Bible Versions
Bible Books

Psalms 147 (ERVKN) Easy to Read Version - Kannadam

1 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು. ನಮ್ಮ ದೇವರನ್ನು ಸಂಕೀರ್ತಿಸಿರಿ. ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
2 ಯೆಹೋವನು ಜೆರುಸಲೇಮನ್ನು ಕಟ್ಟಿದನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
3 ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು; ಅವರ ಗಾಯಗಳನ್ನು ಕಟ್ಟುವನು.
4 ಆತನು ನಕ್ಷತ್ರಗಳನ್ನು ಎಣಿಸುವನು. ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
5 ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ. ಆತನ ಜ್ಞಾನವು ಅಪರಿಮಿತವಾಗಿದೆ.
6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ. ದುಷ್ಟರನ್ನಾದರೊ ನಾಚಿಕೆಗೆ ಗುರಿಪಡಿಸುವನು.
7 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
8 ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು; ಭೂಮಿಗಾಗಿ ಮಳೆಯನ್ನು ಸುರಿಸುವನು; ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
9 ದೇವರು ಪ್ರಾಣಿಗಳಿಗೂ ಪಕ್ಷಿಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು. ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು! ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು; ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು. ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿ ಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು; ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು; ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು; ಮಂಜು ಕರಗಿ ಹೋಗುವುದು. ನೀರು ಹರಿಯ ತೊಡಗುವುದು.
19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು. ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ. ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ. ಯೆಹೋವನಿಗೆ ಸ್ತೋತ್ರವಾಗಲಿ!
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×