Bible Versions
Bible Books

1 Chronicles 26 (ERVKN) Easy to Read Version - Kannadam

1 ಕೋರಹಿಯ ವಂಶದವರಲ್ಲಿ ದ್ವಾರಪಾಲಕರು ಯಾರೆಂದರೆ: ಮೆಷೆಲೆಮ್ಯ ಮತ್ತು ಅವನ ಗಂಡುಮಕ್ಕಳು. (ಮೆಷೆಲೆಮ್ಯನು ಕೋರಹಿಯನ ಮಗ. ಕೋರಹಿಯನು ಆಸಾಫನ ಕುಲದವನಾಗಿದ್ದನು.)
2 ಜೆಕರ್ಯನು ಮೆಷೆಲೆಮ್ಯನ ಮೊದಲನೆಯ ಮಗ; ಎದೀಯಯೇಲನು ಎರಡನೆಯ ಮಗ; ಜೆಬದ್ಯನು ಮೂರನೆಯ ಮಗ; ಯತ್ನಿಯೇಲನು ನಾಲ್ಕನೆಯ ಮಗ;
3 ಏಲಾಮನು ಐದನೆಯ ಮಗ; ಯೆಹೋಹಾನನು ಆರನೆಯ ಮಗ; ಮತ್ತು ಎಲೈಹೋಯೇನೈ ಏಳನೆಯ ಮಗ.
4 ಓಬೇದೆದೋಮ್ ಮತ್ತು ಅವನ ಮಕ್ಕಳು: ಶೆಮಾಯನು ಚೊಚ್ಚಲಮಗ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ, ನಾಲ್ಕನೆಯವನು ಸಾಕಾರ್, ಐದನೆಯವನು ನೆತನೇಲ್;
5 ಆರನೆಯವನು ಅಮ್ಮೀಯೇಲ; ಏಳನೆಯವನು ಇಸ್ಸಾಕಾರ್; ಎಂಟನೆಯವನು ಪೆಯುಲ್ಲೆತೈ. ದೇವರು ಓಬೇದೆದೋಮನನ್ನು ಅತಿಯಾಗಿ ಆಶೀರ್ವದಿಸಿದನು.
6 ಶೆಮಾಯನಿಗೂ ಗಂಡುಮಕ್ಕಳಿದ್ದರು. ಅವರು ಧೈರ್ಯಶಾಲಿಗಳೂ ಬಲಶಾಲಿಗಳೂ ಆಗಿದ್ದದರಿಂದ ತಂದೆಯ ಕುಲದಲ್ಲಿ ನಾಯಕರಾಗಿದ್ದರು.
7 ಶೆಮಾಯನ ಮಕ್ಕಳು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್, ಎಲೀಹು, ಮತ್ತು ಸಮಕ್ಯ. ಎಲ್ಜಾಬಾದನ ಸಂಬಂಧಿಕರು ಕುಶಲ ಕರ್ಮಿಗಳು.
8 ಎಲ್ಲಾಜನರೂ, ಓಬೇದೆದೋಮನ ಸಂತತಿಯವರು. ಇವರೆಲ್ಲಾ ಬಲಶಾಲಿಗಳಾಗಿದ್ದರು. ಒಳ್ಳೆಯ ಅನುಭವಸ್ತ ದ್ವಾರಪಾಲಕರಾಗಿದ್ದರು. ಓಬೇದೆದೋಮನ ಸಂತತಿಯವರ ಒಟ್ಟು ಸಂಖ್ಯೆ ಅರವತ್ತೆರಡು ಮಂದಿ.
9 ಮೆಷೆಲೆಮ್ಯನ ಗಂಡುಮಕ್ಕಳು ಮತ್ತು ಸಂಬಂಧಿಕರು ಬಲಾಢ್ಯರಾಗಿದ್ದರು. ಅವನಿಗೆ ಒಟ್ಟು ಹದಿನೆಂಟು ಗಂಡುಮಕ್ಕಳು ಮತ್ತು ಸಂಬಂಧಿಕರು ಇದ್ದರು.
10 ಮೆರಾರೀ ಕುಲದವರ ದ್ವಾರಪಾಲಕರು ಯಾರೆಂದರೆ: ಹೋಸ ಮತ್ತು ಅವನ ಗಂಡುಮಕ್ಕಳಲ್ಲಿ ಆರಿಸಲ್ಪಟ್ಟ ಶಿಮ್ರಿ. (ಇವನು ಚೊಚ್ಚಲ ಮಗನಲ್ಲದಿದ್ದರೂ ತಂದೆಯು ಅವನನ್ನು ಪ್ರಧಾನನ್ನಾಗಿ ಆರಿಸಿದನು.)
