Bible Versions
Bible Books

Esther 7 (ERVKN) Easy to Read Version - Kannadam

1 ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು.
2 ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.
3 ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ.
4 ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.
5 ಆಗ ರಾಜನು ಎಸ್ತೇರಳಿಗೆ “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?’ ಎಂದು ಕೇಳಿದನು.
6 ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಕೆಟ್ಟ ಹಾಮಾನನೇ” ಎಂದು ಹೇಳಿದಳು. ಆಗ ಹಾಮಾನನು ಭಯದಿಂದ ನಡುಗಿದನು.
7 ಅರಸನು ಕೋಪೋದ್ರಿಕ್ತನಾಗಿ, ಪಾನಪಾತ್ರೆಯನ್ನು ಅಲ್ಲಿಯೇ ಬಿಟ್ಟು ಎದ್ದು ಹೂತೋಟಕ್ಕೆ ಹೋದನು. ಹಾಮಾನನು ಕೋಣೆಯಲ್ಲಿಯೇ ಉಳಿದು ತನ್ನ ಪ್ರಾಣವನ್ನು ಉಳಿಸಬೇಕೆಂದು ಎಸ್ತೇರ್ ರಾಣಿಯನ್ನು ಬೇಡುತ್ತಿದ್ದನು. ಯಾಕಂದರೆ ರಾಜನು ತನ್ನನ್ನು ಕೊಲ್ಲಲು ತೀರ್ಮಾನಿಸಿರುವುದು ಅವನಿಗೆ ಅರಿವಾಯಿತು.
8 ಅರಸನು ಹೂತೋಟದಿಂದ ಹಿಂದಿರುಗಿ ಕೋಣೆಯೊಳಗೆ ಬಂದಾಗ ಹಾಮಾನನು ಆಸನದ ಮೇಲೆ ಒರಗಿದ್ದ ಎಸ್ತೇರ್ ರಾಣಿಯ ಆಸನದ ಮೇಲೆ ಬೀಳುವದನ್ನು ಕಂಡನು. ಅರಸನು ಸಿಟ್ಟು ತುಂಬಿದವನಾಗಿ, “ನನ್ನ ಮುಂದೆಯೇ ನೀನು ರಾಣಿಯ ಮೇಲೆ ಕೈಮಾಡುತ್ತೀಯಾ?” ಎಂದು ಕೇಳಿದನು.
9 ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು. ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.
10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×