Bible Versions
Bible Books

Isaiah 34 (ERVKN) Easy to Read Version - Kannadam

1 ಎಲ್ಲಾ ಜನಾಂಗಗಳೇ, ಹತ್ತಿರ ಬಂದು ಕೇಳಿರಿ; ಜನಗಳೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿರಿ. ಭೂಮಿಯೂ ಭೂಮಿಯ ಮೇಲಿರುವ ಸಮಸ್ತವೂ ಅವುಗಳಿಗೆ ಕಿವಿಗೊಡಬೇಕು. ಲೋಕವೂ ಅದರಲ್ಲಿರುವ ಸಮಸ್ತವೂ ಆಲಿಸಲಿ.
2 ಯೆಹೋವನು ಎಲ್ಲಾ ದೇಶಗಳವರ ಮೇಲೆಯೂ ಅವುಗಳ ಸೈನ್ಯದ ಮೇಲೆಯೂ ಕೋಪಗೊಂಡಿದ್ದಾನೆ. ಯೆಹೋವನು ಅವರೆಲ್ಲರನ್ನು ನಾಶ ಮಾಡುತ್ತಾನೆ. ಅವರೆಲ್ಲರೂ ಕೊಲ್ಲಲ್ಪಡುವಂತೆ ಮಾಡುತ್ತಾನೆ.
3 ಅವರ ಹೆಣಗಳು ಹೊರಗೆ ಬಿಸಾಡಲ್ಪಡುವವು. ದುರ್ವಾಸನೆಯು ಹರಡುವದು, ರಕ್ತವು ಪರ್ವತದಿಂದ ಹರಿಯುವುದು.
4 ಆಕಾಶವು ಸುರುಳಿಯಂತೆ ಮುಚ್ಚಿಹೋಗುವದು. ನಕ್ಷತ್ರಗಳು ದ್ರಾಕ್ಷಾಲತೆಯ ಒಣಗಿದ ಎಲೆಗಳಂತೆಯೂ ಅಂಜೂರದ ಒಣಗಿದ ಎಲೆಗಳಂತೆಯೂ ಉದುರಿಬೀಳುವವು. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಕರಗಿಹೋಗುವವು.
5 “ಆಕಾಶದಲ್ಲಿರುವ ನನ್ನ ಖಡ್ಗವು ರಕ್ತದಲ್ಲಿ ಮುಳುಗಿದಾಗ ಇವೆಲ್ಲಾ ಸಂಭವಿಸುವದು” ಎಂದು ಯೆಹೋವನು ಅನ್ನುತ್ತಾನೆ. ಯೆಹೋವನ ಖಡ್ಗವು ಎದೋಮನ್ನು ತುಂಡರಿಸುವುದು. ಆತನು ಜನರನ್ನು ದೋಷಿಗಳೆಂದು ನ್ಯಾಯ ತೀರಿಸಿದ್ದಾನೆ. ಆದುದರಿಂದ ಅವರು ಸಾಯಬೇಕು.
6 ಆತನು ಬೊಚ್ರದಲ್ಲಿ ಮತ್ತು ಎದೋಮಿನಲ್ಲಿ ಕೊಲ್ಲುವ ಸಮಯವನ್ನು ನಿರ್ಧರಿಸಿರುತ್ತಾನೆ. ಯೆಹೋವನ ಖಡ್ಗವು ವಪೆಯಿಂದಲೂ, ಕುರಿಹೋತಗಳ ರಕ್ತದಿಂದಲೂ, ಟಗರುಗಳ ಪಿತ್ತಕೋಶದ ಕೊಬ್ಬಿನಿಂದಲೂ ರಕ್ತಭರಿತವಾಗಿದೆ.
7 ಟಗರುಗಳು, ದನಕುರಿಗಳು ಮತ್ತು ಬಲವಾದ ಹೋರಿಗಳು ಕೊಲ್ಲಲ್ಪಡುವವು. ಭೂಮಿಯು ಅವುಗಳ ರಕ್ತದಿಂದ ತುಂಬಿಹೋಗುವದು. ಅಲ್ಲಿನ ಧೂಳು ಅವುಗಳ ಕೊಬ್ಬಿನಿಂದ ಆವೃತವಾಗಿದೆ.
8 ಇದು ನೆರವೇರುವುದು, ಯಾಕೆಂದರೆ ದೇವರು ದಂಡನೆಗಾಗಿ ಸಮಯವನ್ನು ಆರಿಸಿಕೊಂಡಿದ್ದಾನೆ. ಜನರು ಚೀಯೋನಿನಲ್ಲಿ ಮಾಡಿದ ಕಾರ್ಯಗಳಿಗೆ ದಂಡನೆಯನ್ನು ಅನುಭವಿಸುವುದಕ್ಕಾಗಿ ಆತನು ಒಂದು ವರ್ಷವನ್ನು ಆರಿಸಿಕೊಂಡಿದ್ದಾನೆ.
9 ಎದೋಮಿನ ನದಿಗಳು ಕರಗಿರುವ ರಾಳದಂತಿರುವದು. ಅದರ ನೆಲವು ಸುಡುವ ಗಂಧಕದಂತಿರುವದು.
