Bible Versions
Bible Books

Nehemiah 5 (ERVKN) Easy to Read Version - Kannadam

1 ಯೆಹೂದ್ಯರಲ್ಲಿ ಎಷ್ಟೋ ಬಡಜನರು ತಮ್ಮ ಬಂಧುಗಳ ವಿಷಯದಲ್ಲಿ ದೂರು ಹೇಳಲಾರಂಭಿಸಿದರು.
2 ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.”
3 ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.
4 ಇನ್ನೂ ಕೆಲವರು, “ನಮ್ಮ ಹೊಲಗದ್ದೆಗಳ ಮೇಲೆ ಅರಸನಿಗೆ ತೆರಿಗೆ ಕೊಡಬೇಕಾಗಿದೆ. ಆದರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಬೇರೆಯವರಿಂದ ಎರವಲು ಪಡೆದುಕೊಂಡು ಕೊಡಬೇಕಾಗಿದೆ” ಅಂದರು.
5 “ಆ ಧನಿಕರನ್ನು ನೋಡಿರಿ. ನಾವೂ ಅವರಂತೆಯೇ ಇದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಂತೆಯೇ ಇದ್ದಾರೆ. ಆದರೆ ನಾವು ಮಾತ್ರ ನಮ್ಮ ಗಂಡುಹೆಣ್ಣು ಮಕ್ಕಳನ್ನು ಗುಲಾಮರಾಗಿ ಮಾರುವ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಕೆಲವರು ಆಗಲೇ ತಮ್ಮ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾರಿದ್ದಾರೆ. ನಮಗೆ ಬೇರೆ ಮಾರ್ಗವೇ ಇಲ್ಲ. ನಮ್ಮ ಹೊಲಗದ್ದೆಗಳನ್ನು ಯಾವಾಗಲೋ ಕಳೆದುಕೊಂಡಿದ್ದೇವೆ.”
6 ನಾನು ಅವರ ದೂರುಗಳನ್ನು ಕೇಳಿಸಿಕೊಂಡಾಗ ಬಹಳವಾಗಿ ಸಿಟ್ಟುಗೊಂಡೆನು.
7 ನನ್ನ ಕೋಪವು ಶಾಂತವಾದ ಬಳಿಕ ಧನಿಕರ ಮತ್ತು ಅಧಿಕಾರಿಗಳ ಬಳಿಗೆ ಹೋಗಿ, “ನೀವು ನಿಮ್ಮ ಸ್ವಂತ ಜನರಿಗೆ ಕೊಟ್ಟಿರುವ ಸಾಲಕ್ಕೆ ಬಡ್ಡಿಯನ್ನು ಕೊಡಲು ಬಲವಂತ ಮಾಡುತ್ತಿದ್ದೀರಿ. ನೀವು ಕೂಡಲೇ ಅದನ್ನು ನಿಲ್ಲಿಸಬೇಕು” ಎಂದೆನು. ಅನಂತರ ನಾನು ಎಲ್ಲಾ ಜನರನ್ನು ಒಟ್ಟುಗೂಡಿಸಿ,
8 “ನಮ್ಮ ಯೆಹೂದಿ ಜನರನ್ನು ಪರದೇಶಗಳಲ್ಲಿ ಗುಲಾಮರನ್ನಾಗಿ ಮಾರಿದ್ದರು. ಅಂಥವರನ್ನು ನಾವು ಕ್ರಯಕೊಟ್ಟುಕೊಂಡುಕೊಂಡು ಅವರನ್ನು ಗುಲಾಮತನದಿಂದ ಬಿಡುಗಡೆ ಮಾಡಿಸಿದೆವು. ಆದರೆ ನೀವು ಈಗ ಮತ್ತೆ ಗುಲಾಮರನ್ನಾಗಿ ಮಾಡುತ್ತಿದ್ದೀರಿ” ಎಂದೆನು. ಸೇರಿಬಂದಿದ್ದ ಶ್ರೀಮಂತರೂ ಅಧಿಕಾರಿಗಳೂ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಅವರಿಗೆ ಏನೂ ಹೇಳಲಿಕ್ಕೂ ಆಗಲಿಲ್ಲ.
9 ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು.
10 ನನ್ನ ಜನರು, ನನ್ನ ಬಂಧುಗಳು ಮತ್ತು ನಾನು ಹಣವನ್ನು ದವಸಧಾನ್ಯಗಳನ್ನು ಎರವಲಾಗಿ ಕೊಡುತ್ತೇವೆ. ಆದರೆ ಅವರಿಂದ ಬಡ್ಡಿಯನ್ನು ವಸೂಲು ಮಾಡುವುದಿಲ್ಲ. ಸಾಲ ಪಡೆದುಕೊಂಡವರಿಂದ ಬಡ್ಡಿಯನ್ನು ಬಲವಂತದಿಂದ ವಸೂಲು ಮಾಡುವುದನ್ನು ನಾವು ನಿಲ್ಲಿಸಬೇಕು.
11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.
12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು. ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು.
13 ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ ‘ಆಮೆನ್’ ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.
