Bible Versions
Bible Books

Zechariah 7 (ERVKN) Easy to Read Version - Kannadam

1 ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರುಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು.
2 ಬೇತೇಲಿನ ಜನರು ಸರೆಚರ್, ರೆಗೆಮ್-ಮೆಲೆಕ್ ಮತ್ತು ಅವರ ಜನರನ್ನು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಲು ಕಳುಹಿಸಿದರು.
3 ಅವರು ಸರ್ವಶಕ್ತನಾದ ಯೆಹೋವನ ಆಲಯದಲ್ಲಿದ್ದ ಯಾಜಕರ ಬಳಿಗೂ ಪ್ರವಾದಿಗಳ ಬಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರುಷಗಳಿಂದ ಆಲಯವು ಕೆಡವಲ್ಪಟ್ಟದ್ದಕ್ಕಾಗಿ ನಮ್ಮ ದುಃಖವನ್ನು ತೋರಿಸಿದೆವು. ಪ್ರತೀ ವರುಷದ ಐದನೇ ತಿಂಗಳಿನಲ್ಲಿ ಉಪವಾಸಕ್ಕಾಗಿ ಮತ್ತು ರೋದಿಸುವುದಕ್ಕಾಗಿ ನಾವು ಪ್ರತ್ಯೇಕ ಸಮಯವನ್ನು ನೇಮಿಸುತ್ತಿದ್ದೆವು. ನಾವು ಇದನ್ನು ಹೀಗೆಯೇ ಮುಂದುವರಿಸಬೇಕೋ?”
4 ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಸಂದೇಶವು ದೊರಕಿತು:
5 “ಯಾಜಕರಿಗೂ, ದೇಶದ ಇತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರುಷಗಳ ತನಕ ನೀವು ಐದನೇ ಮತ್ತು ಏಳನೇ ತಿಂಗಳಿನಲ್ಲಿ ನಿಮ್ಮ ದುಃಖವನ್ನು ಉಪವಾಸ ಮಾಡವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಉಪವಾಸವು ನಿಜವಾಗಿಯೂ ನನಗಾಗಿಯೋ? ಇಲ್ಲ!
6 ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೋ? ಇಲ್ಲ. ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಇತ್ತು.
7 ಇದನ್ನು ತಿಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪಯೋಗಿಸಿದ್ದನು. ಜೆರುಸಲೇಮ್ ಜನಭರಿತವಾದ ಪಟ್ಟಣವಾಗಿದ್ದಾಗ ದೇವರು ಇದನ್ನು ಜನರಿಗೆ ತಿಳಿಸಿದ್ದನು. ಜೆರುಸಲೇಮಿನ ಸುತ್ತಮುತ್ತ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತಿಳಿಸಿದ್ದನು. ನೆಗೆವ್‌ನಲ್ಲಿಯೂ ಪಶ್ಚಿಮದ ಪರ್ವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತಿಳಿಸಿದ್ದನು.”
8 ಇದು ಜೆಕರ್ಯನಿಗೆ ಯೆಹೋವನ ಸಂದೇಶ:
9 ಸರ್ವಶಕ್ತನಾದ ಯೆಹೋವನು ಇಂತೆನ್ನುತ್ತಾನೆ: “ನೀವು ಯಾವದು ನ್ಯಾಯವೊ, ಯಾವುದು ಯೋಗ್ಯವೊ, ಅದನ್ನು ಮಾಡಬೇಕು. ನೀವು ಒಬ್ಬರಿಗೊಬ್ಬರು ದಯೆಕರುಣೆಗಳನ್ನು ತೋರಿಸಬೇಕು.
10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ. ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ. ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!”
11 ಆದರೆ ಜನರು ಮಾತುಗಳನ್ನು ಕೇಳಲಿಲ್ಲ. ಆತನು ಹೇಳಿದ ಹಾಗೆ ನಡೆಯಲಿಲ್ಲ. ದೇವರು ಹೇಳುವುದು ತಮಗೆ ಕೇಳದಂತೆ ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
12 ಅವರು ಹಠಮಾರಿಗಳಾಗಿದ್ದರು. ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ. ಸರ್ವಶಕ್ತನಾದ ಯೆಹೋವನು ತನ್ನ ಆತ್ಮನಿಂದ ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು. ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ. ಆದುದರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋಪಗೊಂಡನು.
13 ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ ಅವರು ನನಗೆ ಕಿವಿಗೊಡಲಿಲ್ಲ. ಆದ್ದರಿಂದ ಈಗ ಅವರು ನನ್ನನ್ನು ಕರೆದರೂ ನಾನು ಅವರಿಗೆ ಉತ್ತರ ಕೊಡೆನು.
14 ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು. ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ. ಆದರೆ ದೇಶಗಳವರು ಇವರ ದೇಶವನ್ನು ದಾಟಿ ಹೋಗುವಾಗ ಸುಂದರವಾದ ದೇಶವು ನಾಶವಾಗುವದು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×