Bible Versions
Bible Books

Matthew 11 (ERVKN) Easy to Read Version - Kannadam

1 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು.
2 ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು.
3 ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರು ನೋಡಬೇಕೋ?” ಎಂದು ಕೇಳಿದರು.
4 ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ.
5 ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ. ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ.
6 ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ.” ಎಂದು ಉತ್ತರಕೊಟ್ಟನು.
7 ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ!
8 ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ.
9 ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
10 ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ: ‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ. ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’ ಮಲಾಕಿ 3:1
11 “ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
12 ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ.
13 ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕ ರಾಜ್ಯದ ಕುರಿತಾಗಿ ಮುಂತಿಳಿಸಿದವು.
14 ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ.
15 ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!
16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:
17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು. ನೀವು ಕುಣಿಯಲಿಲ್ಲ; ನಾವು ಶೋಕಗೀತೆ ಹಾಡಿದೆವು, ನೀವು ದುಃಖಿಸಲಿಲ್ಲ.’
18 ಇಂದಿನ ಜನರು ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.
19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”
20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೊ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ.
21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತ ಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು.
22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.
23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಜನರು ಪಾಪ ಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು.
24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”
25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಜನರಿಗೆ ನೀನು ಗೋಚರಪಡಿಸಿರುವೆ.
26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.
27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೊ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.
28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ.
29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×