14 ಯೆಹೂದ ಪ್ರಾಂತ್ಯಕ್ಕೆ ನನ್ನನ್ನು ರಾಜ್ಯಪಾಲನಾಗಿ ನೇಮಿಸಿದಂದಿನಿಂದ, ನಾನಾಗಲಿ ನನ್ನ ಸಹೋದರರಾಗಲಿ ರಾಜ್ಯಪಾಲರಿಗಾಗಿ ಪ್ರತ್ಯೇಕಿಸಿದ ಆಹಾರವನ್ನು ತಿನ್ನಲಿಲ್ಲ; ನನಗಾಗಿ ಆಹಾರವನ್ನು ಕೊಂಡುಕೊಳ್ಳಲು ಜನರಿಂದ ತೆರಿಗೆ ವಸೂಲಿ ಮಾಡಲಿಲ್ಲ. ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆ ವರ್ಷದ ತನಕ ನಾನು ರಾಜ್ಯಪಾಲನಾಗಿದ್ದೆನು. ಹೀಗೆ ಹನ್ನೆರಡು ವರ್ಷ ಯೆಹೂದದ ರಾಜ್ಯಪಾಲನಾಗಿದ್ದೆನು.
15 ನನಗಿಂತ ಮೊದಲು ರಾಜ್ಯಪಾಲರಾಗಿದ್ದವರು ಜನರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದರು. ಪ್ರತಿಯೊಬ್ಬರು ಒಂದು ಪೌಂಡ್ ಬೆಳ್ಳಿಯನ್ನೂ ಆಹಾರವನ್ನೂ ದ್ರಾಕ್ಷಾರಸವನ್ನೂ ಕೊಡಬೇಕಿತ್ತು. ರಾಜ್ಯಪಾಲರ ಅಧಿಕಾರಿಗಳು ಸಹ ಜನರ ಮೇಲೆ ದೊರೆತನ ನಡೆಸಿ ಅವರ ಜೀವನವನ್ನು ಮತ್ತಷ್ಟು ಕಠಿಣಗೊಳಿಸಿದರು. ಆದರೆ ದೇವರಲ್ಲಿ ಭಯಭಕ್ತಿ ಇದ್ದುದರಿಂದ ನಾನು ರೀತಿ ಮಾಡಲಿಲ್ಲ.
16 ಜೆರುಸಲೇಮಿನ ಗೋಡೆ ಕಟ್ಟುವ ಕೆಲಸದಲ್ಲಿ ನಾನು ತುಂಬಾ ಪ್ರಯಾಸಪಟ್ಟೆನು. ಗೋಡೆಯ ನಿರ್ಮಾಣ ಕೆಲಸಕ್ಕಾಗಿ ನನ್ನ ಜನರೆಲ್ಲರೂ ಒಟ್ಟಾಗಿ ಸೇರಿದರು. ನಾವು ಯಾರಿಂದಲೂ ಭೂಮಿಯನ್ನು ಕಿತ್ತುಕೊಳ್ಳಲಿಲ್ಲ.
17 ಇಷ್ಚೇ ಅಲ್ಲದೆ ಯಾವಾಗಲೂ ನೂರೈವತ್ತು ಮಂದಿ ಯೆಹೂದ್ಯರಿಗೆ ನನ್ನ ಮೇಜಿನ ಮೇಲೆ ಊಟಕ್ಕೆ ಬಡಿಸುತ್ತಿದ್ದೆನು. ನಮ್ಮ ಸುತ್ತಲಿನ ಪ್ರಾಂತ್ಯಗಳಿಂದ ಬಂದ ಜನರೂ ನಮ್ಮೊಂದಿಗೆ ಊಟ ಮಾಡುತ್ತಿದ್ದರು.
18 ಪ್ರತಿದಿನ ನಮ್ಮ ಊಟಕ್ಕಾಗಿ ಒಂದು ಹೋರಿಯನ್ನು, ಆರು ಕೊಬ್ಬಿದ ಕುರಿಗಳನ್ನು, ಮತ್ತು ಅನೇಕ ಕೋಳಿಗಳನ್ನು ಕೊಯ್ಯಲಾಗುತ್ತಿತ್ತು; ಹತ್ತುದಿನಕ್ಕೊಮ್ಮೆ ವಿವಿಧ ರೀತಿಯ ದ್ರಾಕ್ಷಾರಸವನ್ನು ಒದಗಿಸಿಕೊಡುತ್ತಿದ್ದೆನು. ಆದರೂ ರಾಜ್ಯಪಾಲನಿಗೆ ಸಲ್ಲಬೇಕಾಗಿದ್ದ ಆಹಾರ ಪದಾರ್ಥಗಳನ್ನು ನಾನೆಂದೂ ಕೇಳಲಿಲ್ಲ; ಅದಕ್ಕಾಗಿ ಜನರಿಂದ ತೆರಿಗೆ ತೆಗೆದುಕೊಳ್ಳಲಿಲ್ಲ. ಯಾಕಂದರೆ ನನ್ನ ಜನರು ಮಾಡುವ ಕೆಲಸವು ತುಂಬಾ ಪ್ರಯಾಸಕರವಾದದ್ದೆಂದು ನನಗೆ ಗೊತ್ತಿತ್ತು.
19 ದೇವರೇ, ನಾನು ಜನರಿಗಾಗಿ ಮಾಡಿರುವ ಒಳ್ಳೆಯದನ್ನೆಲ್ಲಾ ಜ್ಞಾಪಿಸಿಕೊ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×