Bible Versions
Bible Books

Revelation 6 (ERVKN) Easy to Read Version - Kannadam

1 ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು.
2 ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.
3 ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು.
4 ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.
5 ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು.
6 ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ನಾಲ್ಕು ಜೀವಿಗಳಿದ್ದ ಸ್ಥಳದಿಂದ ಧ್ವನಿಯು ಹೊರ ಹೊಮ್ಮಿತು. ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.
7 ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು.
8 ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು. ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.
9 ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು.
10 ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು.
11 ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆತ್ಮಗಳಿಗೆ ಹೇಳಲಾಯಿತು.
12 ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು.
13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು.
14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.
15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು.
16 ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ;
17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×