11 ಅವನ ಎರಡನೆಯ ಮಗನು ಹಿಲ್ಕೀಯ; ಮೂರನೆಯವನು ಟೆಬಲ್ಯ. ನಾಲ್ಕನೆಯ ಮಗನು ಜೆಕರ್ಯ. ಹೀಗೆ ಒಟ್ಟು ಅವನಿಗೆ ಹದಿಮೂರು ಗಂಡುಮಕ್ಕಳೂ ಸಂಬಂಧಿಕರೂ ಇದ್ದರು.
12 ಇವರೆಲ್ಲಾ ದೇವಾಲಯದ ದ್ವಾರಪಾಲಕರಾಗಿದ್ದರು. ಅದರಲ್ಲಿ ಸೇವೆಮಾಡುತ್ತಿರುವ ಇತರರಂತೆಯೇ ಇವರೂ ದೇವಾಲಯದ ದ್ವಾರಗಳನ್ನು ಕಾಯುತ್ತಿದ್ದರು.
13 ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾಬ್ದಾರಿಕೆಯನ್ನು ಚೀಟುಹಾಕಿ ಕೊಡಲಾಯಿತು.
14 ಶೆಲೆಮ್ಯನಿಗೆ ಪೂರ್ವದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು; ಅವನ ಮಗನಾದ ಜೆಕರ್ಯನಿಗೆ ಉತ್ತರ ದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನು ಒಳ್ಳೆಯ ಸಲಹೆಗಾರನಾಗಿದ್ದನು.
15 ಓಬೇದೆದೋಮನಿಗೆ ದಕ್ಷಿಣದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನ ಮಕ್ಕಳಿಗೆ ಬೆಲೆಬಾಳುವ ಸಾಮಾಗ್ರಿಗಳ ಉಗ್ರಾಣದ ಕೋಣೆಯನ್ನು ಕಾಯುವ ಕೆಲಸ ದೊರೆಯಿತು.
16 ಶುಪ್ಪೀಮ್ ಮತ್ತು ಹೋಸ ಎಂಬವರಿಗೆ ಪಶ್ಚಿಮದ ಬಾಗಿಲನ್ನು ಮತ್ತು ಮೇಲ್ದಾರಿಯಲ್ಲಿದ್ದ ಶೆಲ್ಲೆಕೆತ್ ಬಾಗಿಲನ್ನು ಕಾಯುವ ಕೆಲಸ ದೊರೆಯಿತು. ಕಾವಲುಗಾರರು ಪಕ್ಕಪಕ್ಕದಲ್ಲಿಯೇ ನಿಂತುಕೊಳ್ಳುತ್ತಿದ್ದರು.
17 ಪ್ರತಿದಿನ ಪೂರ್ವದಿಕ್ಕಿನ ಬಾಗಿಲಿನಲ್ಲಿ ಆರು ಮಂದಿ ಲೇವಿಯರು ಕಾವಲಿಗಿದ್ದರು; ಉತ್ತರದಿಕ್ಕಿನ ಬಾಗಿಲಿನಲ್ಲಿ ಪ್ರತಿದಿನ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ದಕ್ಷಿಣದ ಬಾಗಿಲಿನಲ್ಲಿ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ಇಬ್ಬರು ಲೇವಿಯರು ಬೆಲೆಬಾಳುವ ವಸ್ತುಗಳ ಕೋಣೆಗೆ ಕಾವಲಾಗಿದ್ದರು.
18 ಪಶ್ಚಿಮದ ಅಂಗಳದಲ್ಲಿ ನಾಲ್ಕು ಮಂದಿ ಕಾವಲುಗಾರರಿದ್ದರು.
19 ಅಂಗಳಕ್ಕೆ ಹೋಗುವ ದಾರಿಯನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು. ಹೀಗೆ ಇವರೆಲ್ಲಾ ದ್ವಾರಪಾಲಕರ ತಂಡಗಳು. ಇವರು ಕೋರಹ ಮತ್ತು ಮೆರಾರೀಯ ವಂಶದವರು.
20 ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು.
21 ಲದ್ದಾನ್ಯನು ಗೇರ್ಷೋಮ್ ಕುಲದವನಾಗಿದ್ದನು. ಯೆಹೀಯೇಲೀಯು ಲದ್ದಾನ್ ಕುಲದ ನಾಯಕರಲ್ಲೊಬ್ಬನು.
22 ಯೆಹೀಯೇಲೀಯ ಗಂಡುಮಕ್ಕಳು: ಜೀತಾಮ್ ಮತ್ತು ಅವನ ತಮ್ಮನಾದ ಯೋವೇಲ. ಇವರು ಸಹ ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಗಳಾಗಿದ್ದರು.
23 ಇವರಲ್ಲದೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಮತ್ತು ಉಜ್ಜೀಯೇಲ್ ಇವರ ಕುಲಗಳಿಂದ ಬೇರೆ ನಾಯಕರನ್ನು ಆರಿಸಿಕೊಂಡರು.
