿಂದ ಜನರೆಲ್ಲರೂ ದೇವದರ್ಶನಗುಡಾರಕ್ಕೆ ಬಂದರು. ಮೋಶೆಯು ಆಜ್ಞಾಪಿಸಿದ ವಸ್ತುಗಳನ್ನು ಅವರು ತಂದರು. ಎಲ್ಲಾ ಜನರು ಯೆಹೋವನ ಸನ್ನಿಧಿಯಲ್ಲಿ ನಿಂತರು.
6 ಮೋಶೆಯು, “ಯೆಹೋವನು ಆಜ್ಞಾಪಿಸಿದವುಗಳನ್ನು ನೀವು ಮಾಡಿದರೆ ಯೆಹೋವನ ಮಹಿಮೆಯು ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.
7 ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.
8 ಆದ್ದರಿಂದ ಆರೋನನು ಯಜ್ಞವೇದಿಕೆಯ ಬಳಿಗೆ ಹೋದನು. ಅವನು ತನಗೋಸ್ಕರ ಪಾಪಪರಿಹಾರಕ ಯಜ್ಞವಾಗಿ ಎಳೆ ಹೋರಿಯನ್ನು ವಧಿಸಿದನು.
9 This verse may not be a part of this translation
10 ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು.
11 ಬಳಿಕ ಆರೋನನು ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟುಹಾಕಿದನು.
12 ನಂತರ ಆರೋನನು ಸರ್ವಾಂಗಹೋಮದ ಪಶುವನ್ನು ವಧಿಸಿದನು. ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು.
13 ಆರೋನನ ಪುತ್ರರು ಸರ್ವಾಂಗಹೋಮದ ಪಶುವಿನ ಮಾಂಸದ ತುಂಡುಗಳನ್ನು ಮತ್ತು ತಲೆಯನ್ನು ಆರೋನನಿಗೆ ಕೊಟ್ಟರು. ಬಳಿಕ ಆರೋನನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
14 ಆರೋನನು ಸರ್ವಾಂಗಹೋಮದ ಪಶುವಿನ ಒಳಗಿನ ಭಾಗಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.
15 ತರುವಾಯ ಆರೋನನು ಜನರು ಅರ್ಪಿಸುವ ಪಶುಗಳನ್ನು ತರಿಸಿದನು. ಅವನು ಜನರಿಗಾಗಿ ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ವಧಿಸಿದನು. ಅವನು ಮೊದಲಿನ ಪಶುವನ್ನು ಸಮರ್ಪಿಸಿದ ರೀತಿಯಲ್ಲಿ ಪಾಪಪರಿಹಾರಕ್ಕಾಗಿ ಹೋತವನ್ನು ಸಮರ್ಪಿಸಿದನು.
16 ಆರೋನನು ಸರ್ವಾಂಗಹೋಮಕ್ಕಾಗಿ ಪಶುವನ್ನು ತರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಅರ್ಪಿಸಿದನು.
17 ಆರೋನನು ಧಾನ್ಯನೈವೇದ್ಯವನ್ನು ಯಜ್ಞವೇದಿಕೆಯ ಬಳಿಗೆ ತಂದನು. ಅವನು ಒಂದು ಹಿಡಿ ಧಾನ್ಯವನ್ನು ತೆಗೆದುಕೊಂಡು ದಿನಂಪ್ರತಿ ಹೊತ್ತಾರೆಯ ವೇಳೆಯಲ್ಲಿ ಅರ್ಪಿಸುವ ಯಜ್ಞವಲ್ಲದೆ ಇದನ್ನೂ ಕೂಡ ಅರ್ಪಿಸಿದನು.
18 ಆರೋನನು ಜನರಿಗಾಗಿ ಸಮಾಧಾನ ಯಜ್ಞವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ರಕ್ತವನ್ನು ಯಜ್ಞವೇದಿಕೆಯ ಸುತ್ತಲೂ ಚಿಮಿಕಿಸಿದನು.
19 ಆರೋನನ ಪುತ್ರರು ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಆರೋನನ ಬಳಿಗೆ ತಂದರು. ಇವರು ಬಾಲದ ಕೊಬ್ಬನ್ನೂ ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತಂದರು.
20 ಅವರು ಕೊಬ್ಬಿನ ಭಾಗಗಳನ್ನು ಹೋರಿಯ ಮತ್ತು ಟಗರಿನ ಎದೆಯ ಭಾಗಗಳ ಮೇಲೆ ಇಟ್ಟರು. ಆರೋನನು ಅವೆಲ್ಲವನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು.
21 ಮೋಶೆಯು ಆಜ್ಞಾಪಿಸಿದಂತೆ ಎದೆಯ ಭಾಗಗಳನ್ನು ಮತ್ತು ಬಲತೊಡೆಯನ್ನು ಆರೋನನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.
22 ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಮತ್ತು ಸಮಾಧಾನ ಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
23 ಮೋಶೆಯು ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.
24 ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×