Bible Versions
Bible Books

Malachi 2 (ERVKN) Easy to Read Version - Kannadam

1 “ಯಾಜಕರೇ, ನನ್ನ ಮಾತನ್ನು ಕೇಳಿರಿ. ನಾನು ಹೇಳುವುದಕ್ಕೆ ಗಮನ ಕೊಡಿರಿ. ನಿಯಮಗಳನ್ನು ನಿಮಗಾಗಿ ಹೇಳುತ್ತಿದ್ದೇನೆ.
2 ನನ್ನ ನಾಮವನ್ನು ಘನಪಡಿಸದೆ ಹೋದರೆ ಕೆಟ್ಟ ವಿಷಯಗಳು ನಿಮಗೆ ಪ್ರಾಪ್ತಿಯಾಗುವವು. ನೀವು ಆಶೀರ್ವದಿಸುವಿರಿ. ಆದರೆ ಅದು ಶಾಪವಾಗುವದು. ಕೆಟ್ಟ ವಿಷಯಗಳು ನೆರವೇರುವಂತೆ ನಾನು ಮಾಡುವೆನು. ಯಾಕೆಂದರೆ ನೀವು ನನ್ನ ಹೆಸರನ್ನು ಘನಪಡಿಸುವದಿಲ್ಲ.” ಇದನ್ನು ಸರ್ವಶಕ್ತನಾದ ಯೆಹೋವನು ನುಡಿದಿದ್ದಾನೆ.
3 “ನಿಮ್ಮ ಸಂತತಿಯವರನ್ನು ನಾನು ಶಿಕ್ಷಿಸುವೆನು. ಹಬ್ಬದ ದಿವಸಗಳಲ್ಲಿ ಯಾಜಕರೇ, ನೀವು ನನಗೆ ಯಜ್ಞಗಳನ್ನರ್ಪಿಸುತ್ತೀರಿ. ಪಶುವನ್ನು ಕೊಯಿದ ಬಳಿಕ ಅದರ ಒಳಗಿನ ಭಾಗಗಳನ್ನೂ ಅದರ ಮಲವನ್ನು ನಿಮ್ಮ ಮುಖಗಳಿಗೆ ಹಚ್ಚುವೆನು ಮತ್ತು ನೀವು ಅದರೊಂದಿಗೆ ಹೊರಗೆ ಬಿಸಾಡಲ್ಪಡುವಿರಿ.
4 ಆಗ ನೀವು ನಾನು ಆಜ್ಞೆಯನ್ನು ಯಾಕೆ ಕೊಡುತ್ತಿದ್ದೇನೆಂದು ಅರಿಯುವಿರಿ. ಲೇವಿಯರೊಂದಿಗೆ ನಾನು ಮಾಡಿರುವ ಒಡಂಬಡಿಕೆಯು ಮುಂದುವರಿಯುವ ಹಾಗೆ ನಾನು ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇನೆ.” ಸೇನಾಧೀಶ್ವರನಾದ ಯೆಹೋವನು ಮಾತುಗಳನ್ನು ಅಂದಿದ್ದಾನೆ.
5 ಯೆಹೋವನು ಇಂತೆನ್ನುತ್ತಾನೆ, “ಆ ಒಡಂಬಡಿಕೆಯನ್ನು ನಾನು ಲೇವಿಯರೊಂದಿಗೆ ಮಾಡಿದೆನು. ನಾನು ಅವನಿಗೆ ಜೀವ ಮತ್ತು ಸಮಾಧಾನವನ್ನು ವಾಗ್ದಾನ ಮಾಡಿ ಅವನಿಗೆ ಅದನ್ನು ಕೊಟ್ಟೆನು. ಲೇವಿಯು ನನ್ನನ್ನು ಘನಪಡಿಸಿದನು. ನನ್ನ ಹೆಸರನ್ನು ಗೌರವಿಸಿದನು.
6 ಲೇವಿಯು ಸುಳ್ಳನ್ನು ಸಮರ್ಥಿಸದೆ ಸತ್ಯ ಬೋಧನೆಯನ್ನು ಬೋಧಿಸಿದನು. ಅವನು ಪ್ರಮಾಣಿಕನಾಗಿದ್ದು ಸಮಾಧಾನವನ್ನು ಪ್ರೀತಿಸುತ್ತಿದ್ದನು. ಲೇವಿಯು ನನಗೆ ವಿಧೇಯನಾಗಿದ್ದು ಎಷ್ಟೋ ಮಂದಿ ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ನನ್ನ ಶಿಕ್ಷೆಯಿಂದ ಪಾರುಮಾಡಿದನು.