24 ಶೆಬೂವೇಲನು ದೇವಾಲಯದ ಅಮೂಲ್ಯ ವಸ್ತುಗಳಿಗೆ ಅಧಿಕಾರಿಯಾಗಿದ್ದನು. ಇವನು ಗೇರ್ಷೋಮನ ಮಗ. ಗೇರ್ಷೋಮನು ಮೋಶೆಯ ಮಗ.
25 ಶೆಬೂವೇಲನ ಸಂಬಂಧಿಕರು ಯಾರೆಂದರೆ: ಎಲೀಯೆಜೆರನ ಮಗನಾದ ರೆಹಬ್ಯ; ರೆಹಬ್ಯನ ಮಗನಾದ ಯೆತಾಯ; ಯೆತಾಯನ ಮಗನಾದ ಯೋರಾವ್; ಯೋರಾವುನ ಮಗನಾದ ಜಿಕ್ರೀ; ಮತ್ತು ಜಿಕ್ರೀಯ ಮಗನಾದ ಶೆಲೋಮೋತ್.
26 ದಾವೀದನು ದೇವಾಲಯಕ್ಕೋಸ್ಕರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೆಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು. ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾಗ್ರಿಗಳನ್ನು ಒದಗಿಸಿದರು.
27 ಯುದ್ಧದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀರ್ಮಾನಿಸಿದರು.
28 ಶೆಲೋಮೋತ್ ಮತ್ತು ಅವನ ಸಂಬಂಧಿಕರೂ ಪ್ರವಾದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂಯಳ ಮಗನಾದ ಯೋವಾಬನೂ ದೇವರಿಗೆಂದು ಕೊಟ್ಟಿದ್ದ ಪವಿತ್ರವಸ್ತುಗಳ ಮೇಲ್ವಿಚಾರಕರಾಗಿದ್ದರು.
29 ಕೆನನ್ಯನು ಇಚ್ಹಾರ್ಯ ವಂಶದವನಾಗಿದ್ದನು. ಕೆನನ್ಯನೂ ಅವನ ಮಕ್ಕಳೂ ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ ಇಸ್ರೇಲಿನ ಅನೇಕ ಕಡೆಗಳಲ್ಲಿ ಕೆಲಸ ಮಾಡಿದರು.
30 ಹಷಬ್ಯನು ಹೆಬ್ರೋನ್ ಸಂತಾನದವನಾಗಿದ್ದನು. ಇವನೂ ಇವನ ಸಂಬಂಧಿಕರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ಯೆಹೋವನ ಸೇವೆಗೂ ಅರಸನ ಕಾರ್ಯಕ್ಕೂ ಅಧಿಕಾರಿಗಳಾಗಿದ್ದರು. ಹಷಬ್ಯನ ವರ್ಗದಲ್ಲಿ ಒಟ್ಟು ಒಂದು ಸಾವಿರದ ಏಳುನೂರು ಮಂದಿ ಸಾಮರ್ಥ್ಯಶಾಲಿಗಳಿದ್ದರು.
31 ಹೆಬ್ರೋನ್ ಸಂತಾನದ ಚರಿತ್ರೆಗನುಸಾರವಾಗಿ ಯೆರೀಯನು ಅವರ ಅಧಿಪತಿಯಾಗಿದ್ದನು. ದಾವೀದನು ನಲವತ್ತು ವರುಷ ಇಸ್ರೇಲಿನ ಅರಸನಾಗಿದ್ದ ಕಾಲದಲ್ಲಿ ತನ್ನ ಜನರ ಚರಿತ್ರೆಯನ್ನು ಕಂಡುಹಿಡಿದು ದಾಖಲೆ ಮಾಡಲು ಆಜ್ಞೆಯಿತ್ತಿದ್ದನು. ಗಿಲ್ಯಾದಿನ ಯಾಜೇರ್ ಎಂಬಲ್ಲಿ ಹೆಬ್ರೋನ್ ಸಂತಾನಕ್ಕೆ ಸೇರಿದವರಲ್ಲಿ ಬಹಳ ಮಂದಿ ಅನುಭವಶಾಲಿಗಳಾದ ಕಾರ್ಮಿಕರು ದೊರಕಿದರು.
32 ಯೆರೀಯನಿಗೆ ಎರಡು ಸಾವಿರದ ಏಳುನೂರು ಮಂದಿ ಸಂಬಂಧಿಕರಿದ್ದರು. ಇವರೆಲ್ಲಾ ಬಲಾಢ್ಯರೂ ಕುಟುಂಬಕ್ಕೆ ನಾಯಕರುಗಳೂ ಆಗಿದ್ದರು. ದಾವೀದನು ಇವರೆಲ್ಲರಿಗೂ ರೂಬೇನ್, ಗಾದ್, ಅರ್ಧಮನಸ್ಸೆಯವರ ಪ್ರಾಂತ್ಯಗಳಲ್ಲಿ ಯೆಹೋವನಿಗೆ ಸಂಬಂಧಿಸಿದ ಕಾರ್ಯಗಳನ್ನು, ರಾಜನಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ನೇಮಕ ಮಾಡಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×