Bible Versions
Bible Books

1 Samuel 12 (ERVKN) Easy to Read Version - Kannadam

1 ಸಮುವೇಲನು ಇಸ್ರೇಲರೆಲ್ಲರಿಗೆ, “ನೀವು ನನ್ನಿಂದ ಅಪೇಕ್ಷಿಸಿದ ಎಲ್ಲವನ್ನೂ ನಾನು ಮಾಡಿರುತ್ತೇನೆ. ನಾನು ನಿಮಗಾಗಿ ಒಬ್ಬ ರಾಜನನ್ನು ನೇಮಿಸಿದ್ದೇನೆ.
2 ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ.
3 ನಾನು ಇಲ್ಲಿದ್ದೇನೆ. ನಾನು ಯಾವ ತಪ್ಪುಗಳನ್ನಾದರೂ ಮಾಡಿದ್ದರೆ, ನೀವು ಯೆಹೋವನಿಗೆ ಮತ್ತು ಆತನು ಆರಿಸಿರುವ ರಾಜನಿಗೆ ಅವುಗಳನ್ನು ಹೇಳಲೇಬೇಕು. ನಾನು ಬೇರೊಬ್ಬರ ಹಸುವನ್ನಾಗಲೀ ಕತ್ತೆಯನ್ನಾಗಲೀ ಕದ್ದಿರುವೆನೇ? ನಾನು ಯಾರನ್ನಾದರೂ ನೋಯಿಸಿರುವೆನೇ? ವಂಚಿಸಿರುವೆನೇ? ನಾನು ತಪ್ಪುಮಾಡಲು ಯಾರಿಂದಲಾದರೂ ಹಣವನ್ನಾಗಲೀ ಪಾದರಕ್ಷೆಗಳನ್ನಾಗಲೀ ತೆಗೆದುಕೊಂಡಿರುವೆನೇ? ನಾನು ಕಾರ್ಯಗಳನ್ನು ಮಾಡಿರುವುದಾದರೆ ತಿಳಿಸಿ, ಅವುಗಳನ್ನು ಸರಿಪಡಿಸುತ್ತೇನೆ” ಎಂದು ಹೇಳಿದನು.
4 ಇಸ್ರೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮಿಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.
5 ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.
6 ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
7 ಇಲ್ಲಿ ನಿಂತುಕೊಂಡು ಕೇಳಿರಿ. ಯೆಹೋವನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ.
8 ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು.
9 ಆದರೆ ನಿಮ್ಮ ಪೂರ್ವಿಕರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟದ್ದರಿಂದ ಆತನು ಅವರನ್ನು ಸೀಸೆರನ ಗುಲಾಮರಾಗಲು ಬಿಟ್ಟುಬಿಟ್ಟನು. ಸೀಸೆರನು ಹಾಚೋರಿನ ಸೈನ್ಯಾಧಿಪತಿ. ನಂತರ ಯೆಹೋವನು ಅವರನ್ನು ಫಿಲಿಷ್ಟಿಯರ ಮತ್ತು ಮೋವಾಬ್ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು.
10 ಆದರೆ ನಿಮ್ಮ ಪೂರ್ವಿಕರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟು, ‘ನಾವು ಯೆಹೋವನಾದ ನಿನ್ನನ್ನು ಬಿಟ್ಟು ಸುಳ್ಳುದೇವರಾದ ಬಾಳನ ಮತ್ತು ಸುಳ್ಳುದೇವತೆಯಾದ ಅಷ್ಟೋರೆತಳ ಸೇವೆ ಮಾಡಿ ಪಾಪಮಾಡಿದ್ದೇವೆ. ಆದರೆ ಈಗ ನಮ್ಮನ್ನು ಶತ್ರುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.
11 “ಆದುದರಿಂದ ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ ಮತ್ತು ಸಮುವೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದಿದ್ದ ಶತ್ರುಗಳಿಂದ ಯೆಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ.
12 ಆದರೆ ಅಮ್ಮೋನಿಯರ ರಾಜನಾದ ನಾಹಾಷನು ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವುದನ್ನು ಕಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ.
13 ಇಗೋ, ನೀವು ಆಸೆಪಟ್ಟು ಆರಿಸಿದ ರಾಜನು ಇಲ್ಲಿರುವನು. ಯೆಹೋವನು ರಾಜನನ್ನು ನಿಮಗೆ ನೇಮಿಸಿದ್ದಾನೆ.
14 “ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯೆಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಜ್ಞೆಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯೆಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಆಳುವ ರಾಜನು ಅನುಸರಿಸಬೇಕು. ನೀವು ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ.
15 ಆದರೆ ನೀವು ಯೆಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಜ್ಞೆಗಳನ್ನು ವಿರೋಧಿಸಿದರೆ, ಆತನು ನಿಮ್ಮ ಪೂರ್ವಿಕರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವನು.
16 “ಈಗ ಯೆಹೋವನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಮಹತ್ಕಾರ್ಯಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ.
17 ಈಗ ಗೋಧಿಯ ಸುಗ್ಗಿಕಾಲ. ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳೆಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯೆಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.
18 ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು.
19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.
20 ಸಮುವೇಲನು, “ಭಯಪಡಬೇಡಿ. ಅದೇನೊ ನಿಜ. ನೀವು ಕೆಟ್ಟಕಾರ್ಯಗಳನ್ನೆಲ್ಲಾ ಮಾಡಿದಿರಿ. ಆದರೆ ಯೆಹೋವನ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸದಿರಿ. ಯೆಹೋವನ ಸೇವೆಯನ್ನು ಪೂರ್ಣಹೃದಯದಿಂದ ಮಾಡಿರಿ.
21 ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ” ಎಂದು ಉತ್ತರಿಸಿದನು.
22 “ಆದರೆ ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ. ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನರನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟನು. ಆದುದರಿಂದ ಆತನು ತನ್ನ ಮಹಾ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ತ್ಯಜಿಸುವುದಿಲ್ಲ.
23 ನಾನು ನಿಮಗಾಗಿ ಪ್ರಾರ್ಥಿಸದಿದ್ದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವನಾಗುತ್ತೇನೆ. ನಾನು ನಿಮಗೆ ಒಳ್ಳೆಯದೂ ಯೋಗ್ಯವೂ ಆಗಿರುವ ಮಾರ್ಗವನ್ನು ಉಪದೇಶಿಸುತ್ತೇನೆ.
24 ಆದರೆ ನೀವು ಯೆಹೋವನನ್ನು ಗೌರವಿಸಬೇಕು. ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವನ ಸೇವೆಯನ್ನು ನಿಜವಾಗಿಯೂ ಮಾಡಬೇಕು. ಆತನು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಳ್ಳಿರಿ.
25 ಆದರೆ ನೀವು ಮೊಂಡರಾಗಿ ಕೆಟ್ಟಕಾರ್ಯಗಳನ್ನು ಮಾಡಿದ್ದಾದರೆ ಯೆಹೋವನು ನಿಮ್ಮನ್ನು ಮತ್ತು ನಿಮ್ಮ ರಾಜನನ್ನು ನಾಶಪಡಿಸುತ್ತಾನೆ” ಎಂದು ಹೇಳಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×