10 ಬೆಂಕಿಯು ಹಗಲಿರುಳು ಉರಿಯುವದು. ಯಾರಿಗೂ ಅದನ್ನು ನಂದಿಸಲು ಸಾಧ್ಯವಿಲ್ಲ. ಎದೋಮಿನಿಂದ ಹೊಗೆಯು ಯಾವಾಗಲೂ ಮೇಲಕ್ಕೇರುವದು. ದೇಶವು ನಿತ್ಯಕಾಲಕ್ಕೂ ನಾಶವಾಗಿ ಹೋಗುವದು. ದೇಶದೊಳಗೆ ಯಾರೂ ಪ್ರಯಾಣ ಮಾಡುವದಿಲ್ಲ.
11 ಪಕ್ಷಿಗಳು ಮತ್ತು ಚಿಕ್ಕಪ್ರಾಣಿಗಳೂ ಅದರಲ್ಲಿ ವಾಸಿಸುವವು. ಗೂಬೆಗಳೂ ಕಾಗೆಗಳೂ ಅಲ್ಲಿ ವಾಸಿಸುವವು. ಅದು ‘ಬೆಂಗಾಡಿನ ಮರುಭೂಮಿ’ ಎಂದು ಕರೆಯಲ್ಪಡುವದು.
12 ಅದರ ನಾಯಕರೂ ಸ್ವತಂತ್ರರೂ ಇಲ್ಲವಾಗುವರು; ಯಾಕೆಂದರೆ ಅವರಿಗೆ ಆಳಲಿಕ್ಕೆ ಅಲ್ಲಿ ಏನೂ ಇರದು.
13 ಮುಳ್ಳುಗಿಡಗಳು ಅಲ್ಲಿಯ ಸುಂದರವಾದ ಬಂಗಲೆಗಳಲ್ಲಿ ಬೆಳೆಯುವವು. ಕಾಡುನಾಯಿಗಳೂ ಗೂಬೆಗಳೂ ಮನೆಗಳಲ್ಲಿ ವಾಸಿಸುವವು. ಕಾಡುಪ್ರಾಣಿಗಳು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವವು. ಅಲ್ಲಿ ಬೆಳೆಯುವ ಎತ್ತರವಾದ ಹುಲ್ಲುಗಳಲ್ಲಿ ಉಷ್ಟ್ರಪಕ್ಷಿಗಳು ವಾಸಮಾಡುವವು.
14 ಕಾಡುಬೆಕ್ಕುಗಳು ಮತ್ತು ಕತ್ತೆಕಿರುಬಗಳು ಅಲ್ಲಿ ವಾಸಮಾಡುವವು. ಕಾಡಿನ ಹೋತಗಳು ತಮ್ಮ ಸ್ನೇಹಿತರನ್ನು ಕರೆಯುವವು. ರಾತ್ರಿಪ್ರಾಣಿಗಳು ಅಲ್ಲಿ ವಿಶ್ರಮಿಸಿಕೊಳ್ಳುವವು.
15 ಅಲ್ಲಿ ಹಾವುಗಳು ತಮ್ಮ ಮನೆಗಳನ್ನು ಮಾಡಿಕೊಳ್ಳುವವು. ಅಲ್ಲಿಯೇ ಮೊಟ್ಟೆಗಳನ್ನಿಡುವವು, ಮೊಟ್ಟೆಗಳು ಒಡೆದಾಗ ಸಣ್ಣ ಹಾವುಮರಿಗಳು ಕತ್ತಲೆಯ ಜಾಗದಲ್ಲಿ ಹರಿದಾಡುವವು. ಹೆಂಗಸರು ಪರಸ್ಪರ ಸಂಧಿಸಿ ಮಾತನಾಡುವಂತೆ ಸತ್ತಪ್ರಾಣಿಗಳ ಮಾಂಸವನ್ನು ತಿನ್ನುವ ಪಕ್ಷಿಗಳು ಒಟ್ಟಾಗಿ ಸೇರುವವು.
16 ಯೆಹೋವನ ಸುರುಳಿಯನ್ನು ನೋಡಿರಿ. ಅಲ್ಲಿ ಬರೆದಿರುವದನ್ನು ಓದಿರಿ. ಅದರಲ್ಲಿ ಯಾವದೂ ಕಳೆದುಹೋಗಿಲ್ಲ. ಪ್ರಾಣಿಗಳು ಒಟ್ಟಾಗಿ ವಾಸಿಸುವವೆಂದು ಸುರುಳಿಯಲ್ಲಿ ಬರೆದದೆ. ಅವುಗಳನ್ನು ಒಟ್ಟಾಗಿ ಸೇರಿಸುತ್ತೇನೆಂದು ದೇವರು ಹೇಳಿದ್ದಾನೆ. ಆದುದರಿಂದ ಯೆಹೋವನ ಆತ್ಮವು ಅವುಗಳನ್ನು ಒಟ್ಟಾಗಿ ಸೇರಿಸುವದು.
17 ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರುಷವರುಷವೂ ಅವುಗಳು ಅಲ್ಲಿಯೇ ವಾಸಮಾಡುವವು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×