Bible Versions
Bible Books

1 Samuel 5 (ERVKN) Easy to Read Version - Kannadam

1 ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಬೆನೆಜೆರಿನಿಂದ ಅಷ್ಡೋದಿಗೆ ತೆಗೆದುಕೊಂಡು ಹೋದರು.
2 ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ದಾಗೋನಿನ ಪಕ್ಕದಲ್ಲಿಟ್ಟರು.
3 ಅಷ್ಡೋದಿನ ಜನರು ಮಾರನೆಯ ದಿನ ಬೆಳಿಗ್ಗೆ ಎದ್ದಾಗ, ದಾಗೋನನ ವಿಗ್ರಹವು ಯೆಹೋವನ ಪೆಟ್ಟಿಗೆಯ ಮುಂದೆ ಬೋರಲಾಗಿ ಬಿದ್ದಿತ್ತು. ಅಷ್ಡೋದಿನ ಜನರು ದಾಗೋನ್ ವಿಗ್ರಹವನ್ನು ಅದರ ಸ್ಥಳದಲ್ಲಿ ಮತ್ತೆ ನಿಲ್ಲಿಸಿದರು.
4 ಆದರೆ ಮರುದಿನ ಬೆಳಿಗ್ಗೆ ಅಷ್ಡೋದಿನ ಜನರು ಎದ್ದಾಗ ದಾಗೋನ್ ವಿಗ್ರಹವು ನೆಲದ ಮೇಲೆ ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಬೋರಲಬಿದ್ದಿತ್ತು. ದಾಗೋನಿನ ತಲೆಯು ಮತ್ತು ಕೈಗಳು ಮುರಿದು ಹೊಸ್ತಿಲಿನ ಮೇಲೆ ಬಿದ್ದಿದ್ದವು; ದೇಹವು ಏಕಶಿಲೆಯಾಗಿ ಬಿದ್ದಿತ್ತು.
5 ಆದಕಾರಣವೇ ಇಂದಿಗೂ ಸಹ ಅಷ್ಡೋದಿನಲ್ಲಿ ದಾಗೋನನ ಗುಡಿಯನ್ನು ಪ್ರವೇಶಿಸುವ ಯಾಜಕರಾಗಲೀ ಇಲ್ಲವೆ ಇತರೆ ಜನರಾಗಲೀ ಹೊಸ್ತಿಲನ್ನು ತುಳಿಯುವುದಿಲ್ಲ.
6 ಅಷ್ಡೋದಿನ ಮತ್ತು ಅವರ ನೆರೆಹೊರೆಯ ಜನರ ಜೀವನವನ್ನು ಯೆಹೋವನು ಕಠಿಣಗೊಳಿಸಿದನು. ಯೆಹೋವನು ಅವರಿಗೆ ಹೆಚ್ಚು ತೊಂದರೆ ಕೊಟ್ಟನು. ಆತನು ಅವರಿಗೆ ಗಡ್ಡೆರೋಗವನ್ನು ಬರಮಾಡಿದನು. ಅಲ್ಲದೆ ಯೆಹೋವನು ಅವರ ಬಳಿಗೆ ಇಲಿಗಳನ್ನು ಕಳುಹಿಸಿದನು. ಇಲಿಗಳು ಅವರ ಹಡಗುಗಳಲ್ಲೆಲ್ಲಾ ಮತ್ತು ಭೂಮಿಯಲ್ಲೆಲ್ಲಾ ಹರಡಿಕೊಂಡವು. ನಗರದ ಜನರು ಬಹು ಭಯಗೊಂಡರು.
7 ಇದನ್ನೆಲ್ಲಾ ಕಂಡ ಅಷ್ಡೋದಿನ ಜನರು, “ಇಸ್ರೇಲರ ದೇವರ ಪವಿತ್ರ ಪೆಟ್ಟಿಗೆಯು ಇಲ್ಲಿರಬಾರದು. ಇಸ್ರೇಲರ ದೇವರು ನಮ್ಮನ್ನೂ ನಮ್ಮ ದೇವರಾದ ದಾಗೋನನನ್ನೂ ಬಾಧಿಸುತ್ತಿದ್ದಾನೆ” ಎಂದು ಹೇಳಿದರು.
8 ಅಷ್ಡೋದಿನ ಜನರು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳನ್ನು ಒಟ್ಟಿಗೆ ಸೇರಿಸಿ “ಇಸ್ರೇಲರ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಾವು ಏನು ಮಾಡೋಣ?” ಎಂದು ಕೇಳಿದರು. ಅಧಿಪತಿಗಳು, “ಇಸ್ರೇಲರ ಪವಿತ್ರ ಪೆಟ್ಟಿಗೆಯನ್ನು ‘ಗತ್’ ನಗರಕ್ಕೆ ಕಳುಹಿಸಿ” ಎಂದು ಹೇಳಿದರು. ಅಂತೆಯೇ, ಅವರು ಅದನ್ನು ಗತ್ ನಗರಕ್ಕೆ ಕಳುಹಿಸಿದರು.
9 ಆದರೆ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ‘ಗತ್’ಗೆ ಕಳುಹಿಸಿದ ನಂತರ ಯೆಹೋವನು ‘ಗತ್’ ನಗರವನ್ನು ದಂಡಿಸಿದನು. ಅಲ್ಲಿಯ ಜನರು ಬಹಳ ಭಯಗೊಂಡರು. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರಿಗೂ ದೇವರು ತೊಂದರೆ ಮಾಡಿದನು. ಗತ್ ಜನರಿಗೂ ದೇವರು ಗಡ್ಡೆರೋಗವನ್ನು ಬರಮಾಡಿದನು.
10 ಆದುದರಿಂದ ಫಿಲಿಷ್ಟಿಯರು ದೇವರ ಪವಿತ್ರ ಪೆಟ್ಟಿಗೆಯನ್ನು ಎಕ್ರೋನಿಗೆ ಕಳುಹಿಸಿದರು. ದೇವರ ಪವಿತ್ರ ಪೆಟ್ಟಿಗೆಯು ಎಕ್ರೋನಿಗೆ ಬಂದಾಗ, ಅಲ್ಲಿನ ಜನರು, “ಇಸ್ರೇಲರ ದೇವರನ್ನು ನಮ್ಮ ನಗರವಾದ ಎಕ್ರೋನಿಗೆ ನೀವೇಕೆ ತರುತ್ತಿರುವಿರಿ? ನಮ್ಮನ್ನೂ ನಮ್ಮ ಜನರನ್ನೂ ನೀವು ಕೊಲ್ಲಬೇಕೆಂದಿರುವಿರಾ?” ಎಂದು ಆಕ್ಷೇಪಿಸಿದರು.
11 ಎಕ್ರೋನಿನ ಜನರು ಫಿಲಿಷ್ಟಿಯರ ಅಧಿಪತಿಗಳನ್ನೆಲ್ಲಾ ಒಟ್ಟಿಗೆ ಸೇರಿಸಿ, “ಇಸ್ರೇಲರ ದೇವರ ಪವಿತ್ರಪೆಟ್ಟಿಗೆಯು ನಮ್ಮನ್ನೂ ನಮ್ಮ ಜನರನ್ನೂ ಕೊಲ್ಲುವುದಕ್ಕೆ ಮೊದಲೇ ಅದನ್ನು ಅದರ ಸ್ವಸ್ಥಳಕ್ಕೆ ಕಳುಹಿಸಿ” ಎಂದು ಹೇಳಿದರು. ಎಕ್ರೋನಿನ ಜನರು ಬಹಳ ಹೆದರಿಕೊಂಡಿದ್ದರು. ದೇವರು ಅಲ್ಲಿಯ ಜನರ ಜೀವನವನ್ನು ಬಹು ಕಠಿಣಗೊಳಿಸಿದ್ದನು.
12 ಬಹಳ ಜನರು ಸತ್ತರು; ಸಾಯದೆ ಉಳಿದ ಜನರಿಗೆ ಗಡ್ಡೆರೋಗವು ಬಂದಿತು. ಅವರ ಗೋಳಾಟವು ಆಕಾಶಮಂಡಲವನ್ನು ಮುಟ್ಟಿತ್ತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×