7 ಒಬ್ಬ ಯಾಜಕನು ಯೆಹೋವನ ಬೋಧನೆಯನ್ನು ಚೆನ್ನಾಗಿ ಅರಿತಿರಬೇಕು. ಜನರು ಯಾಜಕನ ಬಳಿಗೆ ಹೋಗಿ ದೇವರ ಬೋಧನೆಯನ್ನು ಕೇಳಿ ತಿಳುಕೊಳ್ಳಬೇಕು. ಯಾಜಕನು ದೇವರ ಸಂದೇಶವನ್ನು ಜನರಿಗೆ ತಲುಪಿಸುವವನಾಗಿರಬೇಕು.
8 “ಆದರೆ ಯಾಜಕರೇ, ನೀವು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿ ಬಿಟ್ಟಿರಿ. ಅನೇಕ ಜನರು ತಪ್ಪು ದಾರಿಯಲ್ಲಿ ಹೋಗುವಂತೆ ಮಾಡಲು ನೀವು ಉಪದೇಶವನ್ನು ಬಳಸಿಕೊಂಡಿರಿ. ಲೇವಿಯೊಂದಿಗೆ ಮಾಡಿದ ಒಡಂಬಡಿಕೆಯನ್ನು ನೀವು ಹಾಳುಮಾಡಿ ಬಿಟ್ಟಿರಿ.” ಇದು ಸರ್ವಶಕ್ತನಾದ ಯೆಹೋವನ ನುಡಿ.
9 “ನಾನು ಹೇಳಿರುವ ಪ್ರಕಾರ ನೀವು ಜೀವಿಸುತ್ತಿಲ್ಲ. ನೀವು ನನ್ನ ಉಪದೇಶವನ್ನು ಜನರಿಗೆ ತಿಳಿಸುವಾಗ ಮುಖ ದಾಕ್ಷಿಣ್ಯ ಮಾಡುತ್ತೀರಿ. ಕಾರಣದಿಂದಾಗಿ ನಿಮ್ಮನ್ನು ಗಣನೆಗೆ ಬಾರದವರಂತೆಯೂ ಜನರು ನಿಮ್ಮನ್ನು ಸನ್ಮಾನಿಸದಂತೆಯೂ ಮಾಡುವೆನು.”
10 ನಮಗೆಲ್ಲರಿಗೂ ಒಬ್ಬನೇ ತಂದೆಯಾದ ದೇವರು. ದೇವರೇ ನಮ್ಮೆಲ್ಲರನ್ನು ಉಂಟುಮಾಡಿದನು. ಹೀಗಿರುವಾಗ ಜನರು ತಮ್ಮ ಸಹೋದರರನ್ನು ಯಾಕೆ ಮೋಸಪಡಿಸುತ್ತಾರೆ? ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡುವವರೆಂದು ಜನರಿಗೆ ತೋರಿಸುವದಿಲ್ಲ. ತಮ್ಮ ಪೂರ್ವಿಕರು ಯೆಹೋವನೊಂದಿಗೆ ಮಾಡಿದ್ದ ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡಲಿಲ್ಲ.
11 ಯೆಹೂದದ ಜನರು ಬೇರೆ ಜನರಿಗೆ ಮೋಸ ಮಾಡಿದರು. ಜೆರುಸಲೇಮಿನಲ್ಲಿಯೂ ಇಸ್ರೇಲಿನಲ್ಲಿಯೂ ಇರುವ ಜನರು ಭಯಂಕರ ಕಾರ್ಯಗಳನ್ನು ಮಾಡಿದರು. ದೇವರು ತನ್ನ ಆಲಯವನ್ನು ಪ್ರೀತಿಸುತ್ತಾನೆ. ಆದರೆ ಯೆಹೂದದ ಜನರು ಗೊತ್ತಿಲ್ಲದ ದೇವತೆಗಳನ್ನು ಪೂಜಿಸಲು ಪ್ರಾರಂಭಿಸುತ್ತಾರೆ.
12 ಅಂಥಾ ಜನರನ್ನು ಯೆಹೋವನು ಯೆಹೂದ ವಂಶದಿಂದಲೇ ತೆಗೆದುಹಾಕುವನು. ಅವರು ಯೆಹೋವನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದಾರು. ಆದರೆ ಅದು ಏನೂ ಪ್ರಯೋಜನವಿಲ್ಲ.
13 ನೀವು ಅತ್ತು ಗೋಳಾಡಿ ಯೆಹೋವನ ವೇದಿಕೆಯನ್ನು ಕಣ್ಣೀರಿನಿಂದ ತೋಯಿಸಿದರೂ ಪ್ರಯೋಜನವಿಲ್ಲ. ಯೆಹೋವನು ನಿಮ್ಮ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ. ನಿಮ್ಮ ಕಾಣಿಕೆಗಳನ್ನು ಆತನು ಮೆಚ್ಚುವವನಲ್ಲ.
14 “ನಮ್ಮ ಕಾಣಿಕೆಗಳನ್ನು ಯೆಹೋವನು ಏಕೆ ಸ್ವೀಕರಿಸುವುದಿಲ್ಲ?” ಎಂದು ನೀವು ಕೇಳಬಹುದು. ಯಾಕೆಂದರೆ ನಿಮ್ಮ ಪಾಪಕೃತ್ಯಗಳನ್ನು ಆತನು ನೋಡಿರುತ್ತಾನೆ. ಅವುಗಳಿಗೆ ವಿರೋಧವಾಗಿ ಆತನೇ ಸಾಕ್ಷಿಯಾಗಿರುತ್ತಾನೆ. ನಿಮ್ಮ ಹೆಂಡತಿಯರನ್ನು ನೀವು ಮೋಸಗೊಳಿಸಿದ್ದನ್ನು ಆತನು ನೋಡಿರುತ್ತಾನೆ. ನೀವು ಆಕೆಯನ್ನು ನಿಮ್ಮ ಯೌವನ ಕಾಲದಲ್ಲಿ ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತೀರಿ. ಆಕೆಯು ನಿಮ್ಮ ಆಪ್ತ ಸ್ನೇಹಿತೆಯಾಗಿದ್ದಳು. ನೀವಿಬ್ಬರೂ ಮಾತುಕೊಟ್ಟಿರಿ. ಆಕೆ ನಿಮ್ಮ ಹೆಂಡತಿಯಾದಳು. ಆದರೆ ನೀವು ಅವಳಿಗೆ ಅಪನಂಬಿಗಸ್ಥರಾದಿರಿ.
15 ದೇವರ ಇಚ್ಫೆಗನುಸಾರವಾಗಿ ಗಂಡಹೆಂಡತಿಯರು ದೇಹದಲ್ಲಿಯೂ ಆತ್ಮದಲ್ಲಿಯೂ ಒಂದಾಗಿರಬೇಕು. ಆಗ ಅವರ ಮಕ್ಕಳೂ ಪರಿಶುದ್ಧರಾಗಿರುವರು. ಆದ್ದರಿಂದ ಆತ್ಮಿಕ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಹೆಂಡತಿಯರಿಗೆ ಮೋಸಮಾಡಬೇಡಿ. ಯಾಕೆಂದರೆ ಯೌವನ ಪ್ರಾಯದಿಂದಲೂ ಆಕೆ ನಿಮ್ಮ ಹೆಂಡತಿಯಾಗಿದ್ದಾಳೆ.
16 ಇಸ್ರೇಲಿನ ದೇವರಾದ ಯೆಹೋವನು ಹೇಳುವದೇನೆಂದರೆ, “ವಿವಾಹ ವಿಚ್ಪೇದನೆಯನ್ನು ನಾನು ಹಗೆ ಮಾಡುತ್ತೇನೆ. ಮತ್ತು ಮನುಷ್ಯನು ಮಾಡುವ ದುಷ್ಟಕಾರ್ಯವನ್ನು ನಾನು ಹಗೆ ಮಾಡುತ್ತೇನೆ. ಆದುದರಿಂದ ನಿಮ್ಮ ಆತ್ಮೀಯ ಒಗ್ಗಟ್ಟನ್ನು ಕಾಪಾಡಿಕೊಳ್ಳಿರಿ. ನಿಮ್ಮ ಹೆಂಡತಿಯರಿಗೆ ಮೋಸ ಮಾಡಬೇಡಿರಿ.”
17 ನೀವು ಕೆಟ್ಟವಿಷಯಗಳನ್ನು ಬೋಧಿಸಿದ್ದೀರಿ. ಅಂಥಾ ದುರ್ಬೋಧನೆಯು ಆತನನ್ನು ದುಃಖಗೊಳಿಸಿಯದೆ. ಯೆಹೋವನು ದುಷ್ಟರನ್ನು ಪ್ರೀತಿಸುತ್ತಾನೆ ಎಂದು ಜನರಿಗೆ ಬೋಧಿಸಿದ್ದೀರಿ. ಅಂಥಾ ಜನರನ್ನು ಯೆಹೋವನು ಒಳ್ಳೆಯವರೆಂದು ಕರೆಯುತ್ತಾನೆ ಎಂದು ನೀವು ಜನರಿಗೆ ಕಲಿಸಿರುತ್ತೀರಿ. ಅಲ್ಲದೆ ಪಾಪ ಮಾಡುವ ಜನರನ್ನು ಯೆಹೋವನು ಶಿಕ್ಷಿಸುವದಿಲ್ಲವೆಂದೂ ನೀವು ಹೇಳಿರುತ್ತೀರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×