Bible Versions
Bible Books

Deuteronomy 8 (ERVKN) Easy to Read Version - Kannadam

1 “ನಾನು ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ.
2 ನಿಮ್ಮ ದೇವರಾದ ಯೆಹೋವನು ನಲವತ್ತು ವರ್ಷಗಳ ಕಾಲದಲ್ಲಿ ನಿಮ್ಮನ್ನು ಮೊದಲು ಅರಣ್ಯ ಪ್ರಯಾಣವನ್ನು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು.
3 ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು.
4 ಆತನು ನಿಮ್ಮನ್ನು ಕಾಪಾಡಿ ಸಂರಕ್ಷಿಸಿದ್ದರಿಂದ ನಲವತ್ತು ವರ್ಷ ನಿಮ್ಮ ಬಟ್ಟೆಗಳು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದಿಕೊಳ್ಳಲಿಲ್ಲ.
5 ಇವೆಲ್ಲವನ್ನು ನಿಮ್ಮ ದೇವರಾದ ಯೆಹೋವನು ನಿಮಗೆ ಮಾಡಿದನು. ತಂದೆಯು ತನ್ನ ಮಗನನ್ನು ತಿದ್ದಿ ಶಿಸ್ತಿನಲ್ಲಿ ನಡೆಸುವಂತೆ ದೇವರು ನಿಮ್ಮೊಂದಿಗೆ ವರ್ತಿಸಿದನು.
6 “ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ.
7 ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು.
8 ದೇಶವು ಗೋಧಿ, ಜವೆಗೋಧಿ, ದ್ರಾಕ್ಷಾಲತೆಗಳು, ಅಂಜೂರ, ದಾಳಿಂಬೆ ಮರಗಳಿಂದ ತುಂಬಿದೆ. ಅಲ್ಲಿ ಎಣ್ಣೆ, ಜೇನುತುಪ್ಪ ಧಾರಾಳವಾಗಿ ಸಿಗುವವು.
9 ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ.
10 ನಿಮಗೆ ಬೇಕಾದಷ್ಟು ಆಹಾರ ಇರುವುದು. ಆಗ ನೀವು ನಿಮಗೆ ಉತ್ತಮ ದೇಶವನ್ನು ಕೊಟ್ಟಿರುವ ಯೆಹೋವ ದೇವರನ್ನು ಸ್ತುತಿಸುವಿರಿ.
11 “ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡದಂತೆ ಎಚ್ಚರವಾಗಿರಿ. ನಾನು ಕೊಡುವ ವಿಧಿನಿಯಮಗಳಿಗೆ ವಿಧೇಯರಾಗಿರಿ.
12 ಆಗ ನಿಮಗೆ ಸಮೃದ್ಧಿಯಾಗಿ ಆಹಾರವಿರುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ.
13 ನಿಮ್ಮ ಹಿಂಡು ವೃದ್ಧಿಯಾಗುವುದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೊಂದು ವಿಷಯದಲ್ಲೂ ಸಮೃದ್ಧಿಯನ್ನು ಕಾಣುವಿರಿ.
14 ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತು ಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು.
15 ಆತನು ನಿಮ್ಮನ್ನು ಭಯಂಕರವಾದ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು.
16 ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು.
17 ‘ಇವೆಲ್ಲಾ ನಾವೇ ಸಂಪಾದಿಸಿದ್ದು, ನಮ್ಮ ಶಕ್ತಿಸಾಮರ್ಥ್ಯಗಳಿಂದ ಇವುಗಳನ್ನು ನಾವು ಪಡೆದೆವು’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ.
18 ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.
19 “ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿ. ಅನ್ಯದೇವರುಗಳನ್ನು ಅನುಸರಿಸಬೇಡಿ. ಅವುಗಳನ್ನು ಪೂಜಿಸಬೇಡಿ; ಅವುಗಳ ಸೇವೆ ಮಾಡಬೇಡಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ.
20 ಯೆಹೋವನು ನಿಮಗೋಸ್ಕರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×