Bible Versions
Bible Books

Nehemiah 1 (ERVKN) Easy to Read Version - Kannadam

1 ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್‌ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು.
2 ನಾನು ಶೂಷನ್‌ನಲ್ಲಿದ್ದಾಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀ ಮತ್ತು ಇನ್ನಿತರರು ಯೆಹೂದ ಪ್ರಾಂತ್ಯದಿಂದ ಬಂದಿದ್ದರು. ನಾನು ಅಲ್ಲಿರುವ ಯೆಹೂದ್ಯರ ಯೋಗಕ್ಷೇವುದ ಬಗ್ಗೆ ವಿಚಾರಿಸಿದೆನು. ಯೆಹೂದ್ಯರು ಸೆರೆವಾಸದಿಂದ ತಪ್ಪಿಸಿಕೊಂಡು ಇನ್ನೂ ಯೆಹೂದದಲ್ಲಿ ವಾಸವಾಗಿದ್ದರು. ಜೆರುಸಲೇಮ್ ನಗರದ ವಿಷಯವಾಗಿಯೂ ವಿಚಾರಿಸಿದೆನು.
3 ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.
4 ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು.
5 ನಂತರ ನಾನು ಪ್ರಾರ್ಥನೆ ಮಾಡಿದೆನು: ಪರಲೋಕದ ದೇವರಾದ ಯೆಹೋವನೇ, ನೀನು ಮಹಾ ದೇವರೂ ಪರಾಕ್ರಮವುಳ್ಳ ದೇವರೂ ಆಗಿರುವಿ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳಿಗೆ ವಿಧೇಯರಾಗುವವರಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸುವವನಾಗಿರುವಿ.
6 ಹಗಲಿರುಳು ನಿನ್ನಲ್ಲಿ ಪ್ರಾರ್ಥಿಸುವ ನಿನ್ನ ಸೇವಕನನ್ನು ಕಣ್ತೆರೆದು ನೋಡು: ಅವನ ಪ್ರಾರ್ಥನೆಗೆ ಕಿವಿಗೊಟ್ಟು ಆಲಿಸು. ನಿನ್ನ ಸೇವಕರಾದ ಇಸ್ರೇಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಇಸ್ರೇಲರಾದ ನಾವು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ನಾನು ನಿನಗೆ ಅರಿಕೆ ಮಾಡುತ್ತೇನೆ. ನಾನೂ ನನ್ನ ತಂದೆಯ ಮನೆಯವರೂ ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ನಿನಗೆ ಅರಿಕೆ ಮಾಡುತ್ತೇವೆ.
7 ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.
8 ನಿನ್ನ ಸೇವಕನಾದ ಮೋಶೆಗೆ ನೀನು ಹೇಳಿದ್ದನ್ನು ನೆನಪುಮಾಡಿಕೊ, ನೀನು ಅವನಿಗೆ, “ಇಸ್ರೇಲ್ ಜನರಾದ ನೀವು ನಂಬಿಗಸ್ತರಾಗದಿದ್ದಲ್ಲಿ ನಿಮ್ಮನ್ನು ಅನ್ಯದೇಶಗಳಲ್ಲಿ ಚದರಿಸಿಬಿಡುವೆನು.
9 ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.
10 ಇಸ್ರೇಲ್ ಜನರು ನಿನ್ನ ಜನಾಂಗ; ಅವರು ನಿನ್ನ ಸೇವಕರಾಗಿದ್ದಾರೆ. ನೀನು ನಿನ್ನ ಮಹಾಶಕ್ತಿಯನ್ನು ಉಪಯೋಗಿಸಿ ಅವರನ್ನು ರಕ್ಷಿಸಿರುವೆ.
11 ಆದುದರಿಂದ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲೈಸು. ನಾನು ನಿನ್ನ ಸೇವಕ. ನಿನ್ನ ಹೆಸರನ್ನು ಗೌರವಿಸುವ ನಿನ್ನ ಸೇವಕರ ಪ್ರಾರ್ಥನೆಗೆ ಕಿವಿಗೊಡು. ನಾನು ಅರಸನ ಪಾನದಾಯಕನಾಗಿದ್ದೇನೆಂದು ನೀನು ತಿಳಿದಿರುವೆ. ಆದುದರಿಂದ ಹೊತ್ತು ನನಗೆ ಸಹಾಯ ಮಾಡು. ಅರಸನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವಾಗ ನನಗೆ ನೆರವು ನೀಡು; ನನಗೆ ಯಶಸ್ಸನ್ನು ದಯಪಾಲಿಸು; ರಾಜನಿಗೆ ನಾನು ಮೆಚ್ಚಿಕೆಯುಳ್ಳವನಾಗಿ ಕಂಡುಬರುವಂತೆ ಸಹಾಯಮಾಡು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×