Bible Versions
Bible Books

2 Corinthians 13 (ERVKN) Easy to Read Version - Kannadam

1 ನಾನು ಮತ್ತೆ ನಿಮ್ಮ ಬಳಿಗೆ ಮೂರನೆ ಸಾರಿ ಬರುತ್ತೇನೆ. ನೆನಪಿಟ್ಟುಕೊಳ್ಳಿರಿ, “ಪ್ರತಿಯೊಂದು ದೂರಿಗೂ ಇಬ್ಬರಾಗಲಿ ಮೂವರಾಗಲಿ ಸಾಕ್ಷಿಗಳಿದ್ದು ತಮಗೆ ಗೊತ್ತಿರುವುದಾಗಿ ಮತ್ತು ಅದು ಸತ್ಯವೆಂದು” ಹೇಳಬೇಕು.
2 ನಾನು ನಿಮ್ಮ ಬಳಿಗೆ ಎರಡನೆ ಸಲ ಬಂದಿದ್ದಾಗ ಪಾಪಕ್ಕೆ ಒಳಗಾಗಿದ್ದವರನ್ನು ಮತ್ತು ಉಳಿದವರೆಲ್ಲರನ್ನು ಎಚ್ಚರಿಸಿದೆನು. ಈಗ ನಾನು ದೂರದಲ್ಲಿದ್ದೇನೆ. ಪಾಪಕ್ಕೆ ಒಳಗಾಗಿರುವ ಎಲ್ಲರಿಗೂ ನಾನು ಕೊಡುವ ಎಚ್ಚರಿಕೆ ಏನಂದರೆ, ನಾನು ನಿಮ್ಮ ಬಳಿಗೆ ಬಂದಾಗ, ನಿಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು.
3 ಕ್ರಿಸ್ತನು ನನ್ನ ಮೂಲಕ ಮಾತಾಡುತ್ತಿದ್ದಾನೆ ಎಂಬುದಕ್ಕೆ ನಿಮಗೆ ಸಾಕ್ಷಿಬೇಕು. ನನಗಿರುವ ಸಾಕ್ಷಿ ಏನಂದರೆ, ಕ್ರಿಸ್ತನು ನಿಮ್ಮನ್ನು ದಂಡಿಸುವುದರಲ್ಲಿ ಬಲಹೀನನಲ್ಲ. ಕ್ರಿಸ್ತನು ನಿಮ್ಮ ಮಧ್ಯದಲ್ಲಿ ಬಲಿಷ್ಠನಾಗಿದ್ದಾನೆ.
4 ಕ್ರಿಸ್ತನು ಶಿಲುಬೆಯ ಮೇಲೆ ಕೊಲ್ಲಲ್ಪಟ್ಟಾಗ ಬಲಹೀನನಾಗಿದ್ದನು ಎಂಬುದೇನೊ ನಿಜ. ಆದರೆ ಈಗ ಆತನು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾನೆ. ಅಲ್ಲದೆ ನಾವು ಕ್ರಿಸ್ತನಲ್ಲಿ ಬಲಹೀನರೆಂಬುದೂ ನಿಜ. ಆದರೆ ನಾವು ನಿಮಗೋಸ್ಕರವಾಗಿ ಕ್ರಿಸ್ತನಲ್ಲಿ ದೇವರ ಶಕ್ತಿಯಿಂದ ಜೀವಿಸುತ್ತೇವೆ.
5 ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ.
6 ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ.
7 ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ.
8 ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ.
9 ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ.
10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.
11 ಸಹೋದರ ಸಹೋದರಿಯರೇ, ನಿಮಗೆ ವಂದನೆಗಳು. ಪರಿಪೂರ್ಣರಾಗಿರಲು ಪ್ರಯತ್ನಿಸಿ. ನಾನು ಕೇಳಿಕೊಂಡ ಕಾರ್ಯಗಳನ್ನು ಮಾಡಿರಿ. ಒಂದೇ ಮನಸ್ಸು ಉಳ್ಳವರಾಗಿದ್ದು ಸಮಾಧಾನದಿಂದ ಜೀವಿಸಿರಿ. ಆಗ ಪ್ರೀತಿಸ್ವರೂಪನೂ ಶಾಂತಿದಾಯಕನೂ ಆದ ದೇವರು ನಿಮ್ಮೊಂದಿಗೆ ಇರುವನು.
12 ನೀವು ಒಬ್ಬರನ್ನೊಬ್ಬರು ವಂದಿಸುವಾಗ ಪವಿತ್ರವಾದ ಮುದ್ದಿಟ್ಟು ವಂದಿಸಿರಿ.
13 ದೇವರ ಪವಿತ್ರ ಜನರೆಲ್ಲರೂ ನಿಮಗೆ ವಂದನೆ ತಿಳಿಸಿದ್ದಾರೆ.
14 ನಮ್ಮ ಪ್ರಭುವಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರೊಂದಿಗಿರಲಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×