Bible Versions
Bible Books

Romans 13 (ERVKN) Easy to Read Version - Kannadam

1 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ.
2 ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ.
3 ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.
4 ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ.
5 ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.
6 ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ.
7 ನೀವು ಯಾರ್ಯಾರಿಗೆ ಏನೇನು ಕೊಡಬೇಕೊ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೊ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.
8 ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ.
9 ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು; ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು” ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ.
10 ಪ್ರೀತಿಯು ಬೇರೆಯವರಿಗೆ ಕೇಡು ಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.
11 ನಾವು ಕ್ಲಿಷ್ಟಕರವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ.
12 ”ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು.
13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚು ಪಡಬಾರದು.